ಸಿಪಿಐ(ಎಂ) ಹಿರಿಯ ನಾಯಕ ನಿತ್ಯಾನಂದ ಸ್ವಾಮಿ ನಿಧನ

ಬೆಂಗಳೂರು: ಸಿಪಿಐ(ಎಂ) ಹಿರಿಯ ನಾಯಕ ಹಾಗೂ ಕೃಷಿ ಕೂಲಿಕಾರರ ಹೋರಾಟಗಳಿಗೆ ದಶಕಗಳ ಕಾಲ ಆಶಾಕಿರಣವಾಗಿದ್ದ ಕಾಂ. ನಿತ್ಯಾನಂದ ಸ್ವಾಮಿ (78) ಅವರು ಇಂದು ಬೆಂಗಳೂರಿನ ಸೆಂಟ್ ಥೆರೆಸಾ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಅಗಲಿಕೆಯಿಂದ ಎಡಪಂಥೀಯ ಚಳುವಳಿ ಹಾಗೂ ಕೃಷಿ ಕೂಲಿಕಾರರ ಸಂಘಟನೆಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ. ಸಿಪಿಐ(ಎಂ) ನಾಯಕರು, ಕೃಷಿ ಕೂಲಿಕಾರರ ಸಂಘಟನೆಗಳು ಮತ್ತು ವಿವಿಧ ಜನಪರ ಚಳುವಳಿಗಳ ಮುಖಂಡರು ಅವರ ನಿಧನಕ್ಕೆ ಗಾಢ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನವಲಗುಂದ–ನರಗುಂದ ರೈತ ಬಂಡಾಯದ ಹಿನ್ನೆಲೆಯಲ್ಲಿರುವ ಸವದತ್ತಿ ರೈತರ ಹೋರಾಟ ಸಮಿತಿ ಮೂಲಕ 1980ರಲ್ಲಿ ರೈತ ಚಳುವಳಿಗೆ ಪಾದಾರ್ಪಣೆ ಮಾಡಿದ ನಿತ್ಯಾನಂದ ಸ್ವಾಮಿಯವರು, ನಂತರ ಕರ್ನಾಟಕ ಪ್ರಾಂತ ರೈತ ಸಂಘ (KPRS) ನಾಯಕರಾಗಿ ಕಾರ್ಯನಿರ್ವಹಿಸಿದರು. ಆನಂತರ ದೀರ್ಘಕಾಲ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿಯೂ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಯುಎಸ್.–ಇಸ್ರೇಲ್ ಜಂಟಿ ವೈಮಾನಿಕ ದಾಳಿ: 200ಕ್ಕೂ ಹೆಚ್ಚು ಬಲಿ, ಸರ್ವೋಚ್ಚ ನಾಯಕ ಖಮೇನಿ ಹತ್ಯೆ

ಬಾಲ್ಯದಲ್ಲಿಯೇ ಕುಟುಂಬದವರು ಚರ್ಚ್ ಸೇವೆಗಾಗಿ ಅವರನ್ನು ಕ್ರಿಶ್ಚಿಯನ್ ಮಿಷನರಿಗೆ ದತ್ತು ನೀಡಿದ್ದರು. ಸವದತ್ತಿ ಕ್ರಿಶ್ಚಿಯನ್ ಮಠದ ವಾತಾವರಣದಲ್ಲೇ ಬೆಳೆದ ಅವರು, ಅಲ್ಲಿಂದಲೇ ರೈತ ಹಾಗೂ ಕಮ್ಯೂನಿಸ್ಟ್ ಚಳುವಳಿಗೆ ತೊಡಗಿ, ಸಿಪಿಐ(ಎಂ) ರಾಜ್ಯ ನಾಯಕರಾಗಿ ಬೆಳೆಯುವ ಅಪರೂಪದ ಹಾದಿಯನ್ನು ನಿರ್ಮಿಸಿಕೊಂಡರು. ಅವಿವಾಹಿತರಾಗಿಯೇ ಜೀವನಪರ್ಯಂತ ಸಮಾಜಮುಖಿ ಹೋರಾಟಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

ತಮ್ಮ ಜೀವನದುದ್ದಕ್ಕೂ ಕೃಷಿ ಕೂಲಿಕಾರರು ಮತ್ತು ಬಡ ರೈತರ ಏಳಿಗೆಗಾಗಿ ಶ್ರಮಿಸಿದ ನಿತ್ಯಾನಂದ ಸ್ವಾಮಿಯವರ ನಿಧನದಿಂದ ಬಡವರ ಪರವಾದ ದಿಟ್ಟ ಧ್ವನಿಯೊಂದು ಮೌನವಾಗಿದೆ. ಕೊಪ್ಪಳ, ಹಾವೇರಿ, ಧಾರವಾಡ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪಕ್ಷ ಹಾಗೂ ಕೂಲಿಕಾರರ ಸಂಘಟನೆಗಳನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಸಂಘಟನೆ ನಿರ್ಮಾಣ, ಕೂಲಿಕಾರರ ಹಕ್ಕುಗಳ ಅರಿವು ಮೂಡಿಸುವುದು ಮತ್ತು ಶೋಷಣೆಯ ವಿರುದ್ಧ ಸಂಘಟಿತ ಹೋರಾಟಗಳನ್ನು ರೂಪಿಸುವಲ್ಲಿ ಅವರ ಕೊಡುಗೆ ವಿಶಿಷ್ಟವಾಗಿತ್ತು.

ಕೊಪ್ಪಳ ಜಿಲ್ಲೆಯಲ್ಲಿ ಭೂಮಾಲಕರ ಶೋಷಣೆಯ ವಿರುದ್ಧ ನಡೆಸಿದ ಹೋರಾಟಗಳು ಕೃಷಿ ಕೂಲಿಕಾರರಿಗೆ  ಧ್ವನಿಯಾಗಿ ರೂಪಗೊಂಡಿದ್ದವು. ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ವಿರೋಧವಾಗಿ ನಡೆಸಿದ ನಿರಂತರ ಹಾಗೂ ಸಂಘಟಿತ ಹೋರಾಟಗಳು ರಾಜ್ಯದ ಜನಪರ ಚಳುವಳಿಗಳಿಗೆ ಹೊಸ ದಿಕ್ಕು ನೀಡಿದವು. ಈ ಹೋರಾಟಗಳ ಹಿನ್ನೆಲೆಯಲ್ಲೇ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯವು ನೂರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಐತಿಹಾಸಿಕ ತೀರ್ಪು ನೀಡಿದ್ದು, ಅದು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಪ್ರಮುಖ ಮೈಲುಗಲ್ಲಾಗಿ ಪರಿಗಣಿಸಲಾಗಿದೆ.

ರಾಜ್ಯ ಮಟ್ಟದಲ್ಲಿ ನಡೆದ ಅನೇಕ ಜನಪರ ಹೋರಾಟಗಳಿಗೆ ಅವರು ನೇತೃತ್ವ ನೀಡಿದ್ದು, ಸರಳ ಜೀವನಶೈಲಿ, ತತ್ವನಿಷ್ಠತೆ ಮತ್ತು ಕಮ್ಯೂನಿಸ್ಟ್ ಮೌಲ್ಯಗಳ ಮೇಲಿನ ಬದ್ಧತೆಯಿಂದ ಕಾರ್ಯಕರ್ತರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ವೈಯಕ್ತಿಕ ಪ್ರಚಾರದಿಂದ ದೂರವಿದ್ದು, ಸಂಘಟನೆಯ ಶಕ್ತಿಯ ಮೇಲೆಯೇ ನಂಬಿಕೆ ಇಟ್ಟ ನಾಯಕರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ದೀರ್ಘ ಹೋರಾಟಮಯ ಬದುಕು ಕೃಷಿ ಕೂಲಿಕಾರರ ಹಕ್ಕುಗಳಿಗಾಗಿ ನಡೆದ ಸಂಘಟಿತ ಚಳುವಳಿಗಳಿಗೆ ಶಕ್ತಿ ತುಂಬಿದ್ದು, ಅವರ ಅಗಲಿಕೆಯಿಂದ ಆ ವಲಯದಲ್ಲಿ ಶೂನ್ಯತೆ ಉಂಟಾಗಿದೆ.

ಇದನ್ನೂ ನೋಡಿ: ಪುಸ್ತಕ ಹೆಸರು ನೋಡಿ ಸಂವಾದಕ್ಕೆ ಬರಬೇಡಿ, ಓದಿ ಬನ್ನಿ – ಎಂ.ಜಿ. ಹೆಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *