ಹಾವೇರಿ: ನಗರದ ಜಿಲ್ಲಾ ಆಸ್ಪತ್ರೆ ಆವರಣದ ಹಿಂಭಾಗದಲ್ಲಿರುವ ಹಿರಿಯ ನಾಗರಿಕ ಹೊರ ಮತ್ತು ಒಳ ರೋಗಿಗಳ ವಿಭಾಗದ ಕಟ್ಟಡದಲ್ಲಿ ನಡೆಯುತ್ತಿರುವ ಪ್ಯಾರ ಮೆಡಿಕಲ್ ಕಾಲೇಜ್‌ಗೆ ಸ್ವಂತ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಲಾಯಿತು
ಕಾಲೇಜ್ ಪ್ರಾಂಶುಪಾಲರ ಮೂಲಕ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದರು.
ಪ್ರತಿಭಟನೆ ಉದ್ದೇಶಿಸಿ ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಹಾವೇರಿ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ 2021 ಜನೇವರಿಯಲ್ಲಿ ಪ್ರಾರಂಭವಾದ ಸರ್ಕಾರಿ ಅರೆ ವೈದ್ಯಕೀಯ ವಿಜ್ಞಾನ ವಿದ್ಯಾ ಸಂಸ್ಥೆಯ ಕಾಲೇಜಿನಲ್ಲಿ 5 ಬಗೆಯ ವಿವಿಧ ವಿಭಾಗಗಳಾದ ಡಿಪ್ಲೊಮಾ ಇನ್ ಹೆಲ್ತ್ ಇನ್ ಸ್ಪೆಕ್ಟರ್ (DHI), ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (DMLT), ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (DMIT), ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಆ್ಯಂಡ್ ಅನಸ್ತೇಷಿಯ ಟೆಕ್ನಾಲಜಿ (DOTAT), ಡಿಪ್ಲೊಮಾ ಇನ್ ಆಪ್ತಲ್ಮಿಕ್ ಟೆಕ್ನಾಲಜಿ (DOT) ಕೋರ್ಸ್‌ಗಳು ಇರುತ್ತವೆ. ಈ ವಿಭಾಗಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ವಿದ್ಯಾರ್ಥಿಗಳಿಗೆ ಸೂಕ್ತವಾದ ಕೊಠಡಿಯ ವ್ಯವಸ್ಥೆ, ಖಾಯಂ ನುರಿತ ಉಪನ್ಯಾಸಕರಿಲ್ಲದೆ ಮತ್ತು ಸಿಬ್ಬಂದಿಗಳ ಕೊರತೆ ಸೇರಿದಂತೆ ಮೂಲ ಸೌಕರ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಆದರಿಂದ ಸರ್ಕಾರ ವಿದ್ಯಾರ್ಥಿಗಳ ಕಡೆ ಗಮನ ನೀಡಬೇಕು ಎಂದರು
ಉನ್ನತ ಶಿಕ್ಷಣ ಪಡೆದು, ನುರಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಬಡ ವಿದ್ಯಾರ್ಥಿಗಳು ನೂರಾರು ಕನಸು ಕಟ್ಟಿಕೊಂಡು ಬಂದಿರುತ್ತಾರೆ ಆದರೆ ಸರ್ಕಾರಗಳು ಸರಿಯಾದ ಅಗತ್ಯ ಸೌಲಭ್ಯಗಳನ್ನು ನೀಡದೆ. ಕಟ್ಟಿಕೊಂಡ ಕನಸುಗಳನ್ನು ನುಚ್ಚು ನೂರು ಮಾಡುತ್ತಿರುವುದು ಸರಿಯಲ್ಲ. ಈ ರೀತಿಯ ಸರ್ಕಾರಿ ಶಾಲಾ- ಕಾಲೇಜುಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಖಾಸಗಿ ಕಾಲೇಜಿಗಳ ಕಡೆ ವಿದ್ಯಾರ್ಥಿಗಳ ಮುಖ ಮಾಡುವ ಆತಂಕಕಾರಿ ಬೆಳೆವಣಿಗಳು ಪ್ರಾರಂಭವಾಗುತ್ತವೆ.ಆದರಿಂದ ಸರ್ಕಾರ ಎಚ್ಚೆತುಕೊಂಡು ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಹಾವೇರಿಯ ಅರೆ ವೈದ್ಯಕೀಯ ಕಾಲೇಜಿಗೆ ಸ್ವಂತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ನುರಿತ ಖಾಯಂ ಉಪನ್ಯಾಸಕರು, ಹಾಸ್ಟೆಲ್ ವ್ಯವಸ್ಥೆ, ಪ್ರೋತ್ಸಾಹ ಧನ, ಸ್ಕಾಲರ್ಶಿಪ್ ಸೇರಿದಂತೆ ಸಂಪೂರ್ಣ ಎಲ್ಲಾ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ. ಒಂದು ವೇಳೆ ವಿದ್ಯಾರ್ಥಿಗಳ ಈ ಎಲ್ಲಾ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಮತ್ತು ರಾಜ್ಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ತಾಲ್ಲೂಕು ಕಾರ್ಯದರ್ಶಿ ಕಾವ್ಯ ಹನಗೋಡಿಮಠ, ಮುಖಂಡರಾದ ರಾಹುಲ್ ಕಡೆಮನಿ, ಪವನ ಎಚ್ ಆರ್, ಪವಿತ್ರ ಆಲದಕಟ್ಟಿ, ಚಿನ್ನಮ್ಮ ಎನ್ ಎಚ್, ಲತಾ ಎಮ್, ಶಿವರಾಜ ಬಿ ಕೆ, ಚಂದನಾ ಆರ್, ಐಶ್ವರ್ಯ ಎ, ಪಲ್ಲವಿ ಜಿ, ಲಕ್ಷ್ಮಿ, ಸುವರ್ಣ ಎನ್ ಡಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.