ಭುವನೇಶ್ವರ: ಬಂಗಾಳಕೊಲ್ಲಿಯಲ್ಲಿ ಭಾರೀ ಗಾಳಿಯ ರಭಸಕ್ಕೆ ಉಂಟಾಗಿರುವ ‘ಅಸಾನಿ’ ಭೀಕರ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಹಾಗಾಗಿ ಹವಮಾನ ಇಲಾಖೆಯು ಸುತ್ತಮುತ್ತಲಿನ ಪ್ರದೇಶಕ್ಕೆ ಎಚ್ಚರಿಕೆ ನೀಡಿದೆ.
ಪ್ರತಿಯೊಂದು ಚಂಡಮಾರುತಗಳಿಗೂ ಪಾಳಿ ಪ್ರಕಾರವಾಗಿ ಹೆಸರಿಟ್ಟುಕೊಂಡು ಬರಲಾಗುತ್ತದೆ. ಈ ಬಾರಿಯ ಚಂಡಮಾರುತಕ್ಕೆ ‘ಅಸಾನಿ’ ಎಂದು ಹೆಸರಿಟ್ಟಿದ್ದು, ಶ್ರೀಲಂಕಾದಿಂದ ಹೆಸರನ್ನು ಆಯ್ಕೆ ಮಾಡಲಾಗಿದೆ. ಸಿಂಹಳಿಯ ಭಾಷೆಯಲ್ಲಿಅಸಾನಿ ಎಂದರೆ ಕ್ರೋಧ ಎಂದರ್ಥ.
ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಹವಾಮಾನ ವ್ಯವಸ್ಥೆಯು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಇಂದು ವಾಯುಭಾರ ಕುಸಿತವಾಗಿ ಬಲಗೊಳ್ಳುವ ಸಾಧ್ಯತೆಯಿದೆ. ಇದರಿಂದ ನಾಳೆ(ಮೇ 10) ಸಾಯಂಕಾಲ ಹೊತ್ತಿಗೆ ಚಂಡಮಾರುತ ತೀವ್ರವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ರಾಜ್ಯದ ವಿವಿಧೆಡೆ ಮಳೆ: ಜನಜೀವನ-ಅಸ್ತವ್ಯಸ್ತ
ಕಳೆದ 6 ಗಂಟೆಗಳಲ್ಲಿ ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 14 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯೂ ಇದೆ ‘ಅಸಾನಿ‘ ಚಂಡಮಾರುತದ ಹಿನ್ನೆಲೆಯಲ್ಲಿ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ನಾಳೆಯಿಂದ ಬಲವಾದ ಗಾಳಿ ಮತ್ತು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತದ ಪ್ರಭಾವವು ಆಗ್ನೇಯ ಮತ್ತು ಪಕ್ಕದ ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ, ‘ಕಾರ್ ನಿಕೋಬಾರ್’ನಿಂದ ಸುಮಾರು 610 ಕಿ ಮೀ ವಾಯುವ್ಯ (ನಿಕೋಬಾರ್ ದ್ವೀಪಗಳು), ‘ಪೋರ್ಟ್ ಬ್ಲೇರ್’ನಿಂದ 500 ಕಿ ಮೀ ಪಶ್ಚಿಮಕ್ಕೆ (ಅಂಡಮಾನ್ ದ್ವೀಪಗಳು), ವಿಶಾಖ ಪಟ್ಟಣಂ (ಆಂಧ್ರ 810 ಕಿಮೀ ದಕ್ಷಿಣದಲ್ಲಿ) ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಪುರಿಯ (ಒಡಿಶಾ) ದಕ್ಷಿಣ-ಆಗ್ನೇಯಕ್ಕೆ 880 ಕಿ.ಮೀ. ಪುರಿಯಿಂದ ಸುಮಾರು 920 ಕಿಮೀ ದೂರದ ಬಂಗಾಳ ಕೊಲ್ಲಿಯಲ್ಲಿ ತಂಗುವ ವೇಳೆ, ‘ಅಸಾನಿ’ ತೀವ್ರ ಚಂಡಮಾರುತವಾಗಿ ಬದಲಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ. ಈ ವ್ಯವಸ್ಥೆಯು ಮೇ 11ರಂದು ಚಂಡಮಾರುತವಾಗಿ ‘ಗಂಜಾಂ ಮತ್ತು ಪುರಿ’ ನಡುವಿನ ಕರಾವಳಿಗೆ ಹತ್ತಿರವಾಗಲಿದೆ ಎಂದು ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಕುಮಾರ್ ಜೆನಾ ಹೇಳಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿಗಾಗಿ ಇನ್ನೂ 10 ತಂಡಗಳನ್ನು ಕಾಯ್ದಿರಿಸುವಂತೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಗಳಿಗೆ ವಿನಂತಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪ್ರದೀಪ್ ಕುಮಾರ್ ಜೆನಾ ಹೇಳಿದ್ದಾರೆ.
ತಗ್ಗು ಪ್ರದೇಶಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲಾಗಿದೆ. ಅವಶ್ಯಕತೆ ಇದ್ದರೆ, ಜನರನ್ನು ಸ್ಥಳಾಂತರಿಸಲಾಗುತ್ತದೆ. ನೀರು ನಿಲ್ಲುವುದು ಮತ್ತು ಪ್ರವಾಹದ ಸಂದರ್ಭದಲ್ಲಿ, ಪುರಸಭೆಯ ತಂಡಗಳು ನೀರನ್ನು ಹೊರತೆಗೆಯಲು ಸಿದ್ಧವಾಗಿವೆ. ರಾಜ್ಯದ ಎಲ್ಲ ಮೀನುಗಾರರು ಸಮುದ್ರ ತೀರದಿಂದ ದೂರವಾಗಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಎಲ್ಲಾ ದೋಣಿಗಳು ಹಿಂತಿರುಗಿವೆ. ಇಂದಿನಿಂದ ಚಂಡಮಾರುತ ಹಾದುಹೋಗುವವರೆಗೆ ಚಿಲಿಕಾದಲ್ಲಿ ದೋಣಿಗಳ ಸಂಚಾರವನ್ನು ಸರ್ಕಾರ ನಿಲ್ಲಿಸಿದೆ.
ಚಂಡಮಾರುತ ಮೇ 12ರವರೆಗೂ ಸಿಖ್ಖಿಂ, ಪಶ್ಚಿಮ ಬಂಗಾಳ, ಕರಾವಳಿ ಬಿಹಾರ, ಜಾರ್ಖಂಡ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆಯ ಮೂಲಕ ತಿಳಿದುಬಂದಿದೆ.