ನವದೆಹಲಿ: ಸೆಪ್ಟೆಂಬರ್ 15ರಂದು ಇಲ್ಲಿನ ರಿಂಗ್ ರಸ್ತೆಯಲ್ಲಿರುವ ದೆಹಲಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಬಳಿ ನಡೆದ ಅಪಘಾತದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಅವರ ಪತ್ನಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
ಮೃತರನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ಮತ್ತು ಹರಿ ನಗರದ ನಿವಾಸಿ ನವಜೋತ್ ಸಿಂಗ್ ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ, ಧೌಲಾ ಕುವಾನ್ – ದೆಹಲಿ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣದ ಪ್ರದೇಶದ ಮೆಟ್ರೋ ಪಿಲ್ಲರ್ ಸಂಖ್ಯೆ 67ರ ಬಳಿ ಟ್ರಾಫಿಕ್ ಜಾಮ್ ಆಗಿರುವ ಬಗ್ಗೆ ಮೂರು ಸಾರ್ವಜನಿಕ ಕರೆಗಳು ಬಂದಿದ್ದವು.
ಇದನ್ನೂ ಓದಿ: 1 ಲಕ್ಷ ಕೋಟಿ ಮೊತ್ತದ ಗಣಿ ಹಗರಣ: ವಿಶೇಷ ತನಿಖಾ ತಂಡ ರಚಿಸಬೇಕೆಂದು ಸಿಎಂ ಗೆ ಪತ್ರ
ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಬಿಎಂಡಬ್ಲ್ಯೂ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು ಕಂಡುಬಂದಿದೆ. BMW ಕಾರು ರಸ್ತೆಯ ಪಕ್ಕದಲ್ಲಿ ಮತ್ತು ಬೈಕ್ ರಸ್ತೆ ವಿಭಜಕದ ಬಳಿ ಬಿದ್ದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು: ಹಣಕಾಸು ಇಲಾಖೆ ಅಧಿಕಾರಿ ನವಜೋತ್ ಸಿಂಗ್ ಅವರು ಬೈಕ್ನಲ್ಲಿ ತಮ್ಮ ಪತ್ನಿ ಸಮೇತ ಹೋಗುತ್ತಿದ್ದಾಗ, ಹಿಂದಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆಯಿತು. ಮಹಿಳೆ ಕಾರನ್ನು ಚಲಾಯಿಸುತ್ತಿದ್ದರು. ಅವರೇ ಗಾಯಗೊಂಡ ಅಧಿಕಾರಿ ಮತ್ತು ಅವರ ಪತ್ನಿಯನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಧಿಕಾರಿ ಮೃತಪಟ್ಟಿದ್ದಾರೆ. ಅವರ ಪತ್ನಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಅಧಿಕಾರಿ ಸಿಂಗ್ ಮತ್ತು ಅವರ ಪತ್ನಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವ ಬದಲು ಅಪಘಾತ ಸ್ಥಳದಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿರುವ ಜಿಟಿಬಿ ನಗರದಲ್ಲಿರುವ ನ್ಯೂಲೈಫ್ ಆಸ್ಪತ್ರೆಗೆ ಕರೆದೊಯ್ದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತದಲ್ಲಿ ಬಿಎಂಡಬ್ಲ್ಯು ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಪತಿ ಕೂಡ ಗಾಯಗೊಂಡಿದ್ದಾರೆ. ಅವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆಗಳನ್ನು ಇನ್ನೂ ದಾಖಲಿಸಿಲ್ಲ. ಇಬ್ಬರೂ ಗುರುಗ್ರಾಮ್ ನಿವಾಸಿಗಳು.
ಅಪಘಾತಕ್ಕೀಡಾದ ಬಿಎಂಡಬ್ಲ್ಯು ಕಾರು ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳವನ್ನು ಅಪರಾಧ ತನಿಖಾ ತಂಡವು ಪರಿಶೀಲಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರನ್ನೂ ಕರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ನೋಡಿ: ಕಾನೂನು ಅರಿವು | ಮಕ್ಕಳ ಕಸ್ಟಡಿ ಮತ್ತು ಪಾಲನೆ ಕಾನೂನುಗಳು | ಜನಶಕ್ತಿ ಮೀಡಿಯಾ, ಧ್ವನಿ ಲೀಗಲ್ ಟ್ರಸ್ಟ್
