ಚಾಮರಾಜನಗರ : ಹಿರಿಯ ಸಾಹಿತಿ, ಚಿಂತಕ ಪ್ರೋ. ಮಲೆಯೂರು ಗುರುಸ್ವಾಮಿ (76) ಅವರು ನಿಧನರಾಗಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದಾಗಿ ಕೆಲವು ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಸ್ವಾಮಿ ಅವರು ಬುಧವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯಿಂದ ಮೈಸೂರಿನ ಜೆಎಸ್‌ಎಸ್ ಮಹಾ ವಿದ್ಯಾಪೀಠದ ಬಳಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಮಧ್ಯಾಹ್ನ 2 ಗಂಟೆಯ ನಂತರ ಚಾಮರಾಜನಗರ ತಾಲೂಕಿನ ಮಲೆಯೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತ ಪ್ರೊ. ಮಲೆಯೂರು ಗುರುಸ್ವಾಮಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಗುರುಸ್ವಾಮಿಯವರು 5 ಕ್ಕೂ ಹೆಚ್ಚು ಕಾದಂಬರಿ ರಚನೆ ಮತ್ತು 10ಕ್ಕೂ ಹೆಚ್ಚು ಕೃತಿಗಳನ್ನ ಬರೆದಿದ್ದು, ಇವರು ರಾಜೋತ್ಸವ ಪ್ರಶಸ್ತಿ, ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜಿನರಾಗಿದ್ದರು. ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿದ್ದವು.
ಪ್ರೋ. ಮಲೆಯೂರು ಗುರುಸ್ವಾಮಿ ಅವರ ಪ್ರಮುಖ ಕೃತಿಗಳು:
ಕಾದಂಬರಿ – ಮಹಾಯಾತ್ರಿಕ, ಅಪ್ರತಿಮವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ, ಕಪಿಲೆ ಹರಿದಳು ಕಡಲಿಗೆ, ಸಂಸ
ವಿಮರ್ಶಾ ಕೃತಿಗಳು – ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ
ಸಂಪಾದನೆ – ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ನದಿಯ ಎಡಬಲದಿ, ಹೆಜ್ಜಿಗೆ ಅಕ್ಕ, ಛಂದೋನಿಜಗುಣ, ರಾಜಪಥ, ಸೋಮಸಿರಿ, ಶಿವಪ್ರಭೆ, ಶಿವಯೋಗ, ಹೊನ್ನಹೊಳೆ, ಶಿವಸಂಪದ
ಪ್ರೋ. ಮಲೆಯೂರು ಗುರುಸ್ವಾಮಿ ಅವರ ಸಾಹಿತ್ಯ ಸೇವೆಗೆ ಒಲಿದು ಬಂದ ಪ್ರಶಸ್ತಿ/ ಪುರಸ್ಕಾರಗಳು :
2010 – ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
2014 – ಚಾಮರಾಜನಗರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಆಯ್ಕೆಯಾಗಿದ್ದರು.
2017 ರ ಅಕ್ಟೋಬರ್ 22 ರಂದು ‘ಮಲೆಯೂರು ನಮ್ಮವರು’ ಮಗು 70′ ಎಂಬ ಶೀರ್ಷಿಕೆಯಡಿ ಕಲಾಮಂದಿರ, ಮೈಸೂರು ಇಲ್ಲಿ ಅಭಿನಂದನಾ ಕಾರ್ಯಕ್ರಮವು ನಡೆದಿತ್ತು.
ಪ್ರೋ. ಮಲೆಯೂರು ಗುರುಸ್ವಾಮಿ ಮೈಸೂರು, ಚಾಮರಾಜನಗರ ಸೇರಿದಂತೆ ಮಂಡ್ಯ ಜಿಲ್ಲೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಇವರ ನಿಧನ ಸಂಬಂಧ ಹಲವಾರ ಸಾಹಿತ್ಯಾಸಕ್ತರು, ಹಿರಿಯರು ಕಂಬನಿ ಮಿಡಿದಿದ್ದಾರೆ.
ಅವರ ಸ್ಥಾನ ತುಂಬುವುದು ಕಷ್ಟ :
ಹಿರಿಯ ಸಾಹಿತಿ ಚಿಂತಕ ಪ್ರೋ. ಮಲೆಯೂರು ಗುರುಸ್ವಾಮಿ ಅವರ ನಿಧನ ಸಂಬಂಧ ಅಂತಿಮ ನಮನ ಸಲ್ಲಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶೈಲಕುಮಾರ್ ರವರು ಜನಶಕ್ತಿ ಮೀಡಿಯಾದೊಂದಿಗೆ ಮಾತನಾಡಿ 1997 ರಲ್ಲಿ ಮೈಸೂರು ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯು ವಿಭಜನೆಯಾದ ಸಂದರ್ಭದಲ್ಲಿ 1998 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಜಿಲ್ಲಾಧ್ಯಕ್ಷರಾಗಿ ಪ್ರೋ. ಮಲೆಯೂರು ರವರು ಹೊರಹೊಮ್ಮಿದವರು. ಜಿಲ್ಲೆಯಾದ್ಯಂತ ಸಾಹಿತ್ಯವನ್ನು ಗಟ್ಟಿಗೊಳಿಸಿದವರು, ಅವರ ಭಾಷಣಗಳನ್ನು ಕೇಳು ನಾವು ಸದಾ ಹಾತೊರೆಯುತ್ತಿದ್ದೆವು.. ಅವರ ನಿಧನವವಿಂದು ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ಸಾಹಿತ್ಯ ವಲಯದ ತಾರೆ ಅಸ್ತಂಗತವಾಗಿದ್ದು.ನಮ್ಮಲ್ಲರಿಗೂ ನೋವುಂಟು ಮಾಡಿದೆ ಎಂದರು.
ಭಾನುವಾರ ಕಸಾಪ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ :
ಇದೇ ಭಾನುವಾರದಂದು ಪ್ರೋ. ಮಲೆಯೂರು ಗುರುಸ್ವಾಮಿ ಅವರ ನಿಧನ ಸಂಬಂಧ ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶೈಲ ಕುಮಾರ್ ತಿಳಿಸಿದ್ದಾರೆ.