ಮುಂಬೈ: ಮುಂಬೈ ಕರಾವಳಿ ತೀರದ ಐಷಾರಾಮಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೊಟಿಕ್ಸ್ ಕ್ರೈಮ್ ಬ್ರ್ಯಾಂಚ್(ಎನ್ ಸಿಬಿ) ಅಧಿಕಾರಿಗಳ ತಂಡ ಆರ್ಯನ್ ಖಾನ್ ನನ್ನು ಬಂಧಿಸಿದೆ. ಆರ್ಯನ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ರವರ ಪುತ್ರ. ಈ ಘಟನೆ ಶಾರೂಕ್ ಖಾನ್ ಗೆ ಆಘಾತ ತಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಮುಂಬೈನ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದ್ದ ಎನ್‌ಸಿಬಿ ಕೊನೆಗೆ ಆರ್ಯನ್ ಖಾನ್ ನನ್ನು ಬಂಧಿಸಿದೆ. ಇದೇ ವೇಳೆ ಅಧಿಕಾರಿಗಳು ಮೆಡಿಕಲ್ ಟೆಸ್ಟ್ ಗೆ ಒಳಪಡಿಸಲಾಗುತ್ತದೆ.
ರೇವ್ ಪಾರ್ಟಿ ನಡೆಯುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದು ಏಕಾಏಕಿ ದಾಳಿ ನಡೆಸಿದ ತಂಡ 8 ಮಂದಿಯನ್ನು ವಶಕ್ಕೆ ಪಡೆದಿದ್ದು ಅವರ ಹೆಸರುಗಳನ್ನು ಬಿಡುಗಡೆ ಮಾಡಿದೆ. ಅವರಲ್ಲಿ ಇಬ್ಬರು ಯುವತಿಯರೂ ಸೇರಿದ್ದಾರೆ. ವಶಕ್ಕೆ ಪಡೆದವರ ಹೆಸರುಗಳು ಈ ರೀತಿ ಇವೆ, ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಆಗಿದ್ದಾರೆ ಎಂದು ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ತಿಳಿಸಿದ್ದಾರೆ.
ವಶಕ್ಕೆ ಪಡೆದವರಿಂದ ಎಂಡಿಎಂಎ, ಎಸ್ಕೆಸಿ, ಕೊಕೈನ್, ಎಂಡಿ ಮತ್ತು ಚರಸ್ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿ ಕಳೆದ ರಾತ್ರಿ ನಡೆದಿದೆ. ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದಂತೆ ಸಂಸ್ಥೆ ಆಯೋಜಕರ ವಿರುದ್ಧ ಎಫ್ ಐಆರ್ ದಾಖಲಿಸಿದೆ.
ಸಮುದ್ರ ಮಧ್ಯದಲ್ಲಿ ಪಾರ್ಟಿ : ಕಾರ್ಡೆಲಿಯಾ ಎಂಪ್ರೆಸ್ ಹಡಗಿನಲ್ಲಿ ಅಕ್ಟೋಬರ್ 2ರಿಂದ ಅಕ್ಟೋಬರ್ 4ರ ವರೆಗೂ ಪಾರ್ಟಿ ಆಯೋಜನೆಯಾಗಿತ್ತು. ‘ಸಂಗೀತದ ಯಾನ’ ಎಂಬರ್ಥದಲ್ಲಿ ಪಾರ್ಟಿಗೆ ನೂರು ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು ಹಾಗೂ ಆಯೋಜಕರ ಮೂಲಕ ಪಾಸ್‌ಗಳು ವಿತರಣೆಯಾಗಿದ್ದವು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೂಲಗಳ ಪ್ರಕಾರ, ಕಾರ್ಯಕ್ರಮವನ್ನು ಫ್ಯಾಷನ್ ಟಿವಿ ಇಂಡಿಯಾ ಮತ್ತು ದೆಹಲಿ ಮೂಲದ ನಮಸ್ಕ್ರೇ ಎಕ್ಸ್‌ಪೀರಿಯನ್ಸ್ (Namascray Experience) ಆಯೋಜಿಸಿತ್ತು. ಇರುವ ಸ್ಥಳಾವಕಾಶಕ್ಕಿಂತಲೂ ಹೆಚ್ಚುವರಿ ಬುಕ್ಕಿಂಗ್ ಆಗಿ ಹಲವು ಮಂದಿ ಹಡಗಿನ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ನಿಂತಿದ್ದರು. ವ್ಯಕ್ತಿಯೊಬ್ಬರು ‘₹82,000 ಕೊಟ್ಟು ಪಾಸ್ ಖರೀದಿಸಿದ್ದೇನೆ, ಒಳಗೆ ಪ್ರವೇಶ ಸಿಕ್ಕಿಲ್ಲ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ಬಾಲಿವುಡ್ ನಂಟು: ಸಮುದ್ರ ಮಧ್ಯೆ ಹಡಗಿನಲ್ಲಿ ನಟರು, ಉದ್ಯಮಿಗಳು ಮತ್ತು ಶ್ರೀಮಂತರ ಮಕ್ಕಳು ಸೇರಿ ಪಾರ್ಟಿ ಮಾಡುತ್ತಿದ್ದಾರೆ ಎಂದು ಎನ್ ಸಿಬಿಗೆ ಮಾಹಿತಿ ಸಿಕ್ಕಿತು. ಅದರ ಜಾಡು ಹಿಡಿದು ಕಳೆದ ಎರಡು ವಾರಗಳಿಂದ ಎನ್ ಸಿಬಿ ತೀವ್ರ ವಿಚಾರಣೆ ನಡೆಸಿ ಜಾಡು ಹಿಡಿದು ಹೊರಟಿತ್ತು. ಇದು ಎರಡು ವಾರಗಳ ನಿರಂತರ ತನಿಖೆಯ ಫಲಿತಾಂಶವಾಗಿದೆ. ನಿಖರ ಆಧಾರ ಸಿಕ್ಕಿಯೇ ನಾವು ದಾಳಿ ಮಾಡಿದ್ದೇವೆ. ಇದರಲ್ಲಿ ಬಾಲಿವುಡ್ ಸಂಪರ್ಕ ಇರುವುದು ಸಹ ಬೆಳಕಿಗೆ ಬಂದಿದೆ ಎಂದು ಎನ್ ಸಿಬಿ ಮುಖ್ಯಸ್ಥ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಶಂಕಿತರನ್ನು ತೀವ್ರ ಶೋಧ ನಡೆಸಿದಾಗ ವಿವಿಧ ಬಟ್ಟೆಗಳಲ್ಲಿ, ಶೂ, ಒಳ ಉಡುಪುಗಳಲ್ಲಿ ಮಾದಕ ವಸ್ತುಗಳನ್ನು ಅಡಗಿಸಿಟ್ಟಿದ್ದು ಬೆಳಕಿಗೆ ಬಂದು ವಶಪಡಿಸಿಕೊಳ್ಳಲಾಗಿದೆ. ವಶಕ್ಕೆ ಪಡೆದವರನ್ನು ಇಂದು ಅಪರಾಹ್ನ ನ್ಯಾಯಾಲಯ ಮುಂದೆ ಹಾಜರುಪಡಿಸುವ ಸಾಧ್ಯತೆಯಿದ್ದು ಕಾನೂನು ರೀತಿ ರಿವಾಜುಗಳು ನಡೆಯಲಿವೆ. ಇಂದು ಬೆಳಗ್ಗೆ ಮುಂಬೈಯ ಎನ್ ಸಿಬಿ ಕಚೇರಿಯಲ್ಲಿ ವಶಕ್ಕೆ ಪಡೆದವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.