– ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಚ್ಚಿದ ಶಾಲೆ
– ಶಾಲೆ ಮುಚ್ಚಿದಾಗಿನಿಂದ ಊಟವೂ ಇಲ್ಲ, ರೇಷನ್ನೂ ಇಲ್ಲ
ಬಳ್ಳಾರಿ: ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಹೇರಿದಾಗಿನಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಇದರಿಂದ ಮಕ್ಕಳ ಮಧ್ಯಾಹ್ನದ ಊಟಕ್ಕೆ ಕತ್ತರಿ ಬಿದ್ದಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾಗೋ ಭೀತಿ ಕಾಡುತ್ತಿದೆ.
ಹೌದು, ಕೊರೊನಾದಿಂದ ವಿಶ್ವವೇ ಅಲ್ಲೋಲ, ಕಲ್ಲೋಲ ಆಗಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಬಿಸಿಯೂಟಕ್ಕೆ ಕತ್ತರಿ ಬಿದ್ದಿದ್ದು, ಬೆಳಗ್ಗೆಯೇ ಪೋಷಕರು ಕೆಲಸಕ್ಕೆ ಹೋದ್ರೆ ಇತ್ತ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಹೊಟ್ಟೆ ತುಂಬಾ ಸಿಗುತ್ತದೆ ಎಂಬ ಭರವಸೆ ಇತ್ತು. ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿದ್ದು, ಬಿಸಿಯೂಟ ನಿಲ್ಲಿಸಲಾಗಿದೆ.
ಬಿಸಿಯೂಟದ ಬದಲು, ಪ್ರತಿ ಮಗುವಿಗೆ ತಿಂಗಳ ರೇಷನ್ ಕೊಡಬೇಕೆಂಬ ನಿಯಮ ಇದ್ರೂ ಪಾಲನೆಯಾಗುತ್ತಿಲ್ಲ. ಕಳೆದ ಮೂರು ತಿಂಗಳುಗಳಿಂದ ಮಕ್ಕಳಿಗೆ ರೇಷನ್ ಇಲ್ಲ, ಹೊಟ್ಟೆ ತುಂಬ ಊಟವೂ ಇಲ್ಲಾ. ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಟ್ಟು ಮೂರೂವರೇ ಲಕ್ಷಕ್ಕೂ ಅಧಿಕ ಮಕ್ಕಳಿದ್ದು,ಲಾಕ್ ಡೌನ್ ಸಮಯದಲ್ಲಿ ಒಂದಿಷ್ಟು ಅಕ್ಕಿ, ಗೋಧಿ ಕೊಟ್ಟಿದ್ದು ಬಿಟ್ರೆ, ಈಗ ಆ ರೇಷನ್ ಕೂಡ ಇಲ್ಲದಂತಾಗಿದ್ದು, 1 ರಿಂದ 5ನೇ ತರಗತಿಯ ಮಕ್ಕಳಿಗೆ ಪ್ರತಿನಿತ್ಯ 100 ಗ್ರಾಂ, 6 ರಿಂದ 10 ನೇ ತರಗತಿ ಮಕ್ಕಳಿಗೆ 150 ಗ್ರಾಂ ಅಕ್ಕಿ ನೀಡಲಾಗುತ್ತದೆ. ಇನ್ನೂ ಒಂದು ಮಗುವಿಗೆ 5 ಕೆಜಿಯಂತೆ ತಿಂಗಳಿಗೆ ನೀಡಬೇಕು, ಈಗ ಸದ್ಯ ಮೂರು ತಿಂಗಳಿಂದ ಇದೆಲ್ಲಾ ಏನೂ ಇಲ್ಲದಂತಾಗಿದೆ. ಬಡ ಮಕ್ಕಳಿಗೆ ಇದ್ರಿಂದ ಅಪೌಷ್ಟಿಕತೆ ಕಾಡುವ ಭೀತಿ ಎದುರಾಗಿದೆ. ಲಾಕ್ ಡೌನ್ ನಂತರ ಕೂಲಿ ಕೆಲಸವೂ ಇಲ್ಲದೇ ಕೆಲ ಪೋಷಕರು ಮನೆಯಲ್ಲಿ ಕಾಲ ಕಳೆಯುವಂತಾಗಿದ್ದು, ಮನೆಯಲ್ಲಿರೋ ರೊಟ್ಟಿ ಚಟ್ನಿ ತಿಂದು ಬದುಕುತ್ತಿದ್ದು, ಆ ಮಕ್ಕಳಿಗೂ ಅದೇ ರೊಟ್ಟಿ, ಚಟ್ನಿ ನೀಡಲಾಗುತ್ತದೆ. ಮಕ್ಕಳ ಹಿತದೃಷ್ಟಿಯಿಂದ, ಅವರ ಪೌಷ್ಟಿಕಾಂಶದ ಗುಣಮಟ್ಟ ಹೆಚ್ಚಿಸಲು ಪೋಷಕರು ಒತ್ತಾಯಿಸಿದ್ದಾರೆ.