ಮೈಸೂರು: ಸೆಪ್ಟೆಂಬರ್ 21ರಿಂದ ಶಾಲೆಗಳು ಆರಂಭವಾಗಲಿವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಸೆ.30ರೊಳಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮೈಸೂರಿನ ನಜರ್ಬಾದ್ನಲ್ಲಿ ನಗರ ಕೇಂದ್ರ ಗ್ರಂಥಾಲಯ ಉದ್ಘಾಟನೆ ಮಾಡಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಶಾಲೆಗಳು ಇದೇ ಸೆ.21ರಿಂದ ಆರಂಭವಾಗಲಿವೆ. ಆದರೆ ತರಗತಿಗಳು ನಡೆಯುವುದಿಲ್ಲ. ತರಗತಿಗಳ ಆರಂಭದ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದರು.
ರಾಜ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದಾರೆ. ಎಷ್ಟೇ ಮಕ್ಕಳು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ. ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ದರೆ, ಬಿಇಓಯಿಂದ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು, ಹೋದಲ್ಲೆಲ್ಲಾ ಶಾಲೆ ಯಾವಾಗ ಶುರುವಾಗುತ್ತೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆದರೆ ಪೋಷಕರು ಮಾತ್ರ ಇನ್ನೂ ಸಾಕಷ್ಟು ಆತಂಕದಲ್ಲಿ ಇದ್ದಾರೆ. ಇದನ್ನು ನಿವಾರಿಸುವ ಕೆಲಸ ನಮ್ಮ ಇಲಾಖೆ ಮಾಡಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಸುರೇಶ್ ಕುಮಾರ್, ಅಂತಹ ಯಾವುದೇ ಸಾಧ್ಯತೆಗಳು ರಾಜ್ಯದಲ್ಲಿ ಇಲ್ಲ. ಶೇ.100ಕ್ಕೆ ನೂರಷ್ಟು ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದರು. ಇನ್ನು, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ, ಅದು ಸಿಎಂ ಪರಮಾಧಿಕಾರ. ಆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.