ಶಹಾಪುರದಲ್ಲಿ ಕಲುಷಿತ ನೀರು ಸೇವಿಸಿ 40 ಮಂದಿ ಅಸ್ವಸ್ಥ – ಒಬ್ಬ ನಿಧನ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೋತಪೇಟೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನದಲ್ಲಿ ಕಲುಷಿತ ನೀರು ಸೇವನೆಯಿಂದ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಅಲ್ಲದೆ, ಒಬ್ಬ ವ್ಯಕ್ತಿ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಹೊನ್ನಪ್ಪ ಗೌಡ ಎಂದು ಗುರುತಿಸಲಾಗಿದೆ. ಶನಿವಾರದಿಂದ ಇಲ್ಲಿಯವರೆಗೆ ಹೊತಪೇಟೆ ಗ್ರಾಮದಲ್ಲಿ 40ಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಆದರೆ ವೈದ್ಯಕೀಯ ವರದಿ ಪ್ರಕಾರ ಹೊನ್ನಪ್ಪ ಗೌಡ ಸಾವಿಗೆ ಕಲುಷಿತ ನೀರು ಸೇವನೆಯ ಜೊತೆಗೆ ಬೇರೆ ಕಾರಣಗಳೂ ಇವೆ ಎಂದು ವರದಿ ಮಾಡಿದ್ದಾರೆ. ಕಳೆದ ಮೂರು ದಿನಗಳಲ್ಲಿ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ, ಅವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ ಎಂಬ ಮಾಹಿತಿ ಇದೆ ಎಂದು ಶಹಾಪುರ ತಹಶೀಲ್ದಾರ್ ಮಧುರಾಜ್ ಹೇಳಿದ್ದಾರೆ.

ಸುಮಾರು 6 ಸಾವಿರ ಜನಸಂಖ್ಯೆ ಹೊಂದಿರುವ ಹೋತಪೇಟೆ ಗ್ರಾಮವು ಪಂಚಾಯ್ತಿ ಕೇಂದ್ರವಾಗಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವೂ ಇಲ್ಲಿದೆ. ನಾಲ್ಕೈದು ದಿನಗಳ ಹಿಂದೆ ವಾಂತಿಭೇದಿ ಪ್ರಕರಣಗಳು ವರದಿಯಾಗುತ್ತಿದ್ದವು. ಕಲುಷಿತ ನೀರಿನ ಬಗ್ಗೆ ಜನರು ಪಂಚಾಯ್ತಿಗೆ ದೂರಿದ್ದಾರೆ. ಆದರೆ, ಆವರು ಕ್ರಮವಹಿಸಿಲ್ಲ. ಇಬ್ಬರು ಮೃತಪಟ್ಟು, 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಮೇಲೆ ಇದೀಗ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಗ್ರಾಮದ ಜನರ ಆರೋಪವಾಗಿದೆ.

ಗ್ರಾಮದ ನಿವಾಸಿಗಳು ಅಳವಡಿಸಿಕೊಂಡಿರುವ ಕೆಲ ಪೈಪ್‌ಗಳು ಹಾಳಾಗಿದ್ದರಿಂದ ಮಳೆ ನೀರು, ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಸೇರಿಕೊಂಡಿದೆ ಎಂದು ಜನರ ಆರೋಪವಾಗಿದೆ. ಈ ನಡುವೆ ಗ್ರಾಮದಲ್ಲಿರುವ ಕುಡಿಯುವ ನೀರು ಸಂಗ್ರಹಣ ಘಟಕದ  ಟ್ಯಾಂಕ್‌ ಅನ್ನು ಹಲವು ತಿಂಗಳಿಂದ ಸ್ವಚ್ಛಗೊಳಿಸಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಊರ ಹೊರಗಿನ ಬಾವಿಯ ನೀರನ್ನು ಮತ್ತು ಟ್ಯಾಂಕ್‌ನಲ್ಲಿ ಸಂಗ್ರಹಿಸಿದ ನೀರನ್ನು ಸ್ಯಾಂಪಲ್‌ ತೆಗೆಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿ ಕಳುಹಿಸಲಾಗಿದ್ದು, ಎರಡರ ವರದಿಯೂ ನೀರು ಕಲುಷಿತವಾಗಿಲ್ಲವೆಂದು ಬಂದಿದೆ. ಆದರೆ, ಬಾವಿಯ ಸುತ್ತ ಭತ್ತದ ಗದ್ದೆಗಳಿವೆ ಇವೆ. ಗದ್ದೆಯ ರಸಾಯನಿಕ ಅಂಶ ನೀರಿನಲ್ಲಿ ಸಂಗ್ರಹವಾಗಿರಬಹುದು ಎನ್ನುವುದು ತಾಲೂಕು ವೈದ್ಯಾಧಿಕಾರಿಗಳ ಹೇಳಿಕೆಯಾಗಿದೆ.

ಟ್ಯಾಂಕ್‌ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಗಳು ಅಲ್ಲಲ್ಲಿ ಒಡೆದಿವೆ. ಅಲ್ಲಿ ಕಲುಷಿತ ನೀರು ಸೇರ್ಪಡೆಯಾಗಿ ವಾಂತಿಭೇದಿ ಕಾಣಿಸಿಕೊಂಡಿದೆ. ಉಪ ಆರೋಗ್ಯ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾ​ಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದರು.

15 ದಿನಗಳ ಹಿಂದೆಯಷ್ಟೇ ಜೇವರ್ಗಿ ತಾಲೂಕಿನ (ಕಲಬುರಗಿ ಜಿಲ್ಲೆ) ಮಂದೇವಾಳ ಗ್ರಾಮದ 23 ಮಂದಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದರು. ಇದೇ ಕಾರಣಕ್ಕೆ ಜೂನ್‌ನಲ್ಲಿ ರಾಯಚೂರು ನಗರದಲ್ಲಿ ಐವರು ಸಾವನ್ನಪ್ಪಿ, ಹಲವರು ಅಸ್ವಸ್ಥರಾಗಿದ್ದರು.

Donate Janashakthi Media

Leave a Reply

Your email address will not be published. Required fields are marked *