ಹಿಜಾಬ್ ವಿವಾದ: ಕಾಲೇಜು ರಜೆ ಅವಧಿ ವಿಸ್ತರಣೆಯಿಂದ ಶೈಕ್ಷಣಿಕ ಬಿಕ್ಕಟ್ಟಿಗೆ ಸರ್ಕಾರವೇ ನೇರ ಹೊಣೆ

ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ. ರಾಜ್ಯ ಸರ್ಕಾರವು ಸಹ ಕಾಲೇಜುಗಳಿಗೆ ರಜೆಯ ಅವಧಿಯನ್ನು ವಿಸ್ತರಿಸಿದೆ. ಸರ್ಕಾರವು ಹಿಜಾಬ್ ಸುತ್ತುವರಿದ ವಿಚಾರವನ್ನು ಸರಿಯಾಗಿ ನಿರ್ವಹಣೆ ಮಾಡದೆ, ಈಗ ಕಾಲೇಜುಗಳ ಆರಂಭವನ್ನು ಮತ್ತಷ್ಟು ವಿಸ್ತರಣೆ ಮಾಡಿರುವುದು ರಾಜ್ಯದ ವಿದ್ಯಾರ್ಥಿಗಳಲ್ಲಿ ಅತೀವ ಆತಂಕವನ್ನು ಸೃಷ್ಟಿ ಮಾಡಿದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ಸಂಘಟನೆಯು ಕರ್ನಾಟಕ ಉಚ್ಚ ನ್ಯಾಯಾಲಯವು ಶಾಲಾ-ಕಾಲೇಜುಗಳನ್ನು ತೆರೆಯಲು ಆದೇಶ ನೀಡಿದ್ದರೂ ಸಹ, ರಾಜ್ಯ ಸರ್ಕಾರ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು, ರಜೆಯ ಅವಧಿಯನ್ನು ವಿಸ್ತರಿಸಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಪ್ರಸ್ತುತ ಶೈಕ್ಷಣಿಕ ವರ್ಷ ಬಹಳ ತಡವಾಗಿ ಆರಂಭವಾಗಿತ್ತು. ಆದ ಕಾರಣ, ಪಾಠಗಳು ಸಹ ಪೂರ್ಣಗೊಂಡಿಲ್ಲ. ಆದರೆ, ಈಗಾಗಲೇ ಹಲವು ಕೋರ್ಸುಗಳ ಅಂತಿಮ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ವಿದ್ಯಾರ್ಥಿಗಳ ಮೇಲೆ ಅಪಾರವಾದ ಒತ್ತಡವನ್ನು ಹೇರಿವೆ. ಇಂತಹ ಸಂದರ್ಭದಲ್ಲಿ, ಕಾಲೇಜು ರಜೆಯ ಅವಧಿಯನ್ನು ವಿಸ್ತರಣೆ ಮಾಡುತ್ತಾ ಹೋದರೆ, ಇನ್ನಷ್ಟು ಶೈಕ್ಷಣಿಕ ಬಿಕ್ಕಟ್ಟು ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಎಲ್ಲ ಹಂತದ ವಿದ್ಯಾರ್ಥಿಗಳು ತಾವು ಎದುರಿಸುತ್ತಿದ್ದ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಒಂದಾಗಿ ಹೋರಾಟ ಬೆಳೆಸಿದ್ದರು. ಅವುಗಳಲ್ಲಿ ಹಲವು ಬೇಡಿಕೆಗಳನ್ನು ಗೆದ್ದು, ಯಶಸ್ವಿಯೂ ಆಗಿದ್ದರು. ಇದರೊಂದಿಗೆ ರಾಜ್ಯವ್ಯಾಪಿ ಶಿಕ್ಷಕರ ಪ್ರಬಲ ಹೋರಾಟವು  ಬೆಳೆದಿತ್ತು. ಸಾಮಾಜಿಕ ಸಮಸ್ಯೆಗಳ ವಿರುದ್ಧ ಜನಸಾಮಾನ್ಯರು ಒಂದಾಗುತ್ತಿದ್ದರು. ಈಗ ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವನ್ನು ಮುರಿಯಲು ಹಾಗೂ ಇನ್ನಿತರ ಚಳುವಳಿಗಳನ್ನು ಹತ್ತಿಕ್ಕಲು ಈ ವಿಷಯವನ್ನು ಹುಟ್ಟು ಹಾಕಲಾಗಿದೆ.

ಈ ಹಿನ್ನೆಲೆಯಲ್ಲಿ ಏರ್ಪಡುವ ಎಲ್ಲ ಶೈಕ್ಷಣಿಕ ಸಮಸ್ಯೆಗಳಿಗೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಾಲೇಜು ತೆರೆಯುವುದು ಮುಂದಕ್ಕೆ ಹೋದಂತೆಲ್ಲ, ಪರೀಕ್ಷೆಗಳನ್ನು ಮುಂದೂಡವ ಪರಿಸ್ಥಿತಿ ಬರುತ್ತದೆ. ಕಾಲೇಜು ಆರಂಭದ ಅವಧಿ ವಿಸ್ತರಣೆ ಹಿನ್ನೆಲೆಯಲ್ಲಿ ಏರ್ಪಡುವ ಎಲ್ಲ ಶೈಕ್ಷಣಿಕ  ಸಮಸ್ಯೆಗಳಿಗೆ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ವಹಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಎಐಡಿಎಸ್‌ಒ ಒತ್ತಾಯಿಸಿದೆ.

ಸರ್ಕಾರ ಮತ್ತು ಕೆಲವು ವಿಭಜಕ ಸಂಘಟನೆಗಳು ವಿದ್ಯಾರ್ಥಿ ಐಕ್ಯತೆಯನ್ನು ಮುರಿಯಲು ಎಷ್ಟೇ ಪ್ರಯತ್ನ ಪಟ್ಟರೂ, ವಿದ್ಯಾರ್ಥಿಗಳು ಅವರ ಪ್ರಚೋದನೆಗೆ ಬಲಿಯಾಗದೆ, ಕೋಮು ಸಾಮರಸ್ಯ ಕಾಪಾಡಿದ್ದಾರೆ. ಈ ಸಂದರ್ಭದಲ್ಲಿ ಎಐಡಿಎಸ್‌ಒ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಅಭಿನಂದನೆಗಳನ್ನು ತಿಳಿಸುತ್ತಾ, ಇದೇ ರೀತಿಯ ಐಕ್ಯತೆಯನ್ನು ಮುಂದುವರೆಸಿ, ಎಲ್ಲ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಅಣಿಯಾಬೇಕು ಎಂದು ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *