ಲಖನೌ: ಮಸೀದಿಯೊಂದರ ಹೊರಗಡೆ ಮಾಂಸದ ಚೂರು ಸೇರಿದಂತೆ ಕೆಲ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವುವ ಮೂಲಕ ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿದ 11 ಮಂದಿಯ ಪೈಕಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತರನ್ನು ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯೂಷ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್ ಗೌರ್ ಅಲಿಯಾಸ್ ಗುಂಜನ್, ಬ್ರಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಗ್ಯಾಂಗ್ ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆರೋಪಿಗಳು ಮುಸ್ಲಿಮರಂತೆ ಟೋಪಿ ಧರಿಸುವ ಮೂಲಕ ಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಆರೋಪಿಗಳು ಶಾಂತಿ ಮತ್ತು ಸೌಹಾರ್ದತೆ ಕೆಡಿಸಲು ಮಾಂಸದ ತುಂಡುಗಳು, ಬೈಕ್ ಗಳು, ಕೆಲವು ಆಕ್ಷೇಪಾರ್ಹ ಫೋಸ್ಟರ್ ಗಳನ್ನು ಮಸೀದಿ ಹೊರಗಡೆ ಎಸೆದಿದ್ದರು ಎಂದು ಅಯೋಧ್ಯೆ ಎಸ್ ಎಸ್ ಪಿ ಕೆಕೆ ಪಾಂಡೆ ತಿಳಿಸಿದ್ದಾರೆ.