ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ್‌ ರಾವ್‌ ನಿಧನ

ಬೆಂಗಳೂರು: ಹಿರಿಯ ಪತ್ರಕರ್ತ, ಲೇಖಕ, ಅನುವಾದಕ ಜಿ.ಎನ್ ರಂಗನಾಥ ರಾವ್  ಸೋಮವಾರ ಅ-09 ಬೆಳಗ್ಗೆ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲಿದ್ದ ಅವರು ಬಸವನಗುಡಿಯ ಬಿಎಂಎಸ್ ಆಸ್ಪತ್ರೆಯಲ್ಲಿ ತೀರಿಕೊಂಡರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ:ಹಿರಿಯ ಪತ್ರಕರ್ತ ಸಿ.ಆರ್. ಕೃಷ್ಣರಾವ್ ನಿಧನ

ಆಪ್ತ ವಲಯದಲ್ಲಿ ಜಿಎನ್‌ಆರ್‌ ಎಂದೇ ಪರಿಚಿತರಾಗಿದ್ದ ಅವರು ಕನ್ನಡದ ಪತ್ರಿಕೋದ್ಯಮದ ಅನುಭವಗಳನ್ನು ‘ಆ ಪತ್ರಿಕೋದ್ಯಮ’ ಕೃತಿಯಲ್ಲಿ ಬರೆದಿದ್ದಾರೆ. ಹಲವು ನಾಟಕ, ಪ್ರಬಂಧ ಹಾಗೂ ವಿಮರ್ಶೆಗಳನ್ನು ರಚಿಸಿದ್ದಾರೆ. ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ ಹೆಜ್ಜೆ, ಅನ್ಯೋನ್ಯ, ಗುಣ ದೋಷ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶೇಕ್ಸ್‌ಪಿಯರ್‌ನ ರೋಮಿಯೋ ಜೂಲಿಯೆಟ್, ಆಂಟನಿ ಕ್ಲಿಯೋಪಾತ್ರ, ಬರ್ಟೋಲ್ಟ್ ಬ್ರೆಕ್ಟ್‌ನ ಕಕೇಷಿಯನ್ ಚಾಕ್ ಸರ್ಕಲ್, ರಾಮಚಂದ್ರ ಗುಹಾ ಅವರ ಗಾಂಧಿ ಬಿಫೋರ್‌ ಇಂಡಿಯಾ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

1942ರಲ್ಲಿ ಹಾರೋಹಳ್ಳಿಯಲ್ಲಿ ಜನಿಸಿದ ಅವರು, ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಪತ್ರಕರ್ತರಾಗಿ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. 1962ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿಜೀವನದ ಆರಂಭಿಸಿ, ನಂತರ ಪ್ರಜಾವಾಣಿ ಸೇರಿದ್ದರು. ಪ್ರಜಾವಾಣಿಯಲ್ಲಿ ಹಂತ ಹಂತವಾಗಿ ಮೇಲೇರಿ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಪ್ರಜಾವಾಣಿ ಸಾಪ್ತಾಹಿಕ ಪುರವಣಿ ಮುಖ್ಯಸ್ಥರಾಗಿ, ಸುಧಾ ವಾರಪತ್ರಿಕೆಯ ಉಸ್ತುವಾರಿಯಾಗಿ ನೂರಾರು ಲೇಖಕರನ್ನು ಪ್ರೋತ್ಸಾಹಿಸಿದ್ದರು.

ಇದನ್ನೂ ಓದಿ:ಹಿರಿಯ ಪತ್ರಕರ್ತ-ರಂಗಕರ್ಮಿ ಗುಡಿಹಳ್ಳಿ ನಾಗರಾಜ ನಿಧನ

ಅವರಿಗೆ 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ, 2010ರ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಟಿಎಸ್ಸಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿದ್ದವು.

ಜಿಎನ್‌ಆರ್‌ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ:

ಜಿಎನ್‌ಆರ್‌ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಅವರ ನಿಧನದ ಸುದ್ದಿ ಆಘಾತವುಂಟುಮಾಡಿದೆ. ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡು ನುಡಿಯ ಉನ್ನತಿಗಾಗಿ ದುಡಿದಿದ್ದರು. ರಂಗನಾಥ ರಾವ್ ಅವರ ಅಗಲಿಕೆ ನಾಡಿನ ಪತ್ರಿಕಾರಂಗ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಮತ್ತು ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌  ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿಡಿಯೋ ನೋಡಿ:ಪೋಸ್ಟರ್ ಪ್ರದರ್ಶನದ ಮೂಲಕ ಗಾಂಧಿ ಜಯಂತಿ ಆಚರಿಸಿದ ಬೆಂಗಳೂರು ಮೆಟ್ರೋJanashakthi Media

Donate Janashakthi Media

Leave a Reply

Your email address will not be published. Required fields are marked *