ಕಾಂಗ್ರೆಸ್ ಹಿರಿಯ ನಾಯಕ ‘ಶಾಮನೂರು ಶಿವಶಂಕರಪ್ಪ’ ನಿಧನ

ಬೆಂಗಳೂರು :ಹಿರಿಯ ರಾಜಕಾರಣಿ ಹಾಲಿ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. 94 ವರ್ಷದ ಶಾಮನೂರು ಶಿವಶಂಕರಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ.94ನೇ ವಯಸ್ಸಿನಲ್ಲೂ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ, ಹಾಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಶಾಮನೂರು ಕಲ್ಲಪ್ಪ ಹಾಗೂ ಸಾವಿತ್ರಮ್ಮ ದಂಪತಿಯ ಪುತ್ರರಾಗಿದ್ದ ಶಾಮನೂರು ಶಿವಶಂಕರಪ್ಪ, 1931ರ ಜೂನ್ 16ರಂದು ಜನಿಸಿದ್ದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪಡೆದಿದ್ದ ಶಿವಶಂಕರಪ್ಪ, DRM ಸೈನ್ಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದಿದ್ದರು ಅಕ್ಕಿ ವ್ಯಾಪಾರ ಮಾಡುತ್ತಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.

ಶ್ಯಾಮನೂರು ಶಿವಶಂಕರಪ್ಪ ಅವರು 1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನ ಪ್ರಾರಂಭಿಸಿದ್ದರು. 1971ರಲ್ಲಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದರು. ದಶಕಗಳ ಕಾಲ ರಾಜ್ಯ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ ಶಿವಶಂಕರಪ್ಪ ಅವರು, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕಾಂಗ್ರೆಸ್​ನಲ್ಲಿ ದಶಕಗಳ ಕಾಲ ರಾಜಕಾರಣ ಅನುಭವ ಹೊಂದಿದ್ದ ಶಾಮನೂರು ಶಿವಶಂಕರಪ್ಪ ಅವರು, ತಮ್ಮ 60ನೇ ವಯಸ್ಸಿದಲ್ಲಿ ಅಂದರೆ 1994ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ‌ ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಬಳಿಕ ದಾವಣಗೆರೆಯನ್ನ ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡ ಅವರು, 2004ರಲ್ಲಿ ಮತ್ತೇ ಅದೇ ಕ್ಷೇತ್ರದಿಂದ ಗೆದ್ದು ಬೀಗಿದ್ರು. ಬಳಿಕ 2008‌ರಲ್ಲಿ ಕ್ಷೇತ್ರ ವಿಂಗಡಣೆಯಾದಾಗ 2008, 2013 ಹಾಗೂ 2018, 2023 ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದರು.

ಶಾಮನೂರು ಶಿವಶಂಕರಪ್ಪನವರಿಗೆ ಒಟ್ಟು 7 ಜನ ಮಕ್ಕಳು. ಅವರ ಪುತ್ರ, ಸಚಿವ ಎಸ್‌ಎಸ್ ಮಲ್ಲಿಕಾರ್ಜುನ ಬೆಳಗ್ಗೆ ತಿರುಪತಿಗೆ ತೆರಳಿದ್ದು, ಇದೀಗ ತಂದೆ ನಿಧನದ ಸುದ್ದಿ ತಿಳಿದು ವಾಪಸ್ ಆಗುತ್ತಿದ್ದಾರೆ. ಇನ್ನು ಮತ್ತೊಬ್ಬ ಮಗ ಎಸ್‌ಎಸ್ ಗಣೇಶ್ ಅಸ್ಸಾಂಗೆ ಹೋಗಿದ್ದು, ಕುಟುಂಬಸ್ಥರಿಂದ ಮಾಹಿತಿ ರವಾನೆಯಾಗಿದೆ. ಅತ್ತ ಇಬ್ಬರು ಹೆಣ್ಣುಮಕ್ಕಳು ವಿದೇಶದಲ್ಲಿದ್ದು, ಕುಟಂಬದಿಂದ ಮಾಹಿತಿ ನೀಡಲಾಗಿದೆ. ಇನ್ನು ನಾಳೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *