ಶಾಲಾರಾಂಭ : ಭರವಸೆಗಿಂತ ಬೆದರಿಸಿದ್ದೆ ಹೆಚ್ಚು

ಶಾಲೆಗಳನ್ನು ಆರಂಭ ಮಾಡುವ ಕುರಿತು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು. ಡಿಸೆಂಬರ್‌ವರೆಗೆ ಶಾಲೆಗಳನ್ನು ತರೆಯಬಾರದು. ಡಿಸೆಂಬರ್ ಕೊನೆಯಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸುವ ವಿಚಾರಕ್ಕೆ ಸರಕಾರ ಆತುರದ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಬರುತ್ತಿದೆ.

ಒಂದು ಬಾರಿ ಆರಂಭ ಎಂದು ಮತ್ತೊಂದು ಬಾರಿ ಸದ್ಯಕ್ಕೆ ಇಲ್ಲ ಎಂದು ಹೇಳುವ ಮೂಲಕ ಪೋಷಕರನ್ನು ಗೊಂದಲಕ್ಕೆ ತಳ್ಳುತ್ತಿದೆ.  ಸರಕಾರದ ಈ ನಡೆ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿವೆ ಎಂದು ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಇವರ ಆರೋಪಕ್ಕೆ ಕಾರಣ  ಏನು ಎಂಬ ಚರ್ಚೆಗಳು ನಡೆಯುತ್ತಿವೆ.  ಶಾಲೆ ಆರಂಭದ ಕುರಿತು ಸರಕಾರ ದಿಟ್ಟ ನಿಲುವನ್ನು ಪಡೆಯಲು ವಿಫಲಾಗುತ್ತಿರುವುದಕ್ಕೆ ಕಾರಣವಾದರು ಏನು? ಆರಂಭವಾಗಿರುವ ಡಿಗ್ರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರದರಲು ಕಾರಣ ಏನಿರಬಹುದು ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ.

ಶಾಲಾ-ಕಾಲೇಜು ಪ್ರಾರಂಭ ಕುರಿತು ಸೋಮವಾರ ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಸದ್ಯಕ್ಕೆ ಶಾಲೆ ಪ್ರಾರಂಭ ಬೇಡ ಎಂದು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ.

ಸಭೆಯಲ್ಲಿ ಡಿಗ್ರಿ ಕಾಲೇಜುಗಳ ಬಗ್ಗೆ ಚರ್ಚೆ ನಡೆಯಿತು. ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿದ್ದಾರೆ. ಟೆಸ್ಟ್ ಮಾಡಿಸಿದಾಗ ಎಷ್ಟು ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಎಂಬುದರ ಕುರಿತು ಚರ್ಚಿಸಲಾಯಿತು.  ತಜ್ಷರ ಜೊತೆ ಚರ್ಚೆಯನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಶಾಲೆಗಳ ಆರಂಭವನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ತಿಳಿಸಿದ್ದಾರೆ.

ಶಾಲೆಗಳನ್ನು ಪುನರಾರಂಭ ಮಾಡಬೇಕಾದರೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರಕಾರಕ್ಕೆ ಶಿಫಾರಸ್ಸನ್ನು ಮಾಡಿತ್ತು. ಮಕ್ಕಳಿಗೆ ಉಚಿತ ಕೋವೀಡ್ ಪರೀಕ್ಷೆ ಹಾಗೂ ಮಧ್ಯಾಹ್ನದ ಬಿಸಿಯೂಟ, ಬಿಸಿಯಾದ ಹಾಲು, ಮೊಟ್ಟೆಯನ್ನು ವಿತರಣೆ ಮಾಡಬೇಕು. ಹಾಗೂ ಶಿಕ್ಷಕರಿಗೆ ಅಗತ್ಯ ಆರೋಗ್ಯ ಪರಿಕರಗಳನ್ನು ನೀಡಬೇಕು ಎಂದು ಮಕ್ಕಳ ಹಕ್ಕುಗಳ ಆಯೋಗ ಶಿಫಾರಸ್ಸು ಮಾಡಿತ್ತು.

ಸರಕಾರ ನಿರ್ಧಿಷ್ಟ ಯೋಜನೆ, ಮಾರ್ಗದರ್ಶನ, ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಲೆಗಳನ್ನು ಆರಂಭ ಮಾಡಬೇಕಿತ್ತು, ಕೇವಲ ಆನ್ಲೈನ್ ಮೂಲಕ ಮಕ್ಕಳ ಕಲಿಕೆ ಉತ್ತಮಗೊಳ್ಳುವುದಿಲ್ಲ ಎಂದು ಪೋಷಕರಾದ ನಾಗವೇಣಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಡೀಯೊ ನೋಡಿ

ಮಕ್ಕಳ ಹಿತದೃಷ್ಟಿಯಿಂದ ಶಾಲಾರಂಭವನ್ನು ಮುಂದೂಡಿರುವಂತದ್ದು ಒಳ್ಳಯ ನಿರ್ಧಾರವೆ, ಆದರೆ ಖಾಸಗಿ ಶಾಲೆಗಳು ಆನ್ಲೈನ್ ಹೆಸರಲ್ಲಿ ಪೋಷಕರಿಂದ  ಹಣವನ್ನು ವಸೂಲಿ ಮಾಡಿಕೊಳ್ಳಲು ಸರಕಾರ ಅವಕಾಶ ಕೊಟ್ಟಂತಾಗಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಹಣ ನೀಡದ ವಿದ್ಯಾರ್ಥಿಗಳಿಗೆ ಅನ್ಲೈನ್ ಲಿಂಕ್ ಕಳುಹಿಸದೆ ಪೋಷಕರಿಗೆ ಒತ್ತಡ ಹಾಕಲಾಗುತ್ತಿದೆ. ಈ ವರ್ಷದ ಶೈಕ್ಷಣಿಕ ಅವಧಿಯನ್ನು ಶೂನ್ಯವರ್ಷ ಎಂದು ಘೋಷಿಸಿ ಮಕ್ಕಳನ್ನು ಮುಂದಿನ ತಗರತಿಗೆ ತೇರ್ಗಡೆ ಮಾಡಬೇಕು ಎಂದು ಎಸ್.ಎಫ್.ಐ ನ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಿಂದ ಶೈಕ್ಷಣಿಕ ಅರಾಜಕತೆ ಉಂಟಾಗುತ್ತಿದೆ ಎಂದು ಶಿಕ್ಷಣ ತಜ್ಞರಾದ  ಡಾ. ಮಹಾಬಲೇಶ್ವರ ರಾವ್  ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ, ಹಾಸ್ಟೇಲ್ ಗಳು ಆರಂಭವಾಗಿಲ್ಲ, ಹಾಜರಾತಿ ಕಡ್ಡಾಯವಲ್ಲ ಎಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಆನ್ಲೈನ್, ಆಫ್ ಲೈನ್ ಎರಡು ತರಗತಿಗಳನ್ನು ದಿನನಿತ್ಯ ನಡೆಸಿ ಎಂದು ಉಪನ್ಯಾಸಕರಿಗೆ ಸರಕಾರ ಒತ್ತಡ ಹೇರುತ್ತಿದೆ. ಹಾಗಾಗಿ ಕಾಲೇಜುಗಳ ಆರಂಭವನ್ನು ಮುಂದೂಡಿ ಎಂದು ಮಹಾಬಲೇಶ್ವರರಾವ್ ಒತ್ತಾಯಿಸಿದ್ದಾರೆ .

ಸರಕಾರ ಶಾಲಾ – ಕಾಲೇಜು ಆರಂಭಕ್ಕೆ ಸರಿಯಾದ ನಿಲುವು ತೆಗೆದುಕೊಳ್ಳದ ಪರಿಣಾಮ ಅನೇಕ ಗೊಂದಲ ಸೃಷ್ಠಿಯಾಗುತ್ತಿದೆ. ಅನೇಕ ತಜ್ಞರು, ಚಿಂತಕರು, ಪೋಷಕರು ಸರಕಾರಕ್ಕೆ ಮಾರ್ಗದರ್ಶನ ನೀಡುತ್ತಲೆ ಬಂದಿದ್ದಾರೆ.  ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ  ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ತಾಳಹಾಕುತ್ತಿದೆ ಎಂದು ಸ್ಪಷ್ಟವಾಗುತ್ತಿದೆ.

ಇನ್ನಾದರೂ ಸರಕಾರ ಈ ಎಲ್ಲ ಗೊಂದಲಗಳಿಗೆ ತೆರೆಯನ್ನು ಎಳೆದು, ಡಿಸಂಬರ್ ಅಂತ್ಯಕ್ಕೆ ಶಾಲಾ ಆರಂಭಕ್ಕೆ ಕುರಿತು ತೆಗೆದುಕೊಳ್ಳುವ ನಿರ್ಧಾರ  ವಿದ್ಯಾರ್ಥಿಗಳಿಗೆ, ಪೋಷಕರಿಗೆ  ಭರವಸೆಯನ್ನು ತುಂಬುವಂತೆ ಇರಬೇಕು. ಅಗತ್ಯ ಮುಂಜಾಗೃತೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಲೆಗಳ ಆರಂಭಕ್ಕೆ ಮುಂದಾಗಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *