ನವದೆಹಲಿ: ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಭಾರತ ರೆಸ್ಲಿಂಗ್ ಫೆಡರೇಶನ್(ಡಬ್ಲ್ಯುಎಫ್‌ಐ)ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಹೊರಿಸಬೇಕೇ ಬೇಡವೇ ಎಂಬುದರ ಕುರಿತು ಗುರುವಾರ ದೆಹಲಿ ಪೊಲೀಸರು ವಾದಗಳನ್ನು ಪುನರಾರಂಭಿಸಿದ್ದಾರೆ. ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಾಜ್‌ಪೂತ್ ಅವರ ಮುಂದೆ ಪೊಲೀಸರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದು, ಬ್ರಿಜ್ ಭೂಷಣ್ ಮತ್ತು ಸಹ ಆರೋಪಿಯಾದ ಡಬ್ಲ್ಯುಎಫ್‌ಐನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ವಿಚಾರಣೆಯನ್ನು ಮುಂದುವರಿಸಲು ಸಾಕಷ್ಟು ಪ್ರಾಥಮಿಕ ಸಾಕ್ಷ್ಯಗಳಿವೆ ಎಂದು ಪ್ರತಿಪಾದಿಸಿದ್ದಾರೆ.
ಬ್ರಿಜ್ ಭೂಷಣ್ ಗೆ ಆ ದಿನದ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಜನವರಿ 6 ಶನಿವಾರ ಮುಂದುವರಿಸಲಿದೆ. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ರೂಸ್ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರನ್ನು ವರ್ಗಾವಣೆ ಮಾಡಿದ್ದರಿಂದ ಹೊಸದಾಗಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: 2022-23ರ ಚುನಾವಣಾ ಟ್ರಸ್ಟ್ ದೇಣಿಗೆ | ಬಿಜೆಪಿಗೆ 70.69% ಪಾಲು!
ಹಿಂದಿನ ನ್ಯಾಯಾಧೀಶರು ಈಗಾಗಲೇ ವ್ಯಾಪಕವಾದ ವಾದಗಳನ್ನು ಆಲಿಸಿದ್ದರಿಂದ, ನ್ಯಾಯಾಲಯವು ಕಳೆದ ವಿಚಾರಣೆಯ ಸಮಯದಲ್ಲಿ, ವಿಶೇಷವಾಗಿ ಆರೋಪಗಳ ಕುರಿತು ಹೊಸದಾಗಿ ವಿಚಾರಣೆಯ ಅಗತ್ಯವಿದೆ ಎಂದು ಒತ್ತಿಹೇಳಿದೆ. ಇದಕ್ಕೂ ಮುನ್ನ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಆರೋಪ ಹೊರಿಸಬೇಕೆ ಎಂಬ ಬಗ್ಗೆ ತಮ್ಮ ನಿಲುವನ್ನು ಮಂಡಿಸಿ ಲಿಖಿತ ವಾದ ಮಂಡಿಸಿದ್ದರು. ಎಸಿಎಂಎಂ ಜಸ್ಪಾಲ್ ಅವರು ವಾದದ ಪ್ರತಿಯನ್ನು ಆರೋಪಿ ಮತ್ತು ದೂರುದಾರರ ವಕೀಲರಿಗೆ ನೀಡಿದ್ದರು. ದೂರುದಾರರ ಪರ ವಾದ ಮಂಡಿಸಿದ ವಕೀಲ ಹರ್ಷ್ ಬೋರಾ ಈ ಹಿಂದೆ ಲಿಖಿತ ವಾದ ಮಂಡಿಸಿದ್ದರು.
ಕಳೆದ ವರ್ಷ ಅಕ್ಟೋಬರ್ 30 ರಂದು ನ್ಯಾಯಾಲಯವು ತಮ್ಮ ಲಿಖಿತ ವಾದಗಳನ್ನು ಸಲ್ಲಿಸಲು ಪ್ರಕರಣದ ವಕೀಲರಿಗೆ ಮೂರು ವಾರಗಳ ಕಾಲಾವಕಾಶ ನೀಡಿತ್ತು ಮತ್ತು ವಾದಗಳನ್ನು ವ್ಯವಸ್ಥಿತ ರೀತಿಯಲ್ಲಿ ಮುಕ್ತಾಯಗೊಳಿಸಬೇಕೆಂದು ಕಕ್ಷಿದಾರರ ಮುಂದೆ ಒತ್ತಿ ಹೇಳಿತ್ತು. ಬ್ರಿಜ್ ಭೂಷಣ್ ಅವರ ವಕೀಲರು 2023ರ ನವೆಂಬರ್ 22 ರಂದು ಲಿಖಿತ ವಾದಗಳನ್ನು ಸಲ್ಲಿಸಿದರು.
ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಈ ಹಿಂದೆ ಆರು ಮಹಿಳಾ ಕುಸ್ತಿಪಟುಗಳು ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿರುವ ದೆಹಲಿ ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಪ್ರಶ್ನಿಸಿದ್ದರು. ಆದರೆ, ಸಂತ್ರಸ್ತರ ಮೇಲೆ ನಡೆದ ಲೈಂಗಿಕ ಕಿರುಕುಳದ ಕೃತ್ಯವು ಯಾವುದೇ ನಿರ್ದಿಷ್ಟ ಸಮಯದಲ್ಲಿ ನಿಲ್ಲದ ಕಾರಣ ಇದು ನಿರಂತರವಾಗಿ ನಡೆದ ಅಪರಾಧವಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಬ್ರಿಜ್ ಭೂಷಣ್ ಮಹಿಳಾ ಕುಸ್ತಿಪಟುಗಳಿಗೆ ಸಮಯ ಸಿಕ್ಕಾಗೆಲ್ಲಾ ಲೈಂಗಿಕ ಕಿರುಕುಳ ನೀಡುತ್ತಿದ್ದ ಬಗ್ಗೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಆರೋಪಗಳನ್ನು ರೂಪಿಸಲು ಮತ್ತು ವಿಚಾರಣೆಯನ್ನು ಮುಂದುವರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದ್ದರು.
ವಿಡಿಯೊ ನೋಡಿ: “ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣ : ರಾಜಕೀಯ ಲಾಭದ ಹೋರಾಟ ನಿಲ್ಲಿಸಿ, ಆತನಿಗೆ ಮೊದಲು ಜಾಮೀನು ಕೊಡಿಸಿ”