ಧಾರವಾಡ : ವಿದ್ಯಾರ್ಥಿನಿಯ ಬದುಕಿಗೆ ಆದರ್ಶವಾಗಬೇಕಿದ್ದ ಪ್ರಾಧ್ಯಾಪಕನೊಬ್ಬ ತನ್ನ ಬಳಿ ಕಲಿಯುತ್ತಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳಿಸಿ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾನೆ, ಜೊತೆಗೆ ತನ್ನ ಹುದ್ದೆಗೆ ಸಂಚಕಾರ ತಂದುಕೊಂಡಿದ್ದಾನೆ. ಈ ಪ್ರಾಧ್ಯಾಪಕನದ್ದು ಇದೊಂದೇ ಅಲ್ಲ. ಕಳೆದ ನಾಲ್ಕು ವರ್ಷದ ಹಿಂದೆಯೂ ಇದೇ ರೀತಿ ರಂಪಾಟ ಮಾಡಿಕೊಂಡು ವರ್ಗಾವಣೆ ಆಗಿ ಹೋಗಿದ್ದ. ಆದರೆ, ಈಗ ಪುನಃ ಅದೇ ರಾಗ ಪ್ರಾರಂಭಿಸಿದ್ದು, ಈ ಬಾರಿ ರಾಜೀನಾಮೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರೊ. ಶೇಷಗಿರಿ.ಬಿ, ಎಂಬ ಪ್ರಾಧ್ಯಾಪಕನೇ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ಕಳಿಸಿ ತನ್ನ ಹುದ್ದೆಗೆ ಸಂಚಕಾರ ತಂದುಕೊಂಡಾತ. ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಪ್ರೊ. ಶೇಷಗಿರಿ ಪ್ರಾರಂಭದಲ್ಲಿ ಸಾಮಾನ್ಯವಾಗಿಯೇ ಸಂಪರ್ಕದಲ್ಲಿದ್ದು, ನಂತರದಲ್ಲಿ ಅಶ್ಲೀಲ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾನೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಇದಕ್ಕೆ ಪ್ರತಿರೋಧ ಒಡ್ಡಿದರೂ ಲೆಕ್ಕಿಸದೇ ಪ್ರಾಧ್ಯಾಪಕ ಪುನಃ ಅದನ್ನೇ ಮುಂದುವರೆಸಿದ್ದಾನೆ.
ಚಾಟ್ ಸಮೇತ ದೂರು : ಪ್ರಾಧ್ಯಾಪಕ ಮಾಡುತ್ತಿದ್ದ ಪ್ರತಿಯೊಂದು ಅಶ್ಲೀಲ ಸಂದೇಶಗಳ ಸ್ಕ್ರೀನ್ ಶಾಟ್ ಹೊಡೆದು ಅದನ್ನು ಪ್ರಿಂಟ್ ತೆಗೆಸಿದ ವಿದ್ಯಾರ್ಥಿನಿ ಪ್ರಾಧ್ಯಾಪಕ ನಡೆದುಕೊಳ್ಳುತ್ತಿದ್ದ ರೀತಿ ಮತ್ತು ಮಾಡುತ್ತಿದ್ದ ಸಂದೇಶದ ಎಲ್ಲ ದಾಖಲೆಗಳ ಸಮೇತ ದೂರನ್ನು ಪ್ರಾಚಾರ್ಯರಿಗೆ ನೀಡಿದ್ದಾರೆ. ಅಲ್ಲದೇ, ಈ ವಿಷಯ ಹೊರಗಡೆ ತಿಳಿಯಬಾರದು ಎಂಬ ಕಾರಣಕ್ಕೆ ದೂರಿನ ವಿಷಯವನ್ನು ಕಳೆದ ಒಂದು ವಾರದಿಂದ ಗೌಪ್ಯವಾಗಿಯೇ ಇರಿಸಲಾಗಿತ್ತೆನ್ನಲಾಗಿದ್ದು, ಮಂಗಳವಾರ ಹೊರ ಬಿದ್ದಿದೆ.
ತಪ್ಪೊಪ್ಪಿಗೆ, ರಾಜೀನಾಮೆ : ಪ್ರಾಧ್ಯಾಪಕ ಪ್ರೊ. ಶೇಷಗಿರಿ.ಬಿ. ವಿರುದ್ಧ ದೂರು ಬರುತ್ತಿದ್ದಂತೆ ಕಾಲೇಜಿನ ಪ್ರಾಚಾರ್ಯ ಶರತ್ ಬಾಬು ಅವರು ಪ್ರಾಧ್ಯಾಪಕನಿಂದ ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡಿದ್ದಲ್ಲದೇ ಆತನಿಂದ ರಾಜೀನಾಮೆಯನ್ನೂ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಆತನನ್ನು ಕೆಲಸದಿಂದ ಕಿತ್ತು ಹಾಕಿದರೆ ಬೇರೆಲ್ಲೂ ಉದ್ಯೋಗ ದೊರೆಯದಂತಾಗುತ್ತದೆ ಎಂಬ ಉದ್ದೇಶದಿಂದ ರಾಜೀನಾಮೆ ಪಡೆದಿರಬಹುದು ಎನ್ನುವುದು ವಿವಿಯಲ್ಲಿ ಕೇಳ ಬಂದಿರುವ ಮಾತು.
ಕಳೆದ ನಾಲ್ಕು ವರ್ಷಗಳ ಹಿಂದೆ ಸರ್. ಸಿದ್ಧಪ್ಪ ಕಂಬಳಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯ ಬೋಧನೆ ಮಾಡುತ್ತಿದ್ದ ಪ್ರೊ. ಶೇಷಗಿರಿ ಆಗಲೂ ಇದೇ ರೀತಿಯ ಭಾನಗಡಿ ಮಾಡಿ ಸಿಕ್ಕಿ ಹಾಕಿಕೊಂಡಿದ್ದ. ಆದರೆ, ಆ ಸಂದರ್ಭದಲ್ಲಿ ಅವನನ್ನು ಬೇರೆಡೆ ವರ್ಗಾವಣೆ ಮಾಡಿ ಪರಿಸ್ಥಿತಿ ತಿಳಿಗೊಳಿಸಲಾಗಿತ್ತು. ಕಳೆದ ಎರಡು ವರ್ಷದ ಹಿಂದೆ ಪುನಃ ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯ ಬೋಧನೆ ಮಾಡಲು ನೇಮಕ ಮಾಡಲಾಗಿತ್ತು. ಈಗಲೂ ಅದೇ ಚಾಳಿಯನ್ನೇ ಮುಂದುವರೆಸಿದ್ದು, ಇದಕ್ಕೆ ಧರ್ಮದೇಟು ಸಹ ಬಿದ್ದಿದೆ ಎಂದು ತಿಳಿದು ಬಂದಿದೆ.