‘ಸರ್ಕಾರ ಮತ್ತು ಪ್ರಭುತ್ವದ ಹಿಡಿತವನ್ನು ಬಿಜೆಪಿಯಿಂದ ಬೇರ್ಪಡಿಸುವುದು ಮೊದಲ ಆದ್ಯತೆ’ : ಯೆಚುರಿ

ಜುಲೈ 18, 2023 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ಸಮಾವೇಶದ ಕುರಿತು ಸಿಪಿಐಎಂ (CPIM)  ಪ್ರಧಾನ ಕಾರ್ಯದರ್ಶಿ ಕಾಂ ಯೆಚೂರಿ ಅವರೊಂದಿಗೆ ಜನಶಕ್ತಿ ಮೀಡಿಯಾ ನಡಸಿದ ಸಂದರ್ಶನ (ಸಂದರ್ಶನದ ವೀಡಿಯೊದ ಸಂಪಾದಿತ ಪೂರ್ಣ ಪಠ್ಯ)

ಜನಶಕ್ತಿ  ಮೀಡಿಯಾ (JSM) : 2024 ರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಮೈತ್ರಿ ಮಾಡಿಕೊಳ್ಳಲು ಭಾರತದಾದ್ಯಂತ 26 ಪಕ್ಷಗಳು ಇಂದು ಬೆಂಗಳೂರಿನಲ್ಲಿ ಸೇರಿಕೊಂಡಿವೆ. ಈ ಸಭೆಯ ರಾಜಕೀಯ ಪ್ರಾಮುಖ್ಯತೆಯನ್ನು ಚರ್ಚಿಸಲು ಇಂದು ನಮ್ಮೊಂದಿಗೆ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಇದ್ದಾರೆ.

ಯೆಚುರಿ ಅವರೇ, ನಿಮ್ಮ ಪ್ರಕಾರ ಈ ಸಭೆಯ ದೊಡ್ಡ ರಾಜಕೀಯ ಪ್ರಾಮುಖ್ಯತೆ ಏನು?

ಸೀತಾರಾಂ ಯೆಚೂರಿ (SY) : ಸರ್ಕಾರ ಮತ್ತು ಪ್ರಭುತ್ವದ ಅಧಿಕಾರವನ್ನು ಹಿಡಿತದಿಂದ ಬಿಜೆಪಿಯನ್ನು  ಪ್ರತ್ಯೇಕಿಸುವುದನ್ನು ಖಚಿತಪಡಿಸಿಕೊಳ್ಳಲು 26 ಪಕ್ಷಗಳು ಸಹಕರಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ದೊಡ್ಡ ರಾಜಕೀಯ ಪ್ರಾಮುಖ್ಯತೆಯಾಗಿದೆ. ಭಾರತೀಯ ಗಣರಾಜ್ಯದ ಪ್ರಮುಖ ಸ್ವರೂಪವಾದ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಬಿಜೆಪಿಯು ದಾಳಿಗಳನ್ನು ನಡೆಸುತ್ತಿದೆ ಎಂದು 26 ಪಕ್ಷಗಳು ಅರಿತುಕೊಂಡಿರುವುದರಿಂದ ಇದು ಒಂದು ಪ್ರಮುಖ ಬೆಳವಣಿಗೆಯಾಗಿದೆ. ಗಣರಾಜ್ಯದ ಈ ಸ್ವರೂಪ, ದೇಶ ಮತ್ತು ಜನರನ್ನು ಉಳಿಸಬೇಕು ಎಂದು ಅವರು ಅರಿತುಕೊಂಡಿದ್ದಾರೆ.

JSM: ಈ ಮೈತ್ರಿಗೆ ಇಟ್ಟಿರುವ ಹೆಸರು ಅತ್ಯಂತ ಆಸಕ್ತಿದಾಯಕ ಸಂಗತಿಯಾಗಿದೆ. – Indian National Developmental Inclusive Alliance (ಭಾರತೀಯ ರಾಷ್ಟ್ರೀಯ ಅಭಿವೃದ್ಧಿಯತ್ತ ಎಲ್ಲರನ್ನೂ ಒಳಗೊಳ್ಳುವ ಮೈತ್ರಿಕೂಟ) ಅಥವಾ I.N.D.I.A. ಇದರ ಹಿಂದಿನ ಕಥೆ ಏನು?

SY : ನಾವು ತಿಳಿದಿರುವಂತೆ ನಾವು ಇಂದು ಭಾರತವನ್ನು ಉಳಿಸಬೇಕಾಗಿದೆ ಮತ್ತು ನಮ್ಮ ಪಕ್ಷದ ಪರವಾಗಿ V4India ಎಂಬ ಹೆಸರನ್ನು ನಾನು ಸೂಚಿಸಿದೆ. I.N.D.I.A. ವನ್ನು ವಿಸ್ತರಿಸಲು ಒಂದು ಸಲಹೆ ಬಂತು (I.ಅಂದರೆ ಇದು, N ಅಂದರೆ ಇದು..ಇತ್ಯಾದಿ). ಪ್ರತಿ ಅಕ್ಷರ ಏನು ಪ್ರತಿನಿಧಿಸಬೇಕು ಎಂಬ ಚರ್ಚೆಗಳ ಮೂಲಕ ನಾವು ಅಂತಿಮ ಹೆಸರನ್ನು ತಲುಪಿದ್ದೇವೆ. ಆದರೆ ಇದರ ಹಿಂದಿರುವ ಸಂಪೂರ್ಣ ಆಲೋಚನೆ ಏನೆಂದರೆ, ಮೋದಿ ಸರ್ಕಾರವು ನಡೆಸುತ್ತಿರುವ ಈ ದಾಳಿಯಿಂದ ಭಾರತವನ್ನು ಇಂದು ಉಳಿಸಬೇಕಾಗಿದೆ.

JSM: ಈ ಮೈತ್ರಿಯ ವಿಷಯಕ್ಕೆ ಬಂದಾಗ ಈ ಮೈತ್ರಿಯು ಜನರ ಜೀವನೋಪಾಯದ ಸಮಸ್ಯೆಗಳ ಸುತ್ತಲಿನ ಆರ್ಥಿಕ ಮತ್ತು ಕಲ್ಯಾಣದ ಸಮಸ್ಯೆಗಳನ್ನು ಆಧರಿಸಿರಬೇಕು ಎಂದು ನಿಮಗೆ ಅನಿಸುವುದಿಲ್ಲವೇ?

SY: ಇದು ವಾಸ್ತವವಾಗಿ ಮೈತ್ರಿ ಅಲ್ಲ, ಆ ಅರ್ಥದಲ್ಲಿ. ಒಂದು ನಿರ್ದಿಷ್ಟ ಉದ್ದೇಶವನ್ನು ಸಾಧಿಸಲು ತಾವು ಸಹಕರಿಸುತ್ತೇವೆ ಎಂದು ವ್ಯಕ್ತಪಡಿಸುವ ಬಯಕೆಯೊಂದಿಗೆ ಈ ಪಕ್ಷಗಳು ಒಟ್ಟಾಗಿ ಬರುತ್ತಿವೆ. ನಿರ್ದಿಷ್ಟ ಕಾರ್ಯಕ್ರಮದ ಆಧಾರದ ಮೇಲೆ ಮೈತ್ರಿ ಮಾಡಿಕೊಳ್ಳಬೇಕು. ಅದು ಅಗತ್ಯವಿದ್ದರೆ ನಂತರದ ಪ್ರಯತ್ನವಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಗಬೇಕು ಎಂಬ ಸಲಹೆ ಇತ್ತು. ನಾವು ಅದನ್ನು ಒಪ್ಪುವುದಿಲ್ಲ, ಒಂದು ಸರ್ಕಾರ ರಚಿಸಿದಾಗ ಮಾತ್ರ ಕನಿಷ್ಠ ಕಾರ್ಯಕ್ರಮವನ್ನು ಜಾರಿಗೆ ತರಲು ಅಧಿಕಾರವಿದೆ ಎಂದು ನಾವು ಹೇಳಿದ್ದೇವೆ. ಈಗ ನಾವುನಿಜವಾಗಿಯೂ ಸಾಮಾನ್ಯ ಅಜೆಂಡಾ (ಕಾರ್ಯಸೂಚಿ)ಯನ್ನು ಮಾಡಬಹುದು, ಏನು ಮಾಡಬೇಕೆಂಬುದರ ಪಟ್ಟಿ. ರಾಜ್ಯ ಸರ್ಕಾರಗಳ ಹಕ್ಕುಗಳ ಮೇಲಿನ ಈ ಘೋರ ಹಸ್ತಕ್ಷೇಪ, ಸಂವಿಧಾನದ ಆಧಾರ ಸ್ತಂಭಗಳು, ಅಂದರೆ ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಫೆಡರಲಿಸಂ ಮೇಲೆ ದಾಳಿ ನಡೆಸುತ್ತಿರುವ ರೀತಿಯನ್ನು ಖಂಡಿಸಿ ಹೇಳಿಕೆಯನ್ನು ಸಿದ್ಧ ಪಡಿಸಲಾಗಿದೆ. ಆದ್ದರಿಂದ ಭಾರತವನ್ನು ರಕ್ಷಿಸಲು, ಈ ದಾಳಿಗಳನ್ನು ಹೆಚ್ಚಿಸುತ್ತಿರುವ ಈ ಶಕ್ತಿಗಳು ಮತ್ತು ಕೋಮು ಧ್ರುವೀಕರಣ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸುವುದು ಅವಶ್ಯಕ – ಈ ಎಲ್ಲಾ ವಿಷಯಗಳನ್ನು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಗುರುತಿಸಲಾಗಿದೆ. ಈ ಕೆಲವು ಸಮಸ್ಯೆಗಳ ಕುರಿತು ತಕ್ಷಣದ ಕಾಳಜಿಯನ್ನು ತೋರಿಸಲಾಗಿದೆ.

JSM: ಈ ಕಾರ್ಯಸೂಚಿಯನ್ನು ರೂಪಿಸುವಾಗ, ಎಡ ಶಕ್ತಿಗಳ ಮತ್ತು ವಿಶೇಷವಾಗಿ CPIM ನ ಪಾತ್ರ ಏನಿರುತ್ತದೆ?

SY: ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತರುವಲ್ಲಿ ಎಡಪಕ್ಷಗಳ ಪಾತ್ರವಿದೆ. ವಾಸ್ತವವಾಗಿ ನಮ್ಮ ಮಧ್ಯಪ್ರವೇಶವೇ ನಿರುದ್ಯೋಗ, ಬೆಲೆ ಏರಿಕೆ, ಜನರ ಜೀವನ ಪರಿಸ್ಥಿತಿಗಳು, ರೈತರ ಸಮಸ್ಯೆಗಳು, ಕಾರ್ಮಿಕರ ಸಮಸ್ಯೆಗಳ ಸಂಪೂರ್ಣ ಪ್ರಶ್ನೆಯನ್ನು ಮುನ್ನೆಲೆಗೆ ತಂದಿತು. ಹಾಗಾಗಿ ಭಾರತೀಯ ಜನತೆಗೆ ಉತ್ತಮ ಬದುಕನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೆಯಲ್ಲಿ ಆ ಎಲ್ಲಾ ಸಮಸ್ಯೆಗಳನ್ನು ಸಹ ನಮೂದಿಸಲಾಗಿದೆ.

JSM : ಇತ್ತೀಚಿನ ದಿನಗಳಲ್ಲಿ ರೈತರ ಆಂದೋಲನಗಳಿಗೆ ಬರುವುದಾದರೆ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗಗಳ ಜನರಿಂದ ಸಾಕಷ್ಟು ಆಂದೋಲನಗಳನ್ನು ನಾವು ನೋಡಿದ್ದೇವೆ. ಈ ಸಮಸ್ಯೆಗಳು ಅಜೆಂಡಾವನ್ನು ರೂಪಿಸುವಲ್ಲಿ ಭಾರಿ ಪರಿಣಾಮ ಬೀರುತ್ತವೆ ಎಂದು ನೀವು ಭಾವಿಸುತ್ತೀರಾ? ಮತ್ತು ನಂತರ ಸಾಧ್ಯವಾದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸಹ?

SY : ಖಂಡಿತಾ.. ಮೋದಿಯವರು ರೈತರಿಗೆ ಭರವಸೆ ನೀಡಿದ್ದ ಹಲವು ಸಮಸ್ಯೆಗಳ ಅಪೂರ್ಣ ಪರಿಹಾರಗಳ ಜಾರಿ ಬಗ್ಗೆ ನಾವು ಒತ್ತಾಯಿಸುತ್ತೇವೆ, ಆದರೆ MSP ಯಂತಹ ಹಲವು ಭರವಸೆಗಳನ್ನು ಜಾರಿಗೆ ತರಲಿಲ್ಲ, ಈ ವಿಷಯಗಳು ಖಂಡಿತವಾಗಿಯೂ ಕಾಣಿಸಿಕೊಳ್ಳುತ್ತವೆ ಮತ್ತು ಅಜೆಂಡಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ:ವಿದೇಶದಲ್ಲಿ ಗಾಂಧೀಜಿ, ದೇಶದಲ್ಲಿ ಗೋಡ್ಸೆ-ಇದು ಮೋದಿ ಸೂತ್ರ: ಸೀತಾರಾಂ ಯೆಚುರಿ

JSM: ಈಗ ವಿಶೇಷವಾಗಿ ಎಡ ಅಥವಾ ಎಡಪಂಥೀಯರತ್ತ ಬರುತ್ತಿರುವ ಒಂದು ಟೀಕೆ ಎಂದರೆ, ಇಂದು ಈ ಸಭೆಯ ಭಾಗವಾಗಿರುವ ಅನೇಕ ಪಕ್ಷಗಳು ಹಿಂದೆ ಆರ್ಥಿಕ ಮತ್ತು ಜನಕಲ್ಯಾಣ ಯೋಜನೆಗಳ ಕುರಿತು ಎಡ ಧೋರಣೆಗಳಿಗೆ ಸಂಪೂರ್ಣವಾಗಿ ವಿರುದ್ಧವಾದ ದೃಷ್ಟಿಕೋನವನ್ನು ಹೊಂದಿವೆ ಮತ್ತು ಈಗಿನ ಅವರ ರಾಜ್ಯ ಸರ್ಕಾರಗಳು ಸಹ ಆರ್ಥಿಕ ವಿಷಯಕ್ಕೆ ಬಂದಾಗ ಅವರು ಎಡಕ್ಕೆ ಸಂಪೂರ್ಣವಾಗಿ ವಿರುದ್ಧವಾದ ದೃಷ್ಟಿಕೋನಗಳನ್ನು ಜಾರಿಗೆ ತರುತ್ತಿದ್ದಾರೆ. ಯುಪಿಎ 2 ರ ನವ ಉದಾರೀಕರಣ ನೀತಿಗಳು 2014 ರಲ್ಲಿ ಎನ್‌ಡಿಎ ಯ  ಗೆಲುವಿನ ಪರಿಸ್ಥಿತಿಯನ್ನು ಶಕ್ತಗೊಳಿಸಿದವು ಎಂಬ ಟೀಕೆಗಳಿವೆ. ಹಾಗಾದರೆ ವಿವಿಧ ರೀತಿಯ ಈ ರಾಜಕೀಯ ಪಕ್ಷಗಳೊಂದಿಗೆ ವಿಶೇಷವಾಗಿ ಎಡ ದೃಷ್ಟಿಕೋನದಿಂದ ಸಾಮಾನ್ಯ ಕಾರ್ಯಕ್ರಮವು ಸಾಧ್ಯ ಎಂದು ನೀವು ಭಾವಿಸುತ್ತೀರಾ?

SY : ಸರಿ.. ಆ ಸಮಯದಲ್ಲಿ ನೋಡೋಣ. ಯಾವ ಶಕ್ತಿಗಳು ಸರ್ಕಾರಕ್ಕೆ ಬರುತ್ತವೆಯೋ ಆ ಶಕ್ತಿಗಳ ಮೇಲೆ ಎಲ್ಲಾ ಅವಲಂಬಿಸಿರುತ್ತದೆ ಆದ್ದರಿಂದ ಇದು ಅಮೂರ್ತ ಸಮಸ್ಯೆಯಲ್ಲ. ಇದು ಅತ್ಯಂತ ನಿರ್ದಿಷ್ಟ ವಿಷಯವಾಗಿದೆ, ಆ ಸಮಯದಲ್ಲಿ ಯಾವ ಪಕ್ಷಗಳು ಇರುತ್ತವೆ ಮತ್ತು ಅದು ಸರ್ಕಾರದ ಕಾರ್ಯಕ್ರಮದ ಸ್ವರೂಪವನ್ನು ನಿರ್ಧರಿಸುತ್ತದೆ ಮತ್ತು ಅದು ಎಷ್ಟು ಒತ್ತಡವನ್ನು ಬೀರಬಹುದು ಎಂಬುದು ನಮ್ಮ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. . ಉದಾಹರಣೆಗೆ ಯುಪಿಎಯಲ್ಲಿ ನಾವು ಈ ಎಲ್ಲಾ ಹಕ್ಕುಗಳು – ಮಾಹಿತಿ ಹಕ್ಕು, ಗ್ರಾಮೀಣ ಉದ್ಯೋಗದ ಹಕ್ಕು, ಶಿಕ್ಷಣದ ಹಕ್ಕು, ಆಹಾರ ಭದ್ರತೆಯ ಹಕ್ಕು-  ಈ ಎಲ್ಲಾ ಹಕ್ಕುಗಳನ್ನು ಖಾತ್ರಿ ಮಾಡಿದಾಗ, ನಾವು 61 ಸಂಸತ್ ಸದಸ್ಯರನ್ನು ಹೊಂದಿದ್ದೆವು. ನಾವಿಲ್ಲದೇ ಸರ್ಕಾರ ರಚನೆ ಸಾಧ್ಯವಿಲ್ಲ ಎಂಭ ಸ್ಥಿತಿ ಇತ್ತು. ಆದ್ದರಿಂದ ಇದು ಎಲ್ಲಾ ಆ ಸಮಯದಲ್ಲಿ ಶಕ್ತಿಗಳ ಪರಸ್ಪರ ಸಂಬಂಧವನ್ನು ಅವಲಂಬಿಸಿರುತ್ತದೆ.

JSM : ಇನ್ನೊಂದು ಟೀಕೆ ಏನೆಂದರೆ, ಕೆಲವು ವಿಷಯಗಳಲ್ಲಿ ಪಕ್ಷಗಳ ನಡುವೆ ಸ್ಪಷ್ಟತೆ ಅಥವಾ ಒಮ್ಮತವಿಲ್ಲ, ವಿಶೇಷವಾಗಿ ಏಕರೂಪ ನಾಗರಿಕ ಸಂಹಿತೆ ಅಥವಾ ಆರ್ಟಿಕಲ್ 370 ಸಂಬಂಧಿತ ಪ್ರಶ್ನೆಗಳು

SY: ಹೌದು. ಹಲವು ವಿಷಯಗಳಲ್ಲಿ ನೂರಕ್ಕೆ ನೂರು ಒಮ್ಮತಗಳು ಇರುವುದಿಲ್ಲ ಮತ್ತು ಅನೇಕ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ನಾವು ಈಗಿನ ಪರಿಸ್ಥಿತಿಯಿಂದ ಹೊರಬರಬೇಕಾಗಿದೆ, ಇಂದು ನಮ್ಮ ಆದ್ಯತೆ ಯಾವುದು?ಸಿಪಿಐಎಂ ಮತ್ತು ನಮ್ಮ ಮಹಾಧಿವೇಶನದ ರಾಜಕೀಯ ನಿರ್ಣಯದ ಪ್ರಕಾರ ಇಂದಿನ ಆದ್ಯತೆಯೆಂದರೆ, ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು, ಅವರನ್ನು ಸರ್ಕಾರ ಮತ್ತು ಪ್ರಭುತ್ವದ ಹಿಡಿತದಿಂದ ಬೇರ್ಪಡಿಸುವುದು ಮೊದಲ ಮತ್ತು ಪ್ರಮುಖ ಕೆಲಸ. ಅವರು ಮಾಡಲು ಪ್ರಯತ್ನಿಸುತ್ತಿರುವುದು, ಸೆಕ್ಯುಲರ್ ಡೆಮಾಕ್ರಟಿಕ್ ರಿಪಬ್ಲಿಕ್ ಅನ್ನು ತಮ್ಮ ಫ್ಯಾಸಿಸ್ಟ್ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವುದು; ಅದು ಅವರು ಪ್ರಯತ್ನಿಸುತ್ತಿರುವ ರೂಪಾಂತರ. ಅದನ್ನು ತಡೆಯುವುದೇ ಮುಖ್ಯ ಅಜೆಂಡಾ. ವಿವಾದದ ಅನೇಕ ಸಮಸ್ಯೆಗಳು ಮುಂದುವರಿಯುತ್ತದೆ ಮತ್ತು ನಮ್ಮ ದೃಷ್ಟಿಕೋನದಿಂದ ನಾವು ಅವುಗಳಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ. ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಬಿಜೆಪಿ ಸರ್ಕಾರದಿಂದ ಬೇರ್ಪಡುವುದನ್ನು ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ.

ಟೀಮ್ ಇಂಡಿಯಾ Vs ಟೀಮ್ ಎನ್‌ಡಿಎ | 2024 ಲೋಕಸಭಾ ಚುನಾವಣೆಗೆ ವಿಪಕ್ಷಗಳ ಮೈತ್ರಿಕೂಟ ಸಜ್ಜು | Team India Vs Team NDA | Opposition alliance gearing up for 2024 Lok Sabha elections

JSM: ಬಿಜೆಪಿ ವಿರುದ್ಧ ಸೀಟು ಹಂಚಿಕೆ ಅಥವಾ ಸಾಮಾನ್ಯ ಅಭ್ಯರ್ಥಿ ಬಗ್ಗೆ ಏನಾದರೂ ಚರ್ಚೆ ನಡೆದಿದೆಯೇ?

SY: ಬಿಜೆಪಿ ವಿರುದ್ಧ ಒಬ್ಬರೇ ವಿರೋಧಿ ಅಭ್ಯರ್ಥಿಯಿರಬೇಕು ಎಂಬ ಆಸೆ ಇದೆ. ಆದರೆ ವಿವಿಧ ರಾಜ್ಯಗಳ ಪರಿಸ್ಥಿತಿ ವಿಭಿನ್ನವಾಗಿರುವ ಕಾರಣ ಅದು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ನಮ್ಮ ಎಲ್‌ಡಿಎಫ್ ನಡುವೆ ನೇರವಾಗಿ ಸ್ಪರ್ಧೆ ಏರ್ಪಟ್ಟಿದೆ ಮತ್ತು ಆ ಪರಿಸ್ಥಿತಿಯಿಂದಾಗಿ ಬಿಜೆಪಿಗೆ ಒಬ್ಬ ಶಾಸಕರೂ ಆಯ್ಕೆಯಾಗುವುದಿಲ್ಲ. ಬಂಗಾಳದ ಪರಿಸ್ಥಿತಿಯಲ್ಲಿ ಎಡಪಕ್ಷಗಳ ಜೊತೆಗೆ ಕಾಂಗ್ರೆಸ್ ಮತ್ತು ಜಾತ್ಯತೀತ ಶಕ್ತಿಗಳು ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಅಣಿ ನೆರೆದಿವೆ ಮತ್ತು ಸೋಲಿಸಲು ಹವಣಿಸುತ್ತಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ – ತಮಿಳುನಾಡಿನ ಕೂಟ, ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ವಿಕಾಸ್ ಅಘಾಡಿ ಮತ್ತು ಬಿಹಾರದಲ್ಲಿ ಮಹಾ ಘಟಬಂಧನ್, ಇತ್ಯಾದಿ – ಸಂಪೂರ್ಣ ಒಪ್ಪಂದವಿದೆ,  ತೆಲಂಗಾಣ, ಒಡಿಶಾ, ಆಂಧ್ರಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಬಹಳ ಅನಿಶ್ಚಿತವಾಗಿದೆ. ಹಾಗಾಗಿ ಸೀಟು ಹಂಚಿಕೆ ಮತ್ತು ಚುನಾವಣಾ ಹೊಂದಾಣಿಕೆಯ ವಿಷಯಗಳನ್ನು ರಾಜ್ಯ ಮಟ್ಟದಲ್ಲಿ ಮಾತ್ರ ನಿರ್ಧರಿಸಬಹುದು ಎಂದು ಇಂದು ನಿರ್ಧರಿಸಲಾಯಿತು,  ಇದನ್ನೆ ನಮ್ಮ ಪಕ್ಷ ಪ್ರತಿಪಾದಿಸುತ್ತಿದ್ದು, ಇದು ಸರಿಯಾದ ವಿಧಾನವಾಗಿದೆ, ಹಾಗಾಗಿ ಈಗ ರಾಜ್ಯ ಮಟ್ಟದಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ.

JSM : ಹಾಗಾದರೆ ಕೇರಳ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ‘ಮಿತ್ರರ ನಡುವೆ ಸ್ಪರ್ಧೆ’ ಗಳ ಸಾಧ್ಯತೆಯನ್ನು ನಾವು ನಿರೀಕ್ಷಿಸಬಹುದೇ?

SY: ಹೌದು. ಆದರೆ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೆಯು ‘ಮಿತ್ರರ ನಡುವೆ ಸ್ಪರ್ಧೆ’ ಆಗಿರುವುದಿಲ್ಲ, ಸಾಕಷ್ಟು ಕಹಿಯಾಗಿರಬಹುದು. ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ಪಂಚಾಯತ್ ಚುನಾವಣೆಗಳಲ್ಲಿ, ಟಿಎಂಸಿಯಿಂದ ಹಿಂಸಾಚಾರದಲ್ಲಿ ಅನೇಕ ಜೀವಹಾನಿಯಾಗಿದೆ. ಟಿ.ಎಂ.ಸಿ ಯ ದಮನವನ್ನು ವಿರೋಧಿಸಲಾಗುವುದು ಮತ್ತು ಅದರ ವಿರುದ್ಧ ಹೋರಾಡಲಾಗುವುದು.

JSM : ಮೋದಿ ಅವರು ಈ ಸಭೆ ಪರಿವಾರದ ಹಿತಾಸಕ್ತಿ ಕಾಪಾಡಲು, ಕುಟುಂಬದ ಹಿತಾಸಕ್ತಿ ಕಾಪಾಡಲು ಎಂದು ಹೇಳಿಕೆ ನೀಡಿದ್ದು, ತಮಗೆ ಹೆಚ್ಚಿನ ಸಂಖ್ಯಾಬಲವಿದೆ ಎಂದು ತೋರಿಸಲು 38 ಪಕ್ಷಗಳ ಎನ್.ಡಿ.ಎ. ಸಭೆಯನ್ನೂ ಕರೆದಿದ್ದಾರೆ. ಅದರ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

SY: ಮೊದಲ ಅಂಶವೆಂದರೆ NDA ಈಗ ಪುನರುತ್ಥಾನಗೊಂಡಿದೆ. ಒಂಬತ್ತು ವರ್ಷಗಳ ಕಾಲ ಎನ್‌ಡಿಎ ಇರಲಿಲ್ಲ. ನಮಗೆ ಬಹುಮತ ಸಿಕ್ಕಿದೆ ಎಂಬ ದುರಹಂಕಾರದಲ್ಲಿದ್ದರು. ಎನ್‌ಡಿಎಯನ್ನು ಪುನರುತ್ಥಾನಗೊಳಿಸಲು ಅವರು ಒತ್ತಾಯಿಸಲ್ಪಟ್ಟಿದ್ದಾರೆ ಎಂಬುದು ವಾಸ್ತವ. ಅದು ನಿಜವಾಗಿ ನಮ್ಮ ಗೆಲುವು, ಅವರಿಗೆ ಹಿನ್ನಡೆಯಾಗುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ‘ನಮಗೂ ಮಿತ್ರರು ಇದ್ದಾರೆ’ ಎಂಬುದನ್ನು ಜನತೆಗೆ ತೋರಿಸಬೇಕು ಎಂಬ ಅರಿವೂ ಅವರಿಗೆ ಬಂದಿದೆ. ಈ ಮಿತ್ರರಾಷ್ಟ್ರಗಳು ಯಾವುವು? ಈ ಪಕ್ಷಗಳಲ್ಲಿ ಎಷ್ಟು ಪಕ್ಷಗಳು ಎಲ್ಲಿಯಾದರೂ ಪ್ರಾತಿನಿಧ್ಯವನ್ನು ಹೊಂದಿವೆ? ಇವುಗಳಲ್ಲಿ ಹೆಚ್ಚಿನ ಪಕ್ಷಗಳು ಈಶಾನ್ಯ ರಾಜ್ಯಗಳ ಸಣ್ಣ ಪಕ್ಷಗಳು. ಆದರೆ ಅವರ ಸಾಂಪ್ರದಾಯಿಕ ಮಿತ್ರಪಕ್ಷಗಳಾದ ಶಿವಸೇನೆ, ಅಕಾಲಿದಳ ಎಲ್ಲರೂ ಅವರನ್ನು ತೊರೆದಿದ್ದಾರೆ. ಆದ್ದರಿಂದ ಅವರು ತಾವು ಒಬ್ಬಂಟಿಯಾಗಿಲ್ಲ ಎಂದು ತೋರಿಸಲು ಹತಾಶರಾಗಿದ್ದಾರೆ.  ವಾಸ್ತವವಾಗಿ ಇದು ಪ್ರತಿಪಕ್ಷಗಳ ಗೆಲುವು. ನಾವು ಇದನ್ನು ಆರಂಭಿಕ ಗೆಲುವು ಎಂದು ಪರಿಗಣಿಸುತ್ತೇವೆ. ನಮಗೆ ಸಂಪೂರ್ಣ ಬಹುಮತವಿದೆ ಹಾಗಾಗಿ ಯಾರೂ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಬಿಜೆಪಿ ಈ ಹಿಂದೆ ಹೇಳುತ್ತಿತ್ತು. ಅದು ಬದಲಾಗಿದೆ. ಅದು ಮೊದಲನೆಯದು. ಎರಡನೆಯದು ಈ ಕುಟುಂಬ ರಾಜಕೀಯಕ್ಕೆ ಸಂಬಂಧಿಸಿದಂತೆ, ಪ್ರಧಾನಿಯವರು ಬಿಜೆಪಿಯೊಳಗೆ ಅವರ ಎಷ್ಟು ನಾಯಕರು ಮತ್ತು ಅವರ ಮಕ್ಕಳು ವಾಸ್ತವವಾಗಿ ಬಡ್ತಿ ಪಡೆಯುತ್ತಿದ್ದಾರೆ ಮತ್ತು ವಿವಿಧ ಜಾಗಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂಬುದನ್ನು ನೋಡಬೇಕು.

JSM: ಪ್ರಸ್ತುತ ಭಾರತೀಯ ರಾಜಕೀಯದಲ್ಲಿ ನಾವು ಗಮನಿಸಬಹುದಾದ ಒಂದು ವೈಶಿಷ್ಟ್ಯವೆಂದರೆ ವಿರೋಧ ಪಕ್ಷಗಳನ್ನು ನಾಶಮಾಡಲು ಅಧಿಕಾರದ ಅಸಂವಿಧಾನಿಕ ಬಳಕೆ. ಬಿಜೆಪಿ ಸರ್ಕಾರ ಮತ್ತು ಇಡಿ, ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳ ಅಧಿಕಾರದ ದುರ್ಬಳಕೆಯಿಂದ ಸರಕಾರಗಳು ಪಕ್ಷಗಳು ನಾಶವಾಗುವುದನ್ನು ನಾವು ಈಗಾಗಲೇ ಮಹಾರಾಷ್ಟ್ರದಲ್ಲಿ ನೋಡಿದ್ದೇವೆ. ರಾಜಭವನವನ್ನು ಬಿಜೆಪಿಯ ಶಕ್ತಿ ಕೇಂದ್ರವಾಗಿ ಬಳಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಚುನಾವಣೆ ಗೆದ್ದ ನಂತರವೂ ಪಕ್ಷಗಳು ಸರ್ಕಾರ ರಚಿಸಲು ಮತ್ತು ಅದರ ನಂತರವೂ ರಾಜ್ಯವನ್ನು ಆಳಲು ಕಷ್ಟಪಡುತ್ತಿವೆ. ಈ ಪ್ರಕ್ರಿಯೆಯನ್ನು ತಡೆಯಲು ವಿರೋಧ ಪಕ್ಷಗಳು ಏನು ಮಾಡಲಿವೆ?

SY: ಬಿಜೆಪಿಯ ಆಳ್ವಿಕೆಯ ಅಡಿಯಲ್ಲಿ ಪ್ರಜಾಪ್ರಭುತ್ವದ ಹೊಸ ಆದೇಶ ಹೀಗಿದೆ ‘ಚುನಾವಣೆಯಲ್ಲಿ ಯಾರು ಗೆದ್ದರೂ ನಾವು ಸರ್ಕಾರವನ್ನು ರಚಿಸುತ್ತೇವೆ’. ಅದು ಗೋವಾ, ಕರ್ನಾಟಕ, ಮಧ್ಯಪ್ರದೇಶದಲ್ಲಿ ನಡೆದಿದ್ದು ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಏಕೆಂದರೆ ಅವರು ಪ್ರಭುತ್ವದ ಅಧಿಕಾರ ಮತ್ತು ಕೇಂದ್ರೀಯ ಸಂಸ್ಥೆಗಳನ್ನು ನಿಯಂತ್ರಿಸುವ ಸರ್ಕಾರದ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಆದ್ದರಿಂದ ನಿರ್ಣಾಯಕವಾದದ್ದು ಸರ್ಕಾರ ಮತ್ತು ಪ್ರಭುತ್ವದ ಅಧಿಕಾರದ ಮೇಲಿನ ನಿಯಂತ್ರಣ. ಈ ರೀತಿಯ ಘೋರ ದುರುಪಯೋಗವನ್ನು ತಡೆಯಬೇಕಾದರೆ ಅವರನ್ನು ಆ ನಿಯಂತ್ರಣದಿಂದ ತೆಗೆದುಹಾಕಬೇಕು. ಇಡಿ ಮತ್ತು ಸಿಬಿಐ ಅನ್ನು ಸಂಪೂರ್ಣವಾಗಿ ರಾಜಕೀಯ ಅಸ್ತ್ರವಾಗಿಸಲಾಗಿದೆ, ಅವು ವಿರೋಧ ಪಕ್ಷಗಳ ವಿರುದ್ಧ ರಾಜಕೀಯ ಅಸ್ತ್ರಗಳಾಗಿವೆ. ಎದುರಾಳಿಗಳನ್ನು ಒಡೆಯಲು, ವಿಭಜಿಸಲು, ಜೈಲಿಗಟ್ಟಲು ಅವುಗಳನ್ನು ಅನೈತಿಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಇದು ವಿರೋಧ ಪಕ್ಷಗಳ ಮತ್ತು ಜನರ ಹಕ್ಕುಗಳ ವಿರುದ್ಧದ ಅತ್ಯಂತ ಬೃಹತ್ ಅಧಿಕೃತ ದಾಳಿಯಾಗಿದೆ. ಇದನ್ನು ಈ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ, ಇದನ್ನು ನಾವು ಕೊನೆಯವರೆಗೂ ವಿರೋಧಿಸುತ್ತೇವೆ ಎಂದು ಹೇಳಲಾಗಿದೆ.

JSM: ಕೇರಳದಲ್ಲಿ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಎಲ್‌ಡಿಎಫ್ ರಾಜ್ಯ ಸರ್ಕಾರದ ವಿರುದ್ಧ ಇಡಿ, ಸಿಬಿಐ ಕ್ರಮಗಳನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಅಂತಹ ತಪ್ಪು ತಿಳುವಳಿಕೆಯನ್ನು ನೀವು ಹೇಗೆ ಪರಿಹರಿಸುತ್ತೀರಿ?

SY: ಅದು ತಪ್ಪು ತಿಳುವಳಿಕೆ ಅಲ್ಲ. ಇದು ಸ್ಪಷ್ಟ ದ್ವಂದ್ವ. ಅವರು ಬಿಜೆಪಿಯನ್ನು ದೇಶದಾದ್ಯಂತ ಕೇಂದ್ರೀಯ ಏಜೆನ್ಸಿಗಳನ್ನು ಅಸ್ತ್ರವಾಗಿಸುತ್ತಿದ್ದಾರೆ ಎಂದು ಟೀಕಿಸುತ್ತಾರೆ, ಆದರೆ ಕೇರಳ ಎಲ್‌ಡಿಎಫ್ ಸರ್ಕಾರದ ವಿರುದ್ಧ ಇದೇ ಏಜೆನ್ಸಿಗಳು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತಾರೆ. ಇದು ಸ್ಪಷ್ಟವಾಗಿ ಎರಡು ಮಾನದಂಡಗಳು. ಕೇರಳದ ಹೊರಗೆ ತಮ್ಮ ಈ ನಿಲುವನ್ನು ವಿವರಿಸಲು ಬಹಳ ಕಷ್ಟಪಡುತ್ತಾರೆ. ಆದರೆ ಇದನ್ನು ನಾವು ನಿರಂತರವಾಗಿ ಬಹಿರಂಗಪಡಿಸಬೇಕು ಮತ್ತು ಅದರ ವಿರುದ್ಧ  ಹೋರಾಡುತ್ತೇವೆ. ದೆಹಲಿ ಆಡಳಿತಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಎಎಪಿ ಜತೆ ಸಹ ಬಹುತೇಕ ಇದೇ ರೀತಿಯ ಪರಿಸ್ಥಿತಿಯಿತ್ತು. ಇದೀಗ ಸುಗ್ರೀವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಕೇಜ್ರಿವಾಲ್ ಈ ಸಭೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಯಿತು.

JSM: ಕರ್ನಾಟಕಕ್ಕೆ ಬಂದರೆ, ಜೆಡಿಎಸ್‌ ಮೈತ್ರಿ  ಕುರಿತು. ಬಿಜೆಪಿಯೊಂದಿಗೆ ಚರ್ಚೆ ನಡೆಸುತ್ತಿದೆ ಎಂಬ ವರದಿಗಳಿವೆ ಕೇರಳದಲ್ಲಿ ಜೆಡಿಎಸ್‌ ಎಲ್‌ಡಿಎಫ್‌ ಜೊತೆಗಿದೆ. ನಿಮ್ಮ ಕಾಮೆಂಟ್‌?

SY: ನನಗೆ ಗೊತ್ತಿಲ್ಲ. ಅದು ಜೆಡಿಎಸ್ ಗೆ ಬಿಟ್ಟಿದ್ದು. ಅವರು ಹಿಂದೆಯೂ ಬಿಜೆಪಿಯ ಜತೆಗಿದ್ದರು ಮತ್ತು ನಂತರ ನಮ್ಮೆಲ್ಲರೊಂದಿಗಿದ್ದರು. ವರದಿಗಳನ್ನು ನಂಬುವುದಾದರೆ ಮತ್ತೆ ಅವರೊಂದಿಗೆ ಚರ್ಚಿಸುತ್ತಿದ್ದಾರೆ.  ಒಮ್ಮೆ ಅಲ್ಲಿಗೆ ಹೋಗಿ ವ್ಯವಹಾರ ಮಾಡಿದ್ದವರಾದ್ದರಿಂದ ಆಶ್ಚರ್ಯವೇನಿಲ್ಲ. ಆದರೆ ವಾಸ್ತವ ಏನೆಂದು ನನಗೆ ಗೊತ್ತಿಲ್ಲ. ಕೇರಳದ ಜೆಡಿಎಸ್ ತಾನು ಮುಂದುವರಿಯಬೇಕೇ ಎಂದು ಗಂಭೀರವಾಗಿ ಪರಿಶೀಲಿಸುತ್ತಿದೆ. ಆದರೆ ಜೆಡಿಎಸ್ ಬಿಜೆಪಿಯೊಂದಿಗೆ ಹೋದ ತಕ್ಷಣ ಕೇರಳದಲ್ಲಿ ಅದು ಕಾರ್ಯಸಾಧುವಲ್ಲ ಎಂದು ಅವರಿಗೆ ತಿಳಿದಿದೆ ಮತ್ತು ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ.

JSM: ಬಿಆರ್‌ಎಸ್, ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ ಮುಂತಾದ ಅನೇಕ ಪಕ್ಷಗಳು ಇಂದು ಸಭೆಯ ಭಾಗವಾಗಿಲ್ಲ. ಅವುಗಳನ್ನು ಭವಿಷ್ಯದಲ್ಲಿ ಕರೆಯಲಾಗುವುದೇ?

SY : BRS, YSRCP, BJD ಅನ್ನು ನಿತೀಶ್ ಕುಮಾರ್ ಅವರು ಪಾಟ್ನಾ ಸಭೆಗೂ ಮುನ್ನವೇ ಸಂಪರ್ಕಿಸಿದ್ದರು. ಅವರೆಲ್ಲರೂ ಹಾಜರಾಗುವುದಿಲ್ಲ ಎಂದು ಹೇಳಿದರು ಎಂದು ಅವರು ಸಭೆಗೆ ವರದಿ ಮಾಡಿದರು. ಈಗಲೂ ಅವರು ಹಾಗೆಯೇ ಉಳಿದಿದ್ದಾರೆ. ರಾಜಕೀಯ ಬೆಳವಣಿಗೆಯೊಂದಿಗೆ ಮತ್ತು ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಬಿಜೆಪಿಯನ್ನು ಸರ್ಕಾರದಿಂದ ಬೇರ್ಪಡಿಸುವ ಅಗತ್ಯವನ್ನು ಅವರು ಅರಿತುಕೊಳ್ಳುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಳ್ಳಬಹುದು.

 

 

Donate Janashakthi Media

Leave a Reply

Your email address will not be published. Required fields are marked *