ಹಾವೇರಿ: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಹುತಾತ್ಮ ಜ್ಯೋತಿ ಯಾತ್ರೆ ನಡೆಯಿತು. ಸ್ವಾತಂತ್ರ್ಯ ಸಮರದಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ಮೇಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠರವರ ಹುತಾತ್ಮ ಜ್ಯೋತಿ ಯಾತ್ರೆಯು ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಆರಂಭವಾಯಿತು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಮೈಲಾರ ಮಹದೇವಪ್ಪರವರ ಮೂಮ್ಮಗ ಎಚ್.ಎಸ್.ಮಹದೇವ, ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಹುತಾತ್ಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಎಸ್‌ಎಫ್‌ಐ, ಡಿವೈಎಫ್ಐ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಹುತಾತ್ಮ ಜ್ಯೋತಿಯನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾಗಿ ನಗರದ ಹೊರವಲಯದಲ್ಲಿರುವ ಮೈಲಾರ ಮಹದೇವಪ್ಪನವರ ಐಕ್ಯ ಸ್ಥಳ ವೀರಸೌಧದವರೆಗೂ ಕಾಲ್ನಡಿಗೆಯ ಜಾಥಾ ನಡೆಸಿದರು. ನಂತರ ಹುತಾತ್ಮ ಜ್ಯೋತಿಯನ್ನು ವೀರಸೌಧದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ಪೊನ್ನಣ್ಣ ಕ್ಷೇತ್ರದಲ್ಲಿ ಪ್ರಥಮ ಪ್ರಗತಿಫಥ ರಸ್ತೆ ಯೋಜನೆಗೆ ಚಾಲನೆ
ಹುತಾತ್ಮ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಹುತಾತ್ಮ ಮೈಲಾರ ಮಹದೇವಪ್ಪನವರ ಜೀವನಗಾಥೆಯು ಯುವಜನತೆಗೆ ಸದಾಕಾಲವೂ ಸ್ಪೂರ್ತಿದಾಯಕ. ವಿದ್ಯಾರ್ಥಿಗಳು ಅವರ ಜೀವನಗಾಥೆಯನ್ನು ಅರಿತುಕೊಂಡು ತಮ್ಮ ಬದುಕಿನಲ್ಲಿಯೂ ರೂಢಿಸಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಸಂಗಾತಿಗಳಾದ ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಅವರೊಂದಿಗೆ ಬ್ರಿಟಿಷರ ವಿರುದ್ಧ ಧೀರೋದತ್ತವಾಗಿ ಹೋರಾಡುತ್ತಲೆ ಅವರ ತ್ಯಾಗ, ಬಲದಾನವನ್ನು ವಿದ್ಯಾರ್ಥಿ ಯುವಜನತೆ ಅರಿಯಬೇಕು ಎಂದರು.
ಮೈಲಾರ ಮಹಾದೇವಪ್ಪ ಅವರು ತಮ್ಮ ಸಂಗಾತಿಗಳ ಜೊತೆ ಸೇರಿಕೊಂಡು ಗಾಂಧೀಜಿ ಅವರ ಅನುಯಾಯಿಯಾಗಿದ್ದುಕೊಂಡೆ ಕ್ರಾಂತಿಕಾರಿ ಮಾರ್ಗದಲ್ಲಿ ಮುನ್ನಡೆದ ಪರಿಣಾಮ ಸಾಮ್ರಾಜ್ಯಶಾಹಿ ಬ್ರಿಟಿಷರ ಗುಂಡಿಗೆ ಧೈರ್ಯದಿಂದಲೆ ಎದೆಯೊಡ್ಡಿ ಹುತಾತ್ಮ ಚೇತನರಾದರು. ಇಂತಹ ವೀರಸೇನಾನಿಗಳ ತ್ಯಾಗ ಹಾಗೂ ದೇಶಪ್ರೇಮವನ್ನು ಸ್ಮರಿಸುವ ಜೊತೆಯಲ್ಲಿ ಅವರ ಧೈರ್ಯ, ಬದ್ಧತೆಯ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಂಡು ದೇಶ ಕಟ್ಟಲು ಮುಂದಾಗಬೇಕು ಎಂದು ಕರೆ ನೀಡಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಮುಕ್ತಗೊಳಿಸಲು ಅದೆಷ್ಟೋ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ. ಕೇವಲ 32 ವರ್ಷ ಬದುಕಿದ್ದ ಮೈಲಾರರು ಬ್ರಿಟಿಷರ ಗುಂಡುಗಳಿಗೆ ಅಂಜದೇ ಸ್ವಾತಂತ್ರ್ಯಕ್ಕಾಗಿ ವೀರಮರಣವನ್ನಪ್ಪಿದ್ದಾರೆ. ಅಂತಹ ವೀರಸೇನಾನಿಯ ದೇಶಸೇವೆಯನ್ನು ವಿದ್ಯಾರ್ಥಿ ಯುವಜನರು ಸ್ಮರಿಸಬೇಕು. 1930 ರಲ್ಲಿ ಮಹಾತ್ಮ ಗಾಂಧೀಜಿಯವರು ನಡೆಸಿದ ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, 1941ರಲ್ಲಿ ನಡೆದ ಸತ್ಯಾಗ್ರಹದಲ್ಲಿ ಸೆರೆಮನೆವಾಸ ಅನುಭವಿಸಿದ್ದರು.
ಶಾಲಾ ಹಂತದಿಂದಲೇ ಸ್ವಾತಂತ್ರ್ಯ ಹೋರಾಟ ಆರಂಭಿಸಿದ ಮೈಲಾರ ಮಹದೇವ ಹಾಗೂ ಅವರ ಒಡನಾಡಿಗಳು, ಭಗತ್ ಸಿಂಗ್, ರಾಜಗುರು, ಸುಖದೇವ ರಂತೆ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಅವರ ನೆಡೆಸಿದ ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ನಾವು ಮುಂದುವರೆಸಬೇಕು ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮೀಪ್ರಭ ಎಸ್. ಹುಲ್ಲೂರು, ರೇಣುಕಾ ಕಹಾರ, ನೇತ್ರಾ ಧರಿಯಪ್ಪನವರ, ಮಹೇಶ್ ಮರೋಳ, ನೀಲಪ್ಪ ಹರಿಜನ, ಖಲಂದರ್, ವಿಶಾಲಾ ಬಿ. ಮುಳಗುಂದ, ಮೇಘನಾ ರಾ. ಕಹಾರ, ಅನ್ವಿಕಾ ಆರ್.ಬಿ, ಸನ್ನಿಧಿ ಪಾಂಡೆ, ಅಭಿಷೇಕ ಬಿ. ಶಿವರಾಜ ಪ. ಗೌಡಗೆರೆ, ಸಮರ್ಥ ಆರ್.ಕೆ, ಧನುಷ್ ದೊಡಮನಿ, ಅನುಪಮಾ ವಿ, ತೇಜಸ್ ಎನ್ ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಶತಮಾನದ ಸೇಡಿನ ಕಿಡಿಜಗದೊಲವಿನ ಜ್ಯೋತಿಯೆ |ಪಿಚ್ಚಳ್ಳಿ ಶ್ರೀನಿವಾಸ್ Janashakthi Media