ಪ್ರಜ್ವಲ್ ರೇವಣ್ಣ ಲೈಂಗಿಕ ಹತ್ಯಾಕಾಂಡ ಪ್ರಕರಣ : ಹೈಕೋರ್ಟ್‌ ಎಸ್‌ಪಿಪಿಯಾಗಿ ಪ್ರೊ. ರವಿವರ್ಮ ಕುಮಾರ್‌ ನೇಮಕ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣರ ಲೈಂಗಿಕ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದಿಸಲು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ (ಎಸ್‌ಪಿಪಿ) ರಾಜ್ಯ ಸರ್ಕಾರವು ಈಚೆಗೆ ನೇಮಕ ಮಾಡಿದೆ.

ಬೆಂಗಳೂರಿನ ಸಿಐಡಿ ಠಾಣೆ, ಮೈಸೂರು ಜಿಲ್ಲೆಯ ಕೆ ಆರ್‌ ನಗರ ಠಾಣೆಯಲ್ಲಿ ದಾಖಲಾಗಿರುವ ಸಂತ್ರಸ್ತೆ ಅಪಹರಣ ಪ್ರಕರಣ ಮತ್ತು ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಸಂಬಂಧಿಸಿದ ಹೈಕೋರ್ಟ್‌ ಪ್ರಕರಣಗಳು ಹಾಗೂ ಅವುಗಳಿಂದ ಮೂಡುವ ಇತರ ಪ್ರಕರಣಗಳ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ಮಾಜಿ ಅಡ್ವೊಕೇಟ್‌ ಜನರಲ್‌ ಆದ ಪ್ರೊ. ರವಿವರ್ಮ ಕುಮಾರ್‌ ವಾದ ಮಂಡಿಸಲಿದ್ದಾರೆ.

ಪ್ರಕರಣಗಳಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.‌ ಡಿ ರೇವಣ್ಣ ಆರೋಪಿಯಾಗಿದ್ದಾರೆ.  ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹೆಚ್.ಡಿ ರೇವಣ್ಣ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಇನ್ನು ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದೆ.

ಸಿಆರ್‌ಪಿಸಿ ಸೆಕ್ಷನ್‌ 24ರ ಅಡಿ ಬರುವ ಉಪಸೆಕ್ಷನ್‌ 8, ಕರ್ನಾಟಕ ಕಾನೂನು ಅಧಿಕಾರಿಗಳ ನಿಮಯಗಳು (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮ 30ರ ಅಡಿ ರವಿವರ್ಮ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ: ಪ್ರಜ್ವಲ್, ಎಲ್ಲಿದ್ದರೂ 48 ಗಂಟೆಯೊಳಗೆ ಬಾ! ಎಚ್‌ಡಿ ಕುಮಾರಸ್ವಾಮಿ ಮನವಿ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ದೂರು ಆಧರಿಸಿ ಐಪಿಸಿ ಸೆಕ್ಷನ್‌ ಪ್ರಕರಣ 354ಎ, 354ಡಿ, 506, 509ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ರೇವಣ್ಣ ಅವರನ್ನು ಮೊದಲನೇ ಆರೋಪಿ ಹಾಗೂ ಪ್ರಜ್ವಲ್‌ ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಅಪಹರಣದ ಕುರಿತು ಆಕೆಯ ಪುತ್ರ ನೀಡಿದ ದೂರಿನ ಅನ್ವಯ ಕೆ ಆರ್‌ ನಗರ ಠಾಣೆಯಲ್ಲಿ ಎಚ್‌ ಡಿ ರೇವಣ್ಣ ಮತ್ತು ಸತೀಶ್‌ ಬಾಬು, ಎಚ್‌ ಕೆ ಸುಜಯ್‌, ಎಚ್‌ ಎನ್‌ ಮಧು, ಎಚ್‌ ಡಿ ಮನು ಗೌಡ ವಿರುದ್ಧ ಐಪಿಸಿ ಸೆಕ್ಷನ್‌ 364ಎ, 365 ಜೊತೆಗೆ 34 ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇಡೀ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ಏಪ್ರಿಲ್‌ 28ರಂದು ಸಿಐಡಿಯ ಅಡಿ ವಿಶೇಷ ತನಿಖಾ ದಳ ರಚಿಸಿದೆ. ಈ ತಂಡವು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸುತ್ತಿದೆ

ಇದನ್ನೂ ನೋಡಿ: ಪ್ರಜ್ವಲ್ ಲೈಂಗಿಕ ಹತ್ಯಾಕಾಂಡ : ವಿಶೇಷ ನ್ಯಾಯಾಲಯ ಸ್ಥಾಪನೆ ಅಗತ್ಯ – ಹೈಕೋರ್ಟ್ ವಕೀಲ Janashakthi Media

Donate Janashakthi Media

Leave a Reply

Your email address will not be published. Required fields are marked *