ಕಲಬುರಗಿ : ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಲಾಡ್ಲಾಪೂರ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಪ್ರಭುಕಾಂತ ಧನ್ನಾ ಎಂಬುವವರನ್ನು ವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶಿಕ್ಷಕ ಪ್ರಭುಕಾಂತ ಹಲವು ದಿನಗಳಿಂದ ಹೈಸ್ಕೂಲ್ ಬಾಲಕಿಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಶಾಲೆಯಲ್ಲಿ ಆತನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿಯರು ಸಾಮೂಹಿಕವಾಗಿ ದೂರಿದ್ದಾರೆ.
ತಾನು ಹೇಳದಂತೆ ಕೇಳದೆ ಹೋದಲ್ಲಿ ಎಲ್ಲರ ಆಂತರಿಂಕ ಅಂಕಕ್ಕೆ ಕೊಕ್ಕೆ ಹಾಕೋದಾಗಿಯೂ ಶಿಕ್ಷಕ ಹೆದರಿಸುತ್ತಿದ್ದನೆಂದು ಮಕ್ಕಳು ಆರೋಪದಲ್ಲಿ ಹೇಳಿದ್ದಾರೆ. ವಿದ್ಯಾರ್ಥಿನಿಯರ ಅಗಾಂಗ ಸ್ಪರ್ಶಿಸುತ್ತಿದ್ದ, ಇದನ್ನು ಸಹಿಸಕೊಳ್ಳದೆ ಮಕ್ಕಳು ಗ್ರಾಮಸ್ಥರಿಗೆ ದೂರು ಸಹ ನೀಡಿದ್ದರು. ಗ್ರಾಮಸ್ಥರು, ಪೋಷಕರು ಶಿಕ್ಷಕನಿಗೆ ಎಚ್ಚರಿಕೆ ಕೂಡ ನೀಡಿದ್ದರು. ಹೀಗಿದ್ದರೂ ಸಹ ಶಿಕ್ಷಕ ತನ್ನ ಕಾಮುಕ ದುರ್ವರ್ತನೆ ಮುಂದುವರಿಸಿದ್ದನೆಂದು ಹೇಳಲಾಗುತ್ತಿದೆ. ಲೈಂಗಿಕ ಕಿರುಕುಳ
ಇದನ್ನೂ ಓದಿ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ : ಇಬ್ಬರು ಶಿಕ್ಷಕರು ಅಮಾನತು
ಶಿಕ್ಷಕನ ಕಾಮುಕ ವರ್ತನೆ ಕುರಿತಂತೆ ಗ್ರಾಮಸ್ಥರು ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಕ್ಷಣವೇ ಶಾಲೆಗೆ ಭೇಟಿ ನೀಡಿದ್ದ ಜಿಲ್ಲಾ ಎಸ್ಪಿ ಇಶಾ ಪಂತ್, ಡಿಡಿಪಿಐ ಸಕ್ರೆಪ್ಪಗೌಡ, ಸಿಪಿಐ ಪ್ರಕಾಶ ಯಾತನೂರ್, ಬಿಇಓ ಸಿದ್ದವೀರಯ್ಯ ಸೇರಿದಂತೆ ಹಲವರು ನೊಂದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಬೆಳಗ್ಗೆ 10 ರಿಂದ ಸೆಜೆ 6ರ ವರೆಗೂ ಶಾಲೆಯಲ್ಲೇ ಇದ್ದು ಮಕ್ಕಳ ಗೋಳಾಟ, ಅಹವಾಲು ಎಲ್ಲವನ್ನು ಆಲಿಸಿದ್ದ ಅಧಿಕಾರಿಗಳು ನಂತರ ಪ್ರಭಾರ ಮುಖ್ಯ ಗುರುವಿನ ಬಂಧನಕ್ಕೆ ಮುಂದಾಗಿದ್ದಾರೆ. ಹೈಸ್ಕೂಲ್ ಮಕ್ಕಳು ಈ ಕಾಮುಕ ಶಿಕ್ಷಕನಿಂದ ತಾವು ನಿತ್ಯ ಶಾಲೆಯಲ್ಲಿ ಅನುಭವಿಸುತ್ತಿರುವ ಗೋಳನ್ನು ವಿವರಿಸಿದ್ದಲ್ಲದೆ ಇವನನ್ನು ತಕ್ಷಣ ಇಲ್ಲಿಂದ ತೊಲಗಿಸುವಂತೆಯೂ ಕೋರಿದ್ದಾರೆಂದು ಗೊತ್ತಾಗಿದೆ.
ಮಕ್ಕಳಿಂದ ಅಹವಾಲು ಆಲಿಸಿದ ನಂತರ ತಕ್ಷಣವೇ ಆರೋಪಿ ಮುಖ್ಯ ಗುರುವನ್ನು ವಶಕ್ಕೆ ಪಡೆಯಲು ಎಸ್ಪಿ ಇಶಾ ಪಂತ್ ಆದೇಶಿಸಿದ್ದರ ಬೆನ್ನಲ್ಲೇ ಸಿಪಿಐ ಪ್ರಕಾಶ ಯಾತನೂರ್ ಅವರು ಶಿಕ್ಷಕ ಧನ್ನಾ ಇವರನ್ನು ಬಂಧಿಸಿದ್ದಾರೆ. ವಾಡಿ ಠಾಣೆಯಲ್ಲಿ ಇವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಲೈಂಗಿಕ ಕಿರುಕುಳ