ಬೆಂಗಳೂರು: ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ದಿನಾಂಕವನ್ನು ಘೋಷಿಸಲಾಗಿದೆ.
ಶನಿವಾರ(ಏಪ್ರಿಲ್ 23) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಸಮ್ಮೇಳನದ ಗೋಷ್ಠಿಗಳಲ್ಲಿ ಹೆಚ್ಚಿನ ಜನ ಭಾಗವಹಿಸುವಂತಾಗಬೇಕು ಹಾಗೂ ಅವು ಅರ್ಥಪೂರ್ಣವಾಗಿರಬೇಕು. ಸಮಿತಿಗಳಲ್ಲಿ ಸಕ್ರಿಯವಾಗಿರುವ ಸ್ಥಳೀಯ ಜನರನ್ನು ತೊಡಗಿಸಿಕೊಳ್ಳಬೇಕು. ಗೋಷ್ಠಿಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಹಲವು ಅಂಶಗಳ ಬಗ್ಗೆಯೂ ಚರ್ಚೆ ನಡೆದಿದೆ.
ಇದನ್ನು ಓದಿ: ಚಂಪಾ ಎಂಬ ಎಚ್ಚರ
ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ ವ್ಯವಸ್ಥೆ ಒಳಗೊಂಡು, ಯಾವರೀತಿಯಲ್ಲಿಯೂ ಕುಂದುಕೊರತೆಗಳು ಬರದಂದೆ ನೋಡಿಕೊಳ್ಳಬೇಕು. ವಸತಿ ನಿಲಯಗಳಲ್ಲಿನ ಕೊಠಡಿಗಳನ್ನು, ಡಾರ್ಮಿಟರಿಗಳನ್ನು ವಸತಿ ಶಾಲೆಗಳನ್ನು ಸದುಪಯೋಗಿಸಿಕೊಳ್ಳಬೇಕು. ಪ್ರಮುಖ ಕಲ್ಯಾಣ ಮಂಟಪಗಳನ್ನು ಗುರುತಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿಯೂ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಲು ಕುಂಭಮೇಳದಲ್ಲಿ ಆಯೋಜಿಸಿದಂತೆ ಟೆಂಟ್ ಗಳನ್ನು ಉಪಯೋಗಿಸಬಹುದು. ಇವುಗಳ ಬಗ್ಗೆ ಸೂಕ್ತ ನೀಲನಕ್ಷೆ ಸಿದ್ಧಪಡಿಸಲು ತಿಳಿಸಿದರು.
ಊಟ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆದಿದೆ. ಸಿದ್ಧತೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸಭೆ ಕರೆದು, ಅಂತಿಮಗೊಳಿಸುವುದು. ಬಜೆಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.
ಇದನ್ನು ಓದಿ: ಸರ್, ಹೋಗಿ ಬನ್ನಿ, ನಮಸ್ಕಾರ
ಸಮ್ಮೇಳನದಲ್ಲಿ ಫ್ಲೆಕ್ಸ್‌ಗಳ ಬಳಕೆಯನ್ನು ನಿಷೇಧಿಸಿ ಜಾಹೀರಾತು ಫಲಕಗಳನ್ನು ಬಳಸುವಂತೆ ಮುಖ್ಯ ಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರುಣ್ ಕುಮಾರ್ ಪೂಜಾರ್, ನೆಹರು ಒಲೆಕಾರ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಹಾವೇರಿ ಜಿಲ್ಲಾಧಿಕಾರಿ ಡಾ. ಸಂಜಯ ಶೆಟ್ಟೆಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.