ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿ ರವರೆಗೆ ವಿದ್ಯಾರ್ಥಿಗಳ ಜಾಥಾ
ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣದ ಸಮಗ್ರ ತನಿಖೆಗಾಗಿ, ಕಾಲೇಜ್ ಕ್ಯಾಂಪಸ್ ನಲ್ಲಿ ಹಾಸ್ಟೆಲ್ ಪ್ರಾರಂಭಿಸುವಂತೆ, ಬಸ್ಸಿನ ಸಮಸ್ಯೆಗಳ ಪರಿಹಾರಕ್ಕಾಗಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಿಂದ ದೇವಗಿರಿ ಗ್ರಾಮದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ರವರೆಗೆ ಮೆರವಣಿಗೆ ಮಾಡಿ, ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್ ಮಾತನಾಡಿ, ಇಂಜಿನಿಯರಿಂಗ್ ಕಾಲೇಜಿನ 19 ವಿದ್ಯಾರ್ಥಿನಿಯರು ಪಿ.ಜಿ.ಸೆಂಟರ್ ನ ಕಲುಷಿತ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡು ಕಳೆದ ಮೂರು ನಾಲ್ಕು ದಿನಗಳ ಕಳೆದರು ವೀರಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರನ್ನು ಜಿಲ್ಲಾಧಿಕಾರಿ ಭೇಟಿ ಮಾಡದೇ ಯೋಗಕ್ಷೇಮ ವಿಚಾರಿಸದೆ, ಒಟ್ಟಾರೆ ಪ್ರಕರಣ ಬಗ್ಗೆ ಯಾವುದೇ ವಿಚಾರಣೆ ಮಾಡದೆ ಇರುವುದನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ.
ದೂರದ ಜಿಲ್ಲೆಯಿಂದ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಜಿಲ್ಲೆಗೆ ಬಂದ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಆದರೆ ಸರ್ಕಾರಕ್ಕೆ ಅನೇಕ ಬಾರಿ ಹೋರಾಟ ಮಾಡಿ ಮನವಿ ಪತ್ರ ಕೊಟ್ಟರು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಿಕೊಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿವೆ. ಸರ್ಕಾರಿ ಹಾಸ್ಟೆಲ್ ಸೌಲಭ್ಯ ಸಿಗದೆ ಇರುವ ವಿದ್ಯಾರ್ಥಿಗಳು ಖಾಸಗಿ ವಸತಿ ನಿಲಯಗಳು ಹಾಗೂ ಬಾಡಿಗೆ ರೂಮ್ ಗಳ ಮೇಲೆ ಅವಲಂಬನೆ ಆಗಿದ್ದಾರೆ.
ಇದನ್ನೂ ಓದಿ: ಶಿಕ್ಷಕರ ಅರ್ಹತಾ ಪರೀಕ್ಷೆ 2025 ಫಲಿತಾಂಶ ಬಿಡುಗಡೆ; 97,383 ಮಂದಿಗೆ ಅರ್ಹತೆ
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಬಾಡಿಗೆ ಬಿಲ್ಡಿಂಗ್ ನಲ್ಲಿ ನಡೆಯುತ್ತಿದ ವಸತಿ ನಿಲಯಕ್ಕೆ ಅಡ್ವಾನ್ಸ್ 5.000 ರೂ ಕಟ್ಟಿಸಿಕೊಂಡು ಪ್ರತಿ ತಿಂಗಳು 2.500 ರೂ ಮೆಸ್ ಬಿಲ್ ಪಾವತಿ ಮಾಡಿಸಿಕೊಂಡು ಬರುವ ಪದ್ಧತಿ ನಡೆಯುತ್ತಿದೆ. ಇದು ಬಡ ವಿದ್ಯಾರ್ಥಿಗಳಿಗೆ ಭಾರಿ ಹೊರೆಯಾಗುತ್ತಿದ್ದು ಹಣ ಸುಲಿಯುವ ಹುನ್ನಾರಕ್ಕೆ ಕಡಿವಾಣ ಹಾಕಿ. ಕಾಲೇಜಿನ ಹಿಂದುಗಡೆ ಅನೇಕ ಕೊಠಡಿಗಳು ಖಾಲಿ ಬಿದ್ದರು ಖಾಸಗಿ ಪಿ.ಜಿ.ಸೆಂಟರ್ ಗಳಿಗೆ ಯಾಕೆ ಲಕ್ಷಾಂತರ ರೂಪಾಯಿ ಬಾಡಿಗೆ ಕೊಡಬೇಕು? ಯಾರ? ಜೇಬು ತುಂಬಿಸಲು ಖಾಸಗಿ ಬಿಲ್ಡಿಂಗ್ ನಲ್ಲಿ ವಿದ್ಯಾರ್ಥಿನಿಯರನ್ನು ಇರಿಸಲಾಗಿತ್ತು? ಇದರ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಎಸ್ಎಸ್ಐ ಹಾಸ್ಟೆಲ್ ವಿದ್ಯಾರ್ಥಿಗಳ ಉಪಸಮಿತಿ ರಾಜ್ಯ ಸಂಚಾಲಕ ಅರುಣ್ ನಾಗವತ್ ಮಾತನಾಡಿ, ಕೂಡಲೇ ಕಾಲೇಜಿನ ಹಿಂದುಗಡೆ ಇರುವ ಬೃಹತ್ ಕಟ್ಟಡಗಳಲ್ಲಿಯೇ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಾ ಸಂಖ್ಯಾತರ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳನ್ನು ತೆರೆಯಬೇಕು. ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ಬಸ್ಸಿನ ಅನಾನುಕೂಲ ಹೆಚ್ಚಾಗಿದ್ದು ಕೂಡಲೇ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ಕನಿಷ್ಟ 20 ಬಸ್ ಗಳನ್ನು ಬಿಡಬೇಕು. ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ ಘಟನೆಯಿಂದ ಎಚ್ಚೆತುಕೊಂಡು ನಿಯಮಗಳನ್ನು ಗಾಳಿಗೆ ತೂರಿದ ಅನಧಿಕೃತ ಖಾಸಗಿ ಪಿ.ಜಿ.ಸೆಂಟರ್ ಗಳನ್ನು ಪರಿಶೀಲನೆ ನಡೆಸಬೇಕು. ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ಕಾವೇರಿ ಗೌಡಗೇರಿ ಮಾತನಾಡಿ, ಕಾಲೇಜಿನಿಂದ ಹತ್ತು ಐದು ಕಿಲೋಮೀಟರ್ ದೂರದಲ್ಲಿ ಹಾಸ್ಟೆಲ್ ಗಳಿವೆ ಸರಿಯಾಗಿ ಬಸ್ ಸೌಲಭ್ಯವಿಲ್ಲ, 8 ರೆಡಿಯಾಗಿ ಬಂದರು 11 ಗಂಟೆಗೆ ಕಾಲೇಜ್ ತಲುಪುತ್ತೇವೆ ಅದರಿಂದ ಕಾಲೇಜ್ ಕ್ಯಾಂಪಸ್ ನಲ್ಲಿ ಬಾಲಕಿಯರ ಹಾಸ್ಟೆಲ್ ಗಳನ್ನು ಪ್ರಾರಂಭಿಸಿಬೇಕೆಂದುರು.

ವಿದ್ಯಾರ್ಥಿನಿ ದರ್ಶಿನಿ ಮಾತನಾಡಿ, ತಾಂಡರೂ ಬಿಲ್ಡಿಂಗ್ ನಲ್ಲಿರುವ ವಿದ್ಯಾರ್ಥಿನಿಯರನ್ನು ಕೂಡಲೇ ಕಾಲೇಜ್ ಕ್ಯಾಂಪಸ್ ಗೆ ಸ್ಥಳಾಂತರ ಮಾಡಬೇಕು ಮೆಸ್ ಗೆ ನೀಡುವ ಬಿಲ್ ಹೊರೆಯಿಂದ ಮುಕ್ತಿಕೊಡಿಸಿ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಿ ಎಂದು ಒತ್ತಾಯಿಸಿದರು.
ಇಂಜಿನಿಯರಿಂಗ್ ವಿದ್ಯಾರ್ಥಿ ಮಹೇಶ್ ಮಾತನಾಡಿ, ಬಸ್ಸಿನ ಸಮಸ್ಯೆ ವಿಪರೀತವಾಗಿದೆ ಎಸ್ಎಫ್ಐ ನೇತೃತ್ವದಲ್ಲಿ ಹೋರಾಟ ಮಾಡಿದಾಗ ಮಾತ್ರ ನಿರಂತರ ಬಸ್ ಬರುತ್ತಾವೆ ಅನಂತರ ಕೆಲವು ಬಸ್ ಗಳು ಮಾತ್ರ ಬರುತ್ತವೆ ಸಾಕಷ್ಟು ಸಮಸ್ಯೆ ಎದುರುಗುತ್ತಿದೆ ಎಂದರು.
ಮನವಿ ಪತ್ರ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಬರುತ್ತಿದ್ದಂತೆ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಸಂಬಂದ ಹಾಸ್ಟೆಲ್ ಇಲಾಖೆಯ ಅಧಿಕಾರಿಗಳನ್ನು ಕರೆಸಬೇಕೆಂದು ಪಟ್ಟುಹಿಡಿದರು. ಅನಂತರ ಬಂದ ಅಧಿಕಾರಿಗಳ ಸುತ್ತಲೂ ವಿದ್ಯಾರ್ಥಿಗಳು ಸುತ್ತುವರೆದು ಭರವಸೆ ಬೇಡ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಸ್ಥಳದಲ್ಲಿ ಅಧಿಕಾರಿಗಳ ಚರ್ಚಿಸಿ ಕೂಡಲೇ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಾಗುತ್ತೇವೆ ಎಂದರು.
ಅಪಾರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್ ಅವರು ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಕೂಡಲೇ ಬಿಸಿಎಮ್ ಇಲಾಖೆಯ ಬಾಲಕಿಯರ ನಿಲಯವನ್ನು ಪ್ರಾರಂಭಿಸುವಂತೆ ಸೂಚಿಸುತ್ತೇವೆ. ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮಾತನಾಡಿ ಬಸ್ಸಿನ ಸಮಸ್ಯೆ ಪರಿಹಾರಿಸುತ್ತೇವೆ. ಕಾಲೇಜ್ ಸುತ್ತಲೂ ಸಿ.ಸಿ ಕ್ಯಾಮರಾ ಅಳವಡಿಕೆ, ಕುಡಿಯುವ ನೀರು, ಸೆಕ್ಯೂರಿಟಿ ಸಿಬ್ಬಂದಿಗಳನ್ನು ನೇಮಕ ಮಾಡುತ್ತೇವೆ ಉಳಿದ ಎಲ್ಲಾ ಬೇಡಿಕೆಗಳನ್ನು ಕೂಡಲೇ ಸಭೆ ಕರೆದು ಪರಿಹಾರಸುತ್ತೇವೆ ಎಂದರು.
ಬೇಡಿಕೆಗಳು:-
1. ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳ ಪ್ರಕರಣವನ್ನು ಸ್ವಯಂ ದೂರ ದಾಖಲಿಸಿಕೊಳ್ಳಬೇಕು.
2. ಕಾಲೇಜ್ ಹಿಂದುಗಡೆ ಖಾಲಿ ಬಿಲ್ಡಿಂಗ್ ಇದ್ದರೂ ಖಾಸಗಿ ಬಿಲ್ಡಿಂಗ್ ನಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಯಾಕೆ ಮಾಡಲಾಗಿದೆ ಸಮಗ್ರ ತನಿಖೆಗೆ ಮಾಡಬೇಕು.
3.ರಾಜ ರಾಜೇಶ್ವರಿ ಖಾಸಗಿ ಪಿ.ಜಿ.ಸೆಂಟರ್ ಸರ್ಕಾರ ನಿಯಮಗಳನ್ನು ಒಳಗೊಂಡಿದೆಯೇ ಪರಿಶೀಲನೆ ನಡೆಸಬೇಕು.
4. ನಗರದಲ್ಲಿರು ಹತ್ತಾರು ಅನಧಿಕೃತ ಖಾಸಗಿ ಪಿ.ಜಿ ಸೆಂಟರ್ ಗಳನ್ನು ಅನುಮತಿ ಪರಿಶೀಲನೆ ಪರಿಶೀಲಿಸಬೇಕು.
5. ಕಾಲೇಜ್ ಕ್ಯಾಂಪಸ್ ಆವರಣದಲ್ಲಿಯೇ ಸರ್ಕಾರಿ ಹಾಸ್ಟೆಲ್ ಪ್ರಾರಂಬಿಸಬೇಕು.
6. ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
7. ಸರ್ಕಾರದ ಇಲಾಖೆಗಳಾದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳು ಕಾಲೇಜ್ ಗೆ ಹತ್ತಿರ ಇರುವಂತೆ ಪ್ರಾರಂಭ ಮಾಡಬೇಕು.
8. ಕಾಲೇಜಿನಿಂದ ದೂರದಲ್ಲಿರುವ ವಿವಿಧ ಇಲಾಖೆ ಹಾಸ್ಟೆಲ್ ಗಳನ್ನು ಕಾಲೇಜ್ ಹತ್ತಿರಕ್ಕೆ ಸ್ಥಳಾಂತರ ಮಾಡಬೇಕು.
9. ಹಾಸ್ಟೆಲ್ ಗಳಿಗೆ ಊಟ, ವಸತಿ, ಸಿ.ಸಿ.ಕ್ಯಾಮರಾ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
10. ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹಾರ ಮಾಡಬೇಕು.
11. ಕಾಲೇಜ್ ಹಿಂದುಗಡೆ ಇರುವ ಬಿಸಿಎಮ್ ಇಲಾಖೆಯ ನೂತನ ಹಾಸ್ಟೆಲ್ ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
12. ಹಾವೇರಿ ನಗರ ದಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಬಸ್ಸಿನ ಸಮಸ್ಯೆ ವಿಪರೀತವಾಗಿದ್ದು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಬಸ್ ಗಳನ್ನು ಬಿಡಬೇಕು.
13. ಕಾಲೇಜ್ ಆವರಣದಲ್ಲಿ ಜೆರಾಕ್ಸ್, ನೆಟ್ ಪಾಯಿಂಟ್, ಫ್ರೀ ವೈಫೈ ಸೌಲಭ್ಯ ಒದಗಿಸಬೇಕು.
14. ಪ್ರಮುಖವಾಗಿ ಕಾಲೇಜ್ ಹಾಗೂ ಹಾಸ್ಟೆಲ್ ಗಳಿಗೆ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಕ ಮಾಡಬೇಕು.
15. ಹಾಸ್ಟೆಲ್ ಗಳಲ್ಲಿ ರಾತ್ರಿ ಕಾವಲುಗಾರರನ್ನು ನೇಮಕ ಮಾಡಬೇಕು.
16. ಕಾಲೇಜ್ ಹೋಗುವ ದಾರಿಯಲ್ಲಿದ ಕೆರೆಗೆ ವಿದ್ಯಾರ್ಥಿಗಳ ಸುರಕ್ಷಿತೆಗಾಗಿ ಕಾರಿಡಾರ್ ನಿರ್ಮಾಣ ಮಾಡಬೇಕು.
17. ಕಾಲೇಜ್ ಕ್ಯಾಂಪಸ್ ನಲ್ಲಿ ಆರೋಗ್ಯ ಸುರಕ್ಷತೆಗಾಗಿ ವ್ಯವಸ್ಥೆ ಮಾಡಬೇಕು.
18. ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ವವಿದ್ಯಾರ್ಥಿಗಳು ಹಾಗೂ ಪೋಷಕರು ಎಸ್ಎಫ್ಐ ಸಂಘಟನೆ ಮುಖಂಡರ ಸಭೆ ನಡೆಸಬೇಕು.
ಈ ಸಂದರ್ಭದಲ್ಲಿ ಅರ್ಚನಾ ಸಿ ಎಸ್, ಮನ್ಯಾ ಎಸ್ ಬಿ, ಲಕ್ಷ್ಮೀ ವಿ ಎನ್, ರಕ್ಷಿತಾ ಎಮ್, ಶಶಿಕಲಾ ಆರ್ ಟಿ, ಪುಟ್ಟಿ ಎಸ್ ಸಿ, ನಿಯಾಲ್ ಎಸ್ ಬಿ, ಶುಹಾಸ್ ಎಸ್ ಆರ್, ಸಚಿನ್ ಎಮ್ ಆರ್, ನಾಗರಾಜ ಕೆ ಆರ್, ಭರತಕುಮಾರ ಎನ್ ಎಸ್ ನವೀನ ಎಚ್ ಎನ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ್ ವರಗಪ್ಪನವರ, ಬಿಸಿಎಮ್ ಇಲಾಖೆಯ ಜಿಲ್ಲಾ ಅಧಿಕಾರಿ ಸುಭ್ರನಾಯಕ, ಮ್ಯಾನೇಜರ್ ಎಮ್ ಬಿ ರಾಠೋಡ್, ತಾಲೂಕಾಧಿಕಾರಿ ಶಾಂತಪ್ಪ ದೊಡ್ಡಮನಿ ಸೇರಿದಂತೆ ಇತರೆ ಅಧಿಕಾರಿಗಳು ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಸ್ಥಿತಿಗತಿಯೇನು ಸಚಿವರೇ? Janashakthi Media
