ಸೆ.27ರ ಭಾರತ್‌ ಬಂದ್‌ ಯಶಸ್ವಿಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಕರೆ

ಬೆಂಗಳೂರು: ಸೆಪ್ಟೆಂಬರ್‌ 27ರ ಭಾರತ್ ಬಂದ್‌ಗೆ ಕರೆ ನೀಡಿರುವ ಸಂಯುಕ್ತ ಕಿಸಾನ್‌ ಮೋರ್ಚಾ ಕರೆಗೆ ರಾಜ್ಯದ ಎಲ್ಲಾ ಜನತೆ ಬೆಂಬಲಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯದ ವಿವಿಧ ರೈತ, ದಲಿತ ಮತ್ತು ಜನಪರ ಸಂಘಟನೆಗಳ ರಾಜ್ಯ ಮುಖಂಡರು  ಕರೆ ನೀಡಿದ್ದಾರೆ.

ಭಾನುವಾರ ನಡೆದ ರಾಜ್ಯಮಟ್ಟದ ಬಹಿರಂಗ ಸಭೆಯಲ್ಲಿ ಮನವಿ ಮಾಡಲಾಗಿದ್ದು, ಸಂಯುಕ್ತ ಹೋರಾಟ ಕರ್ನಾಟಕ ಆನ್‌ಲೈನ್‌ ಸಭೆಯಲ್ಲಿ ಪಾಲ್ಗೊಂಡ ಹೋರಾಟಗಾರರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ‘ಜನಸಾಮಾನ್ಯರ ಅಗತ್ಯ ವಸ್ತುಗಳನ್ನು ವಿಪರೀತವಾಗಿ ಏರಿಕೆ ಮಾಡಲಾದ ಬೆಲೆಗಳು, ಸತತವಾಗಿ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿರುವುದು ಸೇರಿದಂತೆ ಕೇಂದ್ರ ಸರ್ಕಾರದ ಜನತೆಯ ವಿರೋಧಿ ನೀತಿಗಳ ವಿರುದ್ಧ ದೇಶವ್ಯಾಪಿಯಾಗಿ ಈ ಹೋರಾಟ ನಡೆಸಲಾಗುತ್ತಿದೆ. ರೈತರು, ಕಾರ್ಮಿಕರು, ದಲಿತರು ಸೇರಿದಂತೆ ಎಲ್ಲ ವರ್ಗದ ಜನರ ಬೆಂಬಲವಿದೆ’ ಎಂದು ಹೇಳಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆಗಳಿಂದಾಗಿ ಬೆಂಬಲ ಬೆಲೆ ವ್ಯವಸ್ಥೆ ಸಂಪೂರ್ಣ ಹಳಿತಪ್ಪಿದೆ. ಇನ್ನೊಂದೆಡೆ ವಿದ್ಯುತ್‌ ಸರಬರಾಜು ಕಂಪನಿಗಳ ಖಾಸಗೀಕರಣಕ್ಕೂ ಸಿದ್ಧತೆ ನಡೆದಿದೆ. ಈ ಎಲ್ಲವನ್ನೂ ಸಂಘಟಿತವಾಗಿ ವಿರೋಧಿಸುವುದೇ ಬಂದ್‌ ಕರೆಯ ಉದ್ದೇಶ’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಜಿ.ಸಿ. ಬಯ್ಯಾರೆಡ್ಡಿ, ರೈತ ಕಾರ್ಮಿಕರ ಸಂಘದ ಎಚ್‌.ವಿ. ದಿವಾಕರ್‌, ಅಖಿಲ ಭಾರತ ಕಿಸಾನ್‌ ಸಭಾ ಮುಖಂಡ ಪಿ.ವಿ. ಲೋಕೇಶ್‌, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮಾವಳ್ಳಿ ಶಂಕರ್‌, ಕರ್ನಾಟಕದ ಜನಶಕ್ತಿಯ ಮಲ್ಲಿಗೆ ಸಿರಿಮನೆ ಹೋರಾಟದ ವಿವಿಧ ಆಯಾಮಗಳ ಕುರಿತು ಮಾತನಾಡಿದರು.

Donate Janashakthi Media

Leave a Reply

Your email address will not be published. Required fields are marked *