ಗಂಗಾವತಿ: ತಾಲೂಕಿನ ಅರಳಹಳ್ಳಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಪ್ರಾಪ್ತ ವಿದ್ಯಾರ್ಥಿನಿಯ ಹೆರಿಗೆ ಪ್ರಕರಣ ದೃಢಪಟ್ಟಿದ್ದು, ಸಂಬಂಧಿತ ಕನಕಗಿರಿ ಪೊಲೀಸ್ ಠಾಣೆಯಲ್ಲಿ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ.
ಕುಕನೂರು ಪ್ರಕರಣ ಮಾಸುವ ಮುನ್ನವೇ ಮುರಾರ್ಜಿ ದೇಸಾಯಿ ಶೈಕ್ಷಣಿಕ ಸಂಸ್ಥೆಯೊಳಗೆ ಇಂತಹ ಘಟನೆ ಸಂಭವಿಸಿರುವುದು ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಘಟನೆ ನಡೆದ ನಂತರ ಸುಮಾರು ಮೂರು ದಿನಗಳ ಕಾಲ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಬಗ್ಗೆ ಆರೋಪಗಳು ಮತ್ತಷ್ಟು ಬೇಜವಾಬ್ದಾರಿತನವನ್ನು ತೋರಿಸುತ್ತದೆ.
ಇದನ್ನೂ ಓದಿ: ಭದ್ರತಾ ಸಿಬ್ಬಂದಿ; ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಎಬಿವಿಪಿ ಗೂಂಡಾಗಳನ್ನು ಬಂಧಿಸಿ: ಎಸ್‌ಎಫ್‌ಐ
ಈ ಹಿನ್ನೆಲೆಯಲ್ಲಿ, ಘಟನೆ ಮುಚ್ಚಿಹಾಕಲು ಪ್ರಯತ್ನಿಸಿದ ನಿಲಯ ಪಾಲಕರು, ಪ್ರಾಂಶುಪಾಲರು ಸೇರಿದಂತೆ ಸಂಬಂಧಿತ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಭಾರತದ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕೊಪ್ಪಳ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.
ಅಪ್ರಾಪ್ತ ಸಂತ್ರಸ್ತೆ ಬಾಲಕಿಯ ಸುರಕ್ಷತೆ, ಗೌಪ್ಯತೆ ಹಾಗೂ ಮಾನಸಿಕ ಆರೈಕೆಯನ್ನು ಖಚಿತಪಡಿಸಬೇಕು. ಪ್ರಕರಣದ ಸಮಗ್ರ ಹಾಗೂ ಸಮಯಬದ್ಧ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಭದ್ರತಾ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ಇಲ್ಲದಿದ್ದಲ್ಲಿ ಎಸ್ಎಫ್ಐ ಕೊಪ್ಪಳ ಜಿಲ್ಲಾ ಸಮಿತಿ ಜಿಲ್ಲಾಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅಗ್ರಹಿಸುತ್ತಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶಿವುಕುಮಾರ್ ಈಚನಾಳ, ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷರಾದ ನಾಗರಾಜ್ ಯು, ಶರೀಫ್ ಎಂ, ಜಂಟಿ ಕಾರ್ಯದರ್ಶಿ ಬಸಯ್ಯ ಹಿರೇಮಠ, ಮಹಮ್ಮದ್, ಟಿಪ್ಪು, ಗಿರಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ನೋಡಿ: “ಯು.ಎಸ್. ಸಾಮ್ರಾಜ್ಯಶಾಹಿ: ಓದುಗರ ಅಲೆ ಎಬ್ಬಿಸಿದ ಪುಸ್ತಕ” Janashakthi Media
