ಕುಷ್ಟಗಿ : ಕುಷ್ಟಗಿ ತಾಲ್ಲೂಕಿನ ನೀರಲೂಟಿ, ಹುಲಿಯಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬಿಡಲು ಆಗ್ರಹಿಸಿ ಇಂದು ಶಾಸಕರ ಕಚೇರಿ ಮುಂಭಾಗ ಎಸ್.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ “ಒಂದು ದೇಶ, ರಾಜ್ಯ ಅಭಿವೃದ್ಧಿ ಆಗಬೇಕೆಂದರೆ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ ಬಹುತೇಕ ಸರ್ಕಾರಗಳು ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡುತ್ತವೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆಯೂ ಲಾಭದಾಯಕ ದೃಷ್ಟಿಯಿಂದ ನೋಡಲಾರದೆ,ಸಮಾಜ ಸೇವೆ ದೃಷ್ಟಿಯಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲದ ದೃಷ್ಟಿಯಿಂದ ಬಸ್ಸನ್ನು ಸಮಯಕ್ಕೆ ಸರಿಯಾಗಿ ಬಿಡಬೇಕಿದೆ. ನೀರಲೂಟಿ ಮತ್ತು ಹುಲಿಯಾಪುರ ಗ್ರಾಮಕ್ಕೆ ಬೆಳಿಗ್ಗೆ 8.30ಕ್ಕೆ ಮತ್ತು ಸಂಜೆ ಕುಷ್ಟಗಿ ನಗರದಿಂದ 4:30 ಕ್ಕೆ ಮತ್ತೊಂದು ಬಸ್ ಅವಶ್ಯಕತೆ ಇದ್ದು, ಈ ಭಾಗದಿಂದ ನೂರಾರು ವಿದ್ಯಾರ್ಥಿಗಳು ಕುಷ್ಟಗಿ ಹಾಗೂ ಹಿರೇಮನ್ನಾಪುರಕ್ಕೆ ಶಾಲಾ- ಕಾಲೇಜಿಗೆ ಹೋಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಇಂದು ನಾವು ಬಸ್ ಬಿಡುವವರೆಗೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ.
ನೀವು ಈಗಾಗಲೇ ಕುಷ್ಟಗಿ ತಾವರಗೇರ ಮಧ್ಯ ರಾಜ್ಯ ಹೆದ್ದಾರಿಯಲ್ಲಿ ಓಡಾಡುವ ಬಸ್ಸಿನ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ನಿಮ್ಮ ಸಮಯಕ್ಕೆ ಅನುಕೂಲ ಮಾಡಿಕೊಡುತ್ತೇವೆ ಎಂದು ಈ ಹಿಂದೆ ಬರವಸೆ ನೀಡಿದ್ದೀರಿ ಆದರೂ ಇಲ್ಲಿವರೆಗೂ ಯಾವುದೇ ಬಸ್ ಬಂದಿರುವುದಿಲ್ಲ,ನೀವು ರಾಜ್ಯಹೆದ್ದಾರಿಯಲ್ಲಿ ಓಡಾಡುವ ಬಸ್ ಕಳಿಸುತ್ತಿರೋ ಅಥವಾ ಹೊಸ ಬಸ್ ಕಳಿಸುತ್ತಿರೋ ಅದು ನಿಮಗೆ ಬಿಟ್ಟಿದ್ದು, ನಮಗೆ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕೆಂದು ಇಂದು ನಿಮ್ಮ ಕಚೇರಿ ಮುಂದೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನಾ ಧರಣಿ ಮಾಡುತ್ತಿದ್ದು, ಒಂದು ವೇಳೆ ಉದಾಸೀನತೆ ತೋರಿ ಬಸ್ ಬಿಡದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಕಚೇರಿಯ ಮುಂದೆ ಅನಿರ್ದಿಷ್ಟವರಿಗೂ ಪ್ರತಿಭಟನೆ,ಧರಣಿ,ಉಪವಾಸ ಸತ್ಯಗ್ರಹ ಕೂಡಲು ಮುಂದಾಗುತ್ತವೆ ಎಂದು ಅಮರೇಶ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫೈ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಎಸ್ಎಫ್ಐ ತಾಲ್ಲೂಕು ಸಂಚಾಲಕ ಬಸವರಾಜ ಸಾರಥಿ, ದ್ಯಾಮಣ್ಣ, ಶಂಕರಲಿಂಗ, ಹನುಮಂತ, ಖಾದರಸಾಬ,ಶೇಖರಗೌಡ, ಮೀನಾಕ್ಷಿ, ಮುದಕಮ್ಮ, ಮಹಾಂತಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.