ಮೈಸೂರು: 73ನೇ ಗಣರಾಜ್ಯೋತ್ಸವವಾದ ಹಿನ್ನೆಲೆ ಮೈಸೂರು ಶಕ್ತಿಧಾಮಕ್ಕೆ ಪತ್ನಿ ಗೀತಾ ಅವರೊಂದಿಗೆ ಆಗಮಿಸಿದ ನಟ ಶಿವರಾಜ್‍ಕುಮಾರ್ ಅಲ್ಲಿನ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಣೆ ಮಾಡಿದರು.
ಧ್ವಜಾರೋಹಣಕ್ಕೂ ಮುನ್ನ ಶಿವರಾಜ ಕುಮಾರ್ ಶಾಲೆ ಬಸ್ಸಿನ ಚಾಲಕರಾಗಿ ಸಂಚಾರ ನಡೆಸಿ ಶಕ್ತಿಧಾಮದ ಮಕ್ಕಳನ್ನು ಸುತ್ತಾಟ ನಡೆಸಿದರು.
ಈ ಸಂದರ್ಭದಲ್ಲಿ ನಟ ಗುರುದತ್, ಆಶ್ರಮದ ಮಕ್ಕಳು ಹಾಗೂ ಶಕ್ತಿಧಾಮದ ಸಿಬ್ಬಂದಿ ಭಾಗಿಯಾಗಿದ್ದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಶಿವಣ್ಣ ಅನಾಥ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಶಕ್ತಿಧಾಮ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಹುಟ್ಟು ಹಾಕಿದ ಸಂಸ್ಥೆ. ಈ ಆಶ್ರಮ ವೃದ್ಧರು, ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳು ಹಾಗೂ ಅನಾಥ ಮಕ್ಕಳಿಗೆ ಜೀವನ ಕಟ್ಟಿಕೊಟ್ಟಿರುವ ಸಂಸ್ಥೆಯಾಗಿದೆ.
ದಿ. ಪುನೀತ್ ರಾಜ್‍ಕುಮಾರ್ ಮೊದಲು ಆಶ್ರಮದ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಆದರೆ ಅವರು ಅಗಲಿದ ನಂತರ ಆಶ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶಿವರಾಜ ಕುಮಾರ್ ಮತ್ತು ಗೀತಾ ವಹಿಸಿಕೊಂಡಿದ್ದಾರೆ.
ಅಪ್ಪು ಅಗಲಿದ ನಂತರ ಶಿವಣ್ಣ ಮತ್ತು ಗೀತಾ ಆಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ವಿಚಾರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಶಕ್ತಿಧಾಮ ನಿರ್ವಹಣೆ ಕುರಿತಂತೆ ಧರ್ಮದರ್ಶಿಗಳ ಸಭೆ ಮಾಡಿದ್ದರು.