ಕರಾವಳಿ ಕಾಲೇಜ್ ವಿದ್ಯಾರ್ಥಿ ಭರತ್ ಭಾಸ್ಕರ್ ಆತ್ಮಹತ್ಯೆ-ಆಡಳಿತ ಮಂಡಳಿ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ. ಎಸ್.ಎಫ್.ಐ

ಮಂಗಳೂರು :  ಮಂಗಳೂರು ನಗರದ ಕರಾವಳಿ ಕಾಲೇಜು ವಿದ್ಯಾರ್ಥಿ ಭರತ್ ಭಾಸ್ಕರ್ ಎಂಬಾತ ಕಾಲೇಜು ಸಮಸ್ಯೆಗಳಿಂದ ಮನನೊಂದು ತನ್ನ ಸಾವಿಗೆ ಕಾಲೇಜಿನ ಅವ್ಯವಸ್ಥೆಯೇ ಕಾರಣವೆಂದು ಪತ್ರ ಬರೆದು ಆತ್ಮಹತ್ಯೆ ನಡೆಸಿರುವ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಹಾಗೂ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಮತ್ತು ಮಂಗಳೂರು ನಗರ ಪೋಲೀಸ್ ಆಯುಕ್ತರಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ದ.ಕ ಜಿಲ್ಲಾ ಸಮಿತಿ ಮನವಿಯನ್ನು ಸಲ್ಲಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯು ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಇಲ್ಲಿಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ಬಹುತೇಕ ಖಾಸಗೀ ಶಿಕ್ಷಣ ಸಂಸ್ಥೆಗಳು ಸರಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ದುಬಾರಿ ಶುಲ್ಕವನ್ನು ವಸೂಲಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸುಲಿಗೆ ನಡೆಸುತ್ತಿವೆ. ಈ ರೀತಿ ಶುಲ್ಕದ ಹೆಸರಿನಲ್ಲಿ ಸುಲಿಗೆ, ಸರಿಯಾದ ಸಂಖ್ಯೆಯ ಶಿಕ್ಷಕರನ್ನು ನೇಮಿಸದೆ ಇರುವ ಶಿಕ್ಷಕರಿಗೆ ತಿಂಗಳ ವೇತನವನ್ನೂ ನೀಡದೆ ಸತಾಯಿಸುವುದು, ಕೊಠಡಿಗಳ ಕೊರತೆ ಹೀಗೆ ಮೊದಲಾದ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಗುಣಮಟ್ಟದ ಶಿಕ್ಷಣದಿಂದ ವಂಚಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳ ಫಲಿತಾಂಶ ಮತ್ತು ಅವರ ಭವಿಷ್ಯಕ್ಕೆ ತೊಡಕಾಗುತ್ತಿದ್ದು ಇಂತಹ ಗಂಭೀರ ಸಮಸ್ಯೆಗಳು ಅವರ ಮಾನಸಿಕ ಸ್ಥಿತಿಯನ್ನು ಕುಗ್ಗಿಸುವುದರಿಂದ ಕೆಲವೊಂದು ವಿದ್ಯಾರ್ಥಿಗಳು ಖಿನ್ನತೆಗೊಳಗಾಗಿ ಆತ್ಮಹತ್ಯೆಯಂತಹ ಕೆಲಸಗಳಿಗೆ ಪ್ರೇರೇಪಿಸುತ್ತಿದ್ದೆ. ಈಗಾಗಲೇ ಮಂಗಳೂರಿನ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಲು ಸಾಲು ಶೈಕ್ಷಣಿಕ ಹತ್ಯೆಗಳು ನಡೆದಿದ್ದು ಈ ಕುರಿತು ಜಿಲ್ಲಾಡಳಿತವಾಗಲಿ, ಶಿಕ್ಷಣ ಇಲಾಖೆಯಾಗಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಜಾಣ ಮೌನ ವಹಿಸುವ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಒಡೆಯರ ಹಿತವನ್ನು ರಕ್ಷಿಸುತ್ತಿದೆ.

ಇದನ್ನೂ ಓದಿ : ನನ್ನ ಸಾವಿಗೆ ಕರಾವಳಿ ಕಾಲೇಜು ಕಾರಣ : ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಈ ಎಲ್ಲಾ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಮಂಗಳೂರಿನ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಶೈಕ್ಷಣಿಕ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈವರೆಗು ಶಿಕ್ಷಣ ಸಂಸ್ಥೆಗಳಲ್ಲಿ ನಡೆದಿರುವ ಎಲ್ಲಾ ಆತ್ಮಹತ್ಯೆ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು. ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರಚೋದಿಸುವ ಹಿಂದಿರುವ ನೈಜ ಕಾರಣಗಳನ್ನು ಪತ್ತೆಹಚ್ಚಬೇಕು ಮತ್ತು ಅವರ ಸಾವಿಗೆ ಕಾರಣರಾದ ಕಾಲೇಜು ಆಡಳಿತ ಮಂಡಳಿಯ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ದ.ಕ  ಜಿಲ್ಲಾ ಸಂಚಾಲಕ ವಿನಿತ್ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Donate Janashakthi Media

Leave a Reply

Your email address will not be published. Required fields are marked *