ದೇಶದ್ರೋಹದ ಕಾನೂನು ರದ್ದಾಗಬೇಕು – ಜಸ್ಟೀಸ್‌ ನಾಗಮೋಹನ ದಾಸ್‌

ಬೆಂಗಳೂರು : ಸೆಕ್ಷನ್‌ 124(ಎ) ಅನ್ನು ಸುಪ್ರೀಂ ಕೋರ್ಟ್‌ ಇದೀಗ ಅಮಾನತಿನಲ್ಲಿ ಇರಿಸಿದೆ. ‘ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಎಲ್ಲ ಸಂಸ್ಥೆಗಳಿಗೆ ಅವುಗಳದ್ದೇ ಆದ ಲಕ್ಷಣ ರೇಖೆಗಳಿವೆ, ಯಾರೂ ಈ ಗಡಿಗಳನ್ನು ದಾಟಬಾರದು’ ಎಂದು ಕೇಂದ್ರ ಕಾನೂನು ಸಚಿವರು ಪ್ರತಿಕ್ರಿಯಿಸಿದ್ದಾರೆ. ಆದರೆ ಶಾಸಕಾಂಗ ರಚಿಸಿರುವ ಯಾವುದೇ ಕಾನೂನು ಸಂವಿಧಾನದ ಯಾವುದೇ ವಿಧಿಗೆ ವಿರುದ್ಧವಾಗಿದ್ದರೆ ಅಂತಹ ಕಾನೂನನ್ನು ರದ್ದುಗೊಳಿಸುವ ಅಧಿಕಾರವು ನ್ಯಾಯಾಂಗಕ್ಕೆ ಇದೆಯೆಂಬ ವಿಚಾರವನ್ನು ಯಾರೂ ಮರೆಯಬಾರದು ಎಂದು ಜಸ್ಟೀಸ್‌ ಎಚ್. ಎನ್‌ ನಾಗಮೋಹನದಾಸ್‌ ತಿಳಿಸಿದ್ದಾರೆ.

ಪ್ರಜಾವಾಣಿಗೆ ಬರೆದ ಲೇಖನ ಹಾಗೂ ಜನಶಕ್ತಿ ಮೀಡಿಯಾಗೆ ನೀಡಿದ ವಿಡಿಯೊ ಪ್ರತಿಕ್ರಿಯೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುತ್ತಿರುವುದನ್ನು ಹತ್ತಿಕ್ಕಲು ಬ್ರಿಟಿಷ್‌ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿತು. ಇದರ ಭಾಗವಾಗಿ, ಧರ್ಮ ಮತ್ತು ಜಾತಿಗಳ ನಡುವೆ ಭೇದಭಾವವನ್ನು ಹುಟ್ಟುಹಾಕಿ, ಒಡೆದು ಆಳುವ ನೀತಿಯನ್ನು ಅನುಸರಿಸಿತು.  ಅವುಗಳಲ್ಲಿ ಪ್ರಮುಖವಾದವೆಂದರೆ, ಸೆಡಿಷನ್ (ರಾಜದ್ರೋಹ) ಕಾನೂನು, ಕ್ರಿಮಿನಲ್ ನ್ಯಾಯಾಂಗ ನಿಂದನೆ ಕಾಯ್ದೆ, ಕ್ರಿಮಿನಲ್ ಮಾನನಷ್ಟ ಕಾಯ್ದೆ ಮುಂತಾದವು.

ಬ್ರಿಟಿಷರು ಭಾರತೀಯ ದಂಡ ಸಂಹಿತೆಗೆ (ಐಪಿಸಿ) ತಿದ್ದುಪಡಿ ತಂದು, ಸೆಕ್ಷನ್‌ 124(ಎ) ಅನ್ನು ಸೇರಿಸಿದರು. ಈ ಸೆಕ್ಷನ್‌ ಬಳಸಿ ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು. ಸ್ವಾತಂತ್ಯ ನಂತರವೂ ನಮ್ಮ ಸರ್ಕಾರಗಳು ಇಂತಹ ಅಮಾನವೀಯ, ಬರ್ಬರ ಹಾಗೂ ದಮನಕಾರಿ ಕಾನೂನುಗಳನ್ನು ಮುಂದುವರಿಸಿಕೊಂಡು ಬಂದಿದ್ದು ದುರದೃಷ್ಟಕರ. ನಮ್ಮ ಸರ್ಕಾರದ ಅತಿರೇಕಗಳನ್ನು ಪ್ರಶ್ನಿಸಿದರೆ, ವಿಮರ್ಶಿಸಿದರೆ ಅಥವಾ ಟೀಕಿಸಿದರೆ ಸೆಕ್ಷನ್‌ 124(ಎ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ, ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ನೂರಾರು ಚಳವಳಿಗಾರರ ವಿರುದ್ಧ ಸಹ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಯಿತು. ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಜನಪರ ನಾಯಕರು, ಸಮಾಜಸೇವಕರ ವಿರುದ್ಧವೂ ಈ ಕಾನೂನನ್ನು ಬಳಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಈ ಸೆಕ್ಷನ್‌ನ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ದಮನಕಾರಿ ಕಾನೂನಿನ ಅಗತ್ಯ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಕಳೆದ ಹತ್ತು ವರ್ಷಗಳಲ್ಲಿ ದೇಶದ್ರೋಹಿ ಪ್ರಕರಣ ದಾಖಲಾಗಿದ್ದು ಎಷ್ಟು ಗೊತ್ತೆ?

ಕೇದಾರನಾಥ್ ಸಿಂಗ್ ಪ್ರಕರಣದ ತೀರ್ಪು ಬಂದು 60 ವರ್ಷಗಳು ಕಳೆದುಹೋಗಿವೆ. ಈ ಕಾಲಾವಧಿಯಲ್ಲಿ ಸರ್ಕಾರಗಳು ನ್ಯಾಯಾಲಯ ರೂಪಿಸಿದ ಮಾನದಂಡಗಳನ್ನು ಪಾಲಿಸಲೇ ಇಲ್ಲ. ದೇಶದ್ರೋಹದ ಸೆಕ್ಷನ್‌ ಬಳಸಿ ಸಾವಿರಾರು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿವೆ. ಇಂದಿಗೂ ನೂರಾರು ಜನ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಮತ್ತು ಪ್ರಕರಣಗಳು ವಿಲೇವಾರಿ ಆಗದೆ ಬಾಕಿ ಉಳಿದುಕೊಂಡಿವೆ. ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಕಳೆದ ಜೂನ್‌ನಲ್ಲಿ ರದ್ದುಗೊಳಿಸಿತು. ಕೇದಾರನಾಥ್ ಸಿಂಗ್ ಪ್ರಕರಣದಲ್ಲಿ ರೂಪಿಸಿರುವ ಮಾನದಂಡಗಳನ್ನು ಸರ್ಕಾರ ಪಾಲಿಸಬೇಕೆಂದು ಈ ಸಂದರ್ಭದಲ್ಲಿ ಅದು ಮತ್ತೆ ಹೇಳಿದೆ. ಆದರೆ ತಾನು ರೂಪಿಸಿರುವ ಮಾನದಂಡಗಳನ್ನು ಸರ್ಕಾರ ಯಾಕೆ ಪಾಲಿಸಲಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಲಿಲ್ಲ ಮತ್ತು ಅದಕ್ಕಾಗಿ ಶಿಕ್ಷಿಸಲಿಲ್ಲ. ನ್ಯಾಯಾಲಯ ವಿಧಿಸಿದ ಮಾನದಂಡಗಳನ್ನು ಸರ್ಕಾರ 60 ವರ್ಷಗಳ ಕಾಲ ಪಾಲಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ದೇಶದ್ರೋಹದ ಸೆಕ್ಷನ್‌ ಅನ್ನು ರದ್ದುಗೊಳಿಸಬೇಕಾಗಿತ್ತು. ಇಂತಹ ಒಂದು ಸುವರ್ಣ ಅವಕಾಶವನ್ನು ಸುಪ್ರೀಂ ಕೋರ್ಟ್‌ ಕಳೆದುಕೊಂಡಿತು ಎಂದು ಜಸ್ಟೀಸ್‌ ದಾಸ್‌ ಅಭಿಪ್ರಾಯ ಪಟ್ಟಿದ್ದಾರೆ.

ಮರುಪರಿಶೀಲನೆ ನಡೆಸುವವರೆಗೆ ದೇಶದ್ರೋಹದ ಕಾನೂನಿನ ಅಡಿ ಯಾವುದೇ ಪ್ರಕರಣ ದಾಖಲು ಮಾಡಬಾರದೆಂದು ಸುಪ್ರೀಂ ಕೋರ್ಟ್‌ ಆದೇಶಿಸಿರುವುದು ಸ್ವಾಗತಾರ್ಹ.  ಈ ಸದವಕಾಶವನ್ನು ಬಳಸಿಕೊಂಡು, ದೇಶದ್ರೋಹದ ಕಾನೂನನ್ನು ರದ್ದುಗೊಳಿಸಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಜಸ್ಟೀಸ್‌ ನಾಗಮೋಹನ ದಾಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *