ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್‌ ದಾಖಲು, ರಾಜಕಾರಣಿಗಳ ಶ್ರೀರಕ್ಷೆ..!?

ಮೈಸೂರು: ಮೈಸೂರಿನಲ್ಲಿ ಉದ್ಯಮಿ ಎಂದು ಹೇಳಿಕೊಳ್ಳುತ್ತಾ, ರಾಜಕೀಯ ನಾಯಕರು, ಪೊಲೀಸ್‌ ಅಧಿಕಾರಿಗಳ ಜತೆ ನೇರ ಸಂಪರ್ಕವಿದೆ ಎಂದು ನಂಬಿಸುತ್ತಿರುವ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಎಂಬಾತನ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ಕೇಸು ದಾಖಲಿಸಿದ್ದಾರೆ.

”ಜಾಹೀರಾತನ್ನು ನೋಡಿ 2019ರ ಮಾರ್ಚ್ 2ರಂದು ಮೈಸೂರಿನ ಬಡಾವಣೆಯೊಂದರಲ್ಲಿರುವ ರವಿ ನಿವಾಸಕ್ಕೆ ಸಂದರ್ಶನಕ್ಕೆ ತೆರಳಿದ್ದೆ. ಆತ ಸಂದರ್ಶನ ನಡೆಸಿ ಕೆಲಸಕ್ಕೆ ಬನ್ನಿ ಎಂದು ತಿಳಿಸಿದ. ಆತನ ಮಾತು ನಂಬಿ ಕೆಲಸಕ್ಕೆ ಹೋದ ನನಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕ ದೌರ್ಜನ್ಯ ನಡೆಸಿದ. ನಂತರ ನನ್ನ ಬೆತ್ತಲೆ ಚಿತ್ರಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ ಮೇಲ್ ಮಾಡಿದ್ದ,” ಎಂದು ಬಿಇ ಪದವೀಧರ ದಲಿತ ಯುವತಿ ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ಪೊಲೀಸ್‌ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

”ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಹತ್ಯೆ ಮಾಡುತ್ತೇನೆ ಎಂದು ಸ್ಯಾಂಟ್ರೋ ರವಿ ಜೀವ ಬೆದರಿಕೆಯೊಡ್ಡಿದ. ಆ ನಂತರ ಬೆದರಿಸಿ ಬಲವಂತವಾಗಿ ವಿವಾಹವಾದ. ಬಳಿಕ ಒಂದು ದಿನ ನಾನು ತವರು ಮನೆಗೆ ತೆರಳಿದ್ದೆ. ಆಗ ನನ್ನ ಮನೆಗೆ ಬಂದ ಸ್ಯಾಂಟ್ರೋ ರವಿ ನನ್ನ ಮತ್ತು ನನ್ನ ತಂದೆಗೆ ಜಾತಿ ನಿಂದನೆ ಮಾಡಿ, ನನ್ನ ಮೇಲೆ ಹಲ್ಲೆ ನಡೆಸಿದ. ಈ ಬೆಳವಣಿಗೆಯ ನಂತರ ಮೈಸೂರಿನ ಆತನ ಮನೆಯಿಂದ ನನ್ನನ್ನು ಹೊರಹಾಕಿದ. ಕೆಲವು ದಿನಗಳ ನಂತರ ಹೋಟೆಲ್‌ಗೆ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಯುವತಿ ದೂರಿದ್ದಾರೆ.

ಇದಾದ ನಂತರ ಮೈಸೂರಿನ ಮತ್ತೊಂದು ಬಡಾವಣೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ 2020 ಮಾರ್ಚಿನಿಂದ ಒಟ್ಟಿಗೆ ಜೀವನ ನಡೆಸೋಣವೆಂದು ಕರೆಸಿಕೊಂಡ. ಆ ಸಂದರ್ಭ ವರದಕ್ಷಿಣೆ ಕಿರುಕುಳ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾನೆ. ದೌರ್ಜನ್ಯದ ನಂತರವೂ 2021ರಿಂದ ಬೆಂಗಳೂರಿನಲ್ಲಿವಾಸ ಮಾಡೋಣವೆಂದು ಕರೆದುಕೊಂಡು ಹೋಗಿದ್ದ. ಆದರೂ ನಿರಂತರವಾಗಿ ದೌರ್ಜನ್ಯ ಮುಂದುವರಿದಿದೆ,” ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ದಲಿತ ಹೆಣ್ಣು ಮಗಳನ್ನು ಅತ್ಯಾಚಾರಗೈದಿದ್ದ ಆರೋಪದಡಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯಿದೆ ಕೇಸ್ ದಾಖಲು ಮಾಡಲಾಗಿದೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಹಿಳೆಯ ಬೆಂಬಲಕ್ಕೆ ನಿಂತಿದೆ.

ಸ್ಯಾಂಟ್ರೋ ರವಿ ಯಾರು? : ಮೈಸೂರಿನವನಾಗಿರುವ ಸ್ಯಾಂಟ್ರೋ ರವಿ ವಿರುದ್ಧ ಈ ಹಿಂದೆ ಹಲವೆಡೆ ಪ್ರಕರಣ ದಾಖಲಾಗಿದೆ. ವೇಶ್ಯಾವಾಟಿಕೆ ದಂಧೆಯಲ್ಲಿ ತಲೆ ಹಿಡುಕನಾಗಿ ಕೆಲಸ ಮಾಡುತ್ತಿದ್ದ ಈತನಿಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇದೆ ಎನ್ನಲಾಗುತ್ತಿದೆ. 10 ವರ್ಷಗಳ ಹಿಂದೆಯೇ ವೇಶ್ಯಾವಾಟಿಕೆ ದಂಧೆಯಡಿ ಮೈಸೂರಿನಲ್ಲಿ 10ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿತ್ತು. ಈತನ ಆಟಾಟೋಪಕ್ಕೆ ಕಡಿವಾಣ ಹಾಕಲು ಗೂಂಡಾ ಕಾಯಿದೆ ಬಳಕೆ ಮಾಡಲಾಗಿತ್ತು. ಅಲ್ಲದೆ 11 ತಿಂಗಳು ಜೈಲುವಾಸ ಕೂಡ ಅನುಭವಿಸಿದ್ದ.

ಈ ನಡುವೆ ಆರೋಪಿಯ ಹಿನ್ನೆಲೆಯನ್ನು ಕೆದಕುತ್ತಾ ಹೋದ ಪೊಲೀಸರಿಗೆ ಆತನನ್ನು ಕುರಿತಾದ ಹಲವು ಆಡಿಯೊ, ಚಿತ್ರಗಳು ಸಿಕ್ಕಿವೆ. ಆರೋಪಿ ಮಂಜುನಾಥ್‌ ತಾನು ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ರಾಜಕಾರಣಿಗಳಿಗೆ ಆಪ್ತನೆಂಬಂತೆ ಫೋಸು ಕೊಡುತ್ತಿರುವುದು ಬೆಳಕಿಗೆ ಬಂದಿದೆ. ಜತೆಗೆ ಆತ ಅವರೊಂದಿಗೆ ಇರುವ ಭಾವಚಿತ್ರಗಳನ್ನೂ ಇಟ್ಟುಕೊಂಡಿದ್ದು, ಅವೆಲ್ಲ ಈಗ ವೈರಲ್‌ ಆಗಿವೆ.

ಸಿಎಂ ಬಸವರಾಜ ಬೊಮ್ಮಾಯಿ, ಪುತ್ರ ಭರತ್ ಬೊಮ್ಮಾಯಿ, ಸಚಿವರಾದ ಅಶೋಕ, ಆರಗ ಜ್ಞಾನೇಂದ್ರ ಜತೆ ಇರುವ ಫೋಟೊಗಳು ವೈರಲ್‌ ಆಗುತ್ತಿವೆ. ಕೆಲವರು ಆತನ ಜತೆ ಗಳಸ್ಯ ಕಂಠಸ್ಯ ಎಂಬಂತೆಯೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಯಾಟ್ರೋ ರವಿ ಕಾಲ್ ಲಿಸ್ಟ್ ನಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಸುಧಾಕರ್, ಆರಗ ಜ್ಞಾನೇಂದ್ರ, ಶಾಸಕ ಸಾ.ರಾ.ಮಹೇಶ್, ಐಪಿಎಸ್ ಅಧಿಕಾರಿ ಜಿನೇಂದ್ರ ಕಾಂಗಾವಿ ಜತೆಗೆ ಸಂಪರ್ಕ ಇರುವುದು ಗೊತ್ತಾಗಿದೆ. ಆರೋಪಿ ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಬಳಸಿರುವ ಆಡಿಯೋ ವೈರಲ್ ಆಗಿದ್ದು, ಬೇಕಾದ ಸ್ಟೇಷನ್‌ಗೆ ಮಾಡಿಸಿಕೊಡುವ ಭರವಸೆ ನೀಡುತ್ತಾನೆ. ಆರೋಪಿ ಕಂತೆ ಕಂತೆ ನೋಟ್ ಇಟ್ಟುಕೊಂಡಿರುವ ಪೋಟೊ ಕೂಡ ವೈರಲ್ ಆಗಿದೆ. ಮೈಸೂರು ಪೊಲೀಸರು ಈಗ ಆತನ ನಿಜ ಬಣ್ಣ ಬಯಲು ಮಾಡಲು ಮುಂದಾಗಿದ್ದಾರೆ.

ಸ್ಯಾಂಟ್ರೋ ರವಿ ಜತೆ ಸಚಿವರ ನಂಟು: ಎಚ್‌.ಡಿ.ಕುಮಾರಸ್ವಾಮಿ

ಮೈಸೂರಿನಲ್ಲಿ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿ ವಂಚಿಸಿರುವ ಪ್ರಕರಣದ ಆರೋಪಿಯಾಗಿರುವ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಜತೆ ರಾಜ್ಯ ಸರ್ಕಾರದ ಹಲವು ಸಚಿವರು ನಂಟು ಹೊಂದಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘2018ರಲ್ಲಿ ನನ್ನ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಯಾರನ್ನು ಬಳಸಿಕೊಳ್ಳಲಾಗಿತ್ತು? ಮುಂಬೈಗೆ ಹೋಗಿದ್ದವರ ಮೋಜು, ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದವರು ಯಾರು? ಸ್ಯಾಂಟ್ರೋ ರವಿ ಮತ್ತು ರಾಜ್ಯದ ಕೆಲವು ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧವೇನು? ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ನನ್ನ ಸರ್ಕಾರ ಉರುಳಿಸಲು 17 ಮಂದಿಯನ್ನು ಮುಂಬೈಗೆ ಕರೆದುಕೊಂಡು ಹೋದ ವ್ಯಕ್ತಿ ಯಾರು? ಕರ್ನಾಟಕವನ್ನು ರಕ್ಷಣೆ ಮಾಡುವುದು ಜೆಡಿಎಸ್‌ ಪಕ್ಷದಿಂದ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದರು. ಈ ರಾಜ್ಯವು ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ. ಈ ಸರ್ಕಾರದ ಮಂತ್ರಿಗಳ ಹಣೆಬರಹ ಇಲ್ಲಿದೆ ನೋಡಿ’ ಎಂದು ಹಲವು ಸಚಿವರು ಸ್ಯಾಂಟ್ರೋ ರವಿ ಜತೆಗಿರುವ ಫೋಟೊಗಳನ್ನು ಪ್ರದರ್ಶಿಸಿದರು.

‘ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. ಮೈಸೂರು, ಬೆಂಗಳೂರಿನಲ್ಲಿ ಆತನ ವಿರುದ್ಧ ಪ್ರಕರಣಗಳಿವೆ. ಇತ್ತೀಚಿನವರೆಗೂ ಕುಮಾರಕೃಪಾ ಅತಿಥಿ ಗೃಹದಲ್ಲೇ ಕುಳಿತು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದ್ದಾನೆ. ಆತನಿಗೆ ಅಲ್ಲಿ ಕೊಠಡಿ ನೀಡಿದವರು ಯಾರು? ಅದಕ್ಕೆ ಶಿಫಾರಸು ಮಾಡಿದ್ದವರು ಯಾರು? ಎಂಬುದನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರದಲ್ಲಿ ಧಮ್‌, ತಾಕತ್ತು ಪ್ರದರ್ಶಿಬೇಕು’ ಎಂದು ಒತ್ತಾಯಿಸಿದರು.

Donate Janashakthi Media

Leave a Reply

Your email address will not be published. Required fields are marked *