ರಾಣೇಬೆನ್ನೂರ: ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ, ಎಲ್ಲರೂ ಒಂದು ಎಂಬ ಪ್ರಮುಖ ಘೋಷಣೆಯಡಿಯಲ್ಲಿ ನಡೆಯುವ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) 17ನೇ ರಾಷ್ಟ್ರ ಸಮ್ಮೇಳನದ ಭಿತ್ತಿಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ರಾಣೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾದ ಜಿ.ವಿ.ಬೆಳವಿಗಿ ಮತ್ತು ಉಪನ್ಯಾಸಕ ಚಂದು ನಾಯಕ ಬಿಡುಗಡೆ ಮಾಡಿ ಶುಭ ಕೋರಿ ಮಾತನಾಡಿದರು.
ಎಸ್‌ಎಫ್‌ಐ ಸಂಘಟನೆಯು “ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗದ ಮೂಲಭೂತ ಹಕ್ಕಿಗಾಗಿ” ನಿರಂತರ ಚಳುವಳಿಯನ್ನು ಸಂಘಟಿಸುತ್ತ ಬರುತ್ತಿದೆ. ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ಇಂದು ಶಿಕ್ಷಣ ಕ್ಷೇತ್ರದ ಖಾಸಗೀಕರಣ, ವ್ಯಾಪಾರೀಕರಣ, ಭ್ರಷ್ಟಾಚಾರ, ಖಾಸಗಿ – ವಿದೇಶಿ ವಿಶ್ವವಿದ್ಯಾಲಯಗಳು ದೇಶಕ್ಕೆ ಆಗಮಿಸುತ್ತಿರುವುದನ್ನು ವಿರೋಧಿಸಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಚಳುವಳಿಯನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವ್ಯಾಪಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತದೆ.
ಕಳೆದ 50 ವರ್ಷಗಳಿಂದ ಶಿಕ್ಷಣದ ಉಳಿವಿಗಾಗಿ, ವಿದ್ಯಾರ್ಥಿಗಳ ಏಳ್ಗೆಗಾಗಿ ನಿರಂತರ ಹೋರಾಟ, ಕಾರ್ಯಕ್ರಮ, ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಕೆಲಸ ಮಾಡುತ್ತಿರುವ ಎಸ್‌ಎಫ್‌ಐ ಸಂಘಟನೆಯ 17ನೇ ರಾಷ್ಟ್ರ ಸಮ್ಮೇಳನ ತೆಲಂಗಾಣ ರಾಜ್ಯದ ಹೈದರಾಬಾದಿನಲ್ಲಿ ಡಿಸೆಂಬರ್ 13ರಿಂದ 16ರವರೆಗೆ ನಡೆಯಲಿದೆ.
17ನೇ ರಾಷ್ಟ್ರ ಸಮ್ಮೇಳನವನ್ನು ತ್ರಿಪುರ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಉದ್ಘಾಟನೆ ಮಾಡಲಿದ್ದು, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ದೇಶದ ವಿವಿಧ ಭಾಗಗಳಿಂದ ಒಂದು ಸಾವಿರ ವಿದ್ಯಾರ್ಥಿ ಪ್ರತಿನಿಧಿಗಳು, ವಿದ್ಯಾರ್ಥಿ ಚಳುವಳಿಯಲ್ಲಿರುವ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ಹಲವಾರು ಕ್ಷೇತ್ರಗಳ ಕುರಿತು, ರಾಷ್ಟ್ರವನ್ನು ತಲ್ಲಣಗೊಳಿಸುತ್ತಿರುವ ಭಯೋತ್ಪಾದನೆ, ಕೋಮುವಾದ, ಭ್ರಷ್ಠಾಚಾರ, ನಿರುದ್ಯೋಗ, ಬಡತನ ಸೇರಿದಂತೆ ಇನ್ನು ಹಲವಾರು ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಚರ್ಚಾ ಗೋಷ್ಟಿಗಳು ನಡಿಯಲಿವೆ ಎಂದು ಎಸ್ಎಫ್ಐ ತಾಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನೇಹಲ್ ಖಾನ್ ಗಂಗಾವತಿ, ಸಹ ಕಾರ್ಯದರ್ಶಿ ಹರ್ಷಾ ಹೊಂಗಲ್, ಮುಖಂಡರಾದ ಮಂಜು ಮೈದೂರು, ಶಂಕರ್, ಅಭಿಷೇಕ್, ಮಹೇಶ್ ಮರುಳ, ಹರ್ಷ, ತೇಜು ತಿಲಕ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.