ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಕಡ್ಡಾಯವಾಗಿ ಕೊಡಬೇಕು: ಸರ್ಕಾರ ಆದೇಶ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ವಿತರಿಸದ ಆರೋಪ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರ ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಕೊಡಬೇಕು. ಅದರ ಬದಲಿಗೆ ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತಿಲ್ಲ ಎಂದು ಆದೇಶಿಸಿದೆ.

ಸರ್ಕಾರಿ ಶಾಲೆಯ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ಮೊಟ್ಟೆ ಬೇಡವೆಂದರೆ ಮಾತ್ರ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಚಿಕ್ಕಿ ನೀಡುವಂತೆ ಸೂಚಿಸಿದೆ.

ಇದನ್ನು ಓದಿ: ಬಿಸಿಯೂಟದಲ್ಲಿ ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ವಿವಾದ : ಆಹಾರ ಹಕ್ಕು ನಿಷೇಧದ ಹಿನ್ನೋಟ

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್ ವಿಶಾಲ್ ಅವರು ಈ ಆದೇಶವನ್ನು ನೀಡಿದ್ದು, ಮಧ್ಯಾಹ್ನದ ಊಟದ ಕುರಿತು ವಿವಿಧ ಮೂಲಗಳಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ. ಹೀಗಾಗಿ ಸುತ್ತೋಲೆ ಹೊರಡಿಸಿದ್ದೇವೆ. ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಶಾಲೆಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಕೆಲವು ನಿಯಮಗಳನ್ನು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.

ಪ್ರತಿದಿನ ಮೊಟ್ಟೆಯ ಬೆಲೆ ಬದಲಾಗುತ್ತದೆ, ಮೊಟ್ಟೆ ದರ ಹೆಚ್ಚಳವಾದರೆ, ಸೂಕ್ತ ಕ್ರಮಕೈಗೊಂಡು ವಿತರಿಸಲು ಎಸ್‌ಡಿಎಂಸಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಮೊಟ್ಟೆ ವಿತರಣೆ ಯೋಜನೆ ಸ್ಥಗಿತಗೊಳಿಸಬಾರದು. ಪ್ರಸ್ತುತ ಸನ್ನಿವೇಶದಲ್ಲಿ ದರ ಪರಿಷ್ಕರಣೆಗೆ ಅವಕಾಶವಿಲ್ಲದ ಕಾರಣ ಮೊಟ್ಟೆ ಖರೀದಿಯಲ್ಲಿ ದರ ಮೀರಿದ್ದರೆ, ತಗಲುವ ವೆಚ್ಚ  ಹಿಂದಿನ ದಿನಗಳಲ್ಲಿ ದರ ಕಡಿಮೆ ಇದ್ದ ವೇಳೆ ಉಳಿದಿರುವ ಮೊತ್ತ ಅಥವಾ ಶಾಲಾ ಎಸ್‌ಡಿಎಂಸಿ ಸಮಿತಿಯ ಹಂತದಲ್ಲಿ ಲಭ್ಯವಿರುವ ಅನುದಾನದಿಂದ ಭರಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನು ಓದಿ: ‘ಮೊಟ್ಟೆ ಬ್ಯಾಡ ಅಂತಾ ಹೇಳೋಕೆ’ ನೀವ್ಯಾರು? ವಿದ್ಯಾರ್ಥಿಗಳ ಆಕ್ರೋಶ

ಮೊಟ್ಟೆಯ ದರ ವೆಚ್ಚ ಭರಿಸಲಾಗದೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಯನ್ನು ನಿಲ್ಲಿಸಬಾರದು ಎಂದು ಕರ್ನಾಟಕ ಶಿಕ್ಷಣ ಇಲಾಖೆ ಶಾಲೆಗಳಿಗೆ ತಿಳಿಸಿದೆ. ಹೀಗಿರುವಾಗ  ಮೊಟ್ಟೆಯ ಬೆಲೆ ಏರಿಕೆಯಾಗಿರುವುದರಿಂದ ಶಾಲೆಗಳ ಬಜೆಟ್ ಅನ್ನು ಮೀರಿಸುವಂತೆ ಮಾಡಿದೆ. ಇದರ ಬಗ್ಗೆ ಶಾಲೆಗಳು ಇಲಾಖೆಗೆ ಮನವಿ ಮಾಡಿದೆ.

ಕಲ್ಯಾಣ ಕರ್ನಾಟಕದ ಬೀದರ್, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರಗಿ, ವಿಜಯನಗರ, ರಾಯಚೂರು, ಧಾರವಾಡ ಜಿಲ್ಲೆಯಲ್ಲಿ ಮೊಟ್ಟೆ ನೀಡದಿರುವ ಬಗ್ಗೆ ಸಾಕಷ್ಟು ದೂರುಗಳಿವೆ ಎಂದು ವರದಿಯಾಗಿದೆ.

ಜೆಡಿಎಸ್ ಪಕ್ಷ ಟ್ವೀಟ್ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ‘ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವದನ್ನು ನಿಲ್ಲಿಸಲಾಗಿದೆ ಎಂಬ ಸುದ್ದಿ ವರದಿಯಾಗಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರೇ, ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ? ಅಥವಾ ಆರ್ ಎಸ್ ಎಸ್ ನ ನಿರ್ದೇಶನಕ್ಕೆ ಕಾಯುತ್ತಿರುವಿರೇ? ನಿಮ್ಮ ಕಳಪೆ ಆಡಳಿತದಿಂದ ಮಕ್ಕಳ ಹೊಟ್ಟೆಗೆ ಯಾಕೆ ಮೋಸ ಮಾಡುವಿರಿ? ಎಂದು ಪ್ರಶ್ನಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *