ಬೆಂಗಳೂರು : ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಹಲ್ಲೆ ನಡೆಸಿದಂತಹ ಅಮಾನವೀಯ ಘಟನೆಯೊಂದು ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಘಟನೆ ಬಳಿಕ ಪೊಲೀಸರು ದೂರನ್ನು ದಾಖಲಿಸಿಕೊಳ್ಳಲು 2 ದಿನಗಳ ಕಾಲ ಕಾಯಿಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲದೆ,ಇದೇ ಗ್ರಾಮದ ನಿವಾಸಿಗಳಾದ ರಾಮಕೃಷ್ಣ ರೆಡ್ಡಿ ಹಾಗೂ ಇಂದ್ರಮ್ಮ ಪುತ್ರ ಸುನೀಲ್ ಕುಮಾರ್ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ : ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ
ಶಾಂತಿಪ್ರಿಯ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಮಕೃಷ್ಣ ರೆಡ್ಡಿಯಿಂದ ಒಂದು ವರ್ಷದ ಹಿಂದೆ ಶೇಕಡ 30%ರಷ್ಟು ಬಡ್ಡಿದರದಲ್ಲಿ 1 ಲಕ್ಷ ಸಾಲವನ್ನು ಪಡೆದಿದ್ದರು. ಅಂತೆ ಕಾಲಕಾಲಕ್ಕೆ ಬಡ್ಡಿ ಕಟ್ಟಿಕೊಂಡು ಬಂದಿದ್ರು. ಆದರೆ ಇತ್ತೀಚಿಗೆ ಹಣ ವಾಪಸ್ಸು ನೀಡುವಂತೆ ಸುನಿಲ್ ಒತ್ತಡ ಹಾಕಿದ್ದರು ಆದರೆ ಹಣ ಇಲ್ಲದೇ ಕಾರಣಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದಿತ್ತು.
ಇನ್ನು ಪಂಚಾಯಿತಿ ತೀರ್ಮಾನದಲ್ಲಿ ಜಮೀನು ಮಾರಾಟ ಮಾಡಿ ಹಣ ಕೊಡುವುದಾಗಿ ರಾಜಿ ಸಂಧಾನ ಆಗಿತ್ತು . ಆದರೂ ಕೂಡ ಭಾನುವಾರ ಬೆಳಗ್ಗೆ ಶಾಂತಿಪ್ರಿಯ ಮನೆಗೆ ನುಗ್ಗಿದ ಸುನೀಲ್ ಕುಮಾರ್ , ಕೃಷ್ಣಾರೆಡ್ಡಿ ಇಂದ್ರಮ್ಮ ಶಾಂತಿಪ್ರಿಯರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಇನ್ನು ತಮಗಾದ ಅನ್ಯಾಯದ ಬಗ್ಗೆ ಅವರ ಕುಟುಂಬದವೊಬ್ಬರು ಮಾಹಿತಿ ನೀಡಿದ್ದು,ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರ ವಿರುದ್ಧ ಐಪಿಸಿ ಸೆಕ್ಷನ್ 354 (ಬಿ), 504, 506, 323, 324 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.