ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ವಿಧಾನ ಮಂಡಲ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಪರಿಷತ್ ಸದಸ್ಯ ಎಂ.ಕೆ ಪ್ರಾಣೇಶ್, ಭಗವದ್ಗೀತೆ ಬೋಧನೆ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ? ಮೊದಲು ಇದ್ದ ಆಸಕ್ತಿ ಈಗ ಯಾಕಿಲ್ಲ ಎಂದು ಕೇಳಿದರು.
ಎಂ.ಕೆ. ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಬಿ.ಸಿ. ನಾಗೇಶ್, ಭಗವದ್ಗೀತೆ ಭೋದನೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಚರ್ಚೆಯಾಗಿದೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಬೋಧನೆ ಆರಂಭಿಸುವ ಚಿಂತನೆ ನಡೆದಿದೆ ಎಂದಿದ್ದಾರೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಯಾವ ತರಗತಿಯಿಂದ ಯಾವ ತರಗತಿಗಳಿಗೆ ಯಾವ ಮಾದರಿಯಲ್ಲಿ ಭಗವದ್ಗೀತೆ ಭೋದನೆ ಮಾಡಬೇಕು? ಯಾವ ರೀತಿಯಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದು ಸಮಿತಿ ಮಾಹಿತಿ ನೀಡಲಿದೆ. ಪ್ರತ್ಯೇಕವಾದ ಪಠ್ಯ ರಚನೆಯ ಮೂಲಕ ಮಕ್ಕಳಿಗೆ ಗೀತೆ ಭೋದನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಗುಜರಾತ್ ಹಾಗೂ ಬನಾರಸ್ ವಿಶ್ವವಿದ್ಯಾಲಯ ಮಾದರಿಯಲ್ಲಿ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಗುಜರಾತ್ ಸರ್ಕಾರ ಪಠ್ಯದಲ್ಲಿ ತಂದಿರುವ ಮಾದರಿಯಲ್ಲಿಯೇ ಮಾಡಲು ಸಿದ್ದಗೊಳ್ಳಲಾಗುತ್ತಿದೆ ಎನ್ನಲಾಗಿದೆ.