ದೇಶದ್ರೋಹ – ರಾಜ್ಯದೊಂದಿಗೆ ಸರ್ಕಾರದ ಅತಾರ್ಕಿಕ ಸಮೀಕರಣ

ಮೂಲ ಲೇಖನ : ಪಿ.ಡಿ.ಟಿ. ಆಚಾರಿ,  ಅನುವಾದ:ನಾ ದಿವಾಕರ

ಭಾರತದ ಕಾನೂನು ಆಯೋಗವು ತನ್ನ 279 ನೇ ವರದಿಯಲ್ಲಿ ದೇಶದ್ರೋಹ ಕಾನೂನನ್ನು ಒಳಗೊಂಡಿರುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅನ್ನು ಉಳಿಸಿಕೊಳ್ಳಲು ಶಿಫಾರಸು ಮಾಡಿದೆ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಈ ಅಪರಾಧಕ್ಕೆ ಶಿಕ್ಷೆಯನ್ನು ಹೆಚ್ಚಿಸಲು ಅದು ಶಿಫಾರಸು ಮಾಡಿದೆ. ಸೆಕ್ಷನ್ 124ಎ ಕನಿಷ್ಠ ಮೂರು ವರ್ಷಗಳ ಶಿಕ್ಷೆಯನ್ನು ಒದಗಿಸಿದರೆ, ಆಯೋಗವು ಕನಿಷ್ಠ ಏಳು ವರ್ಷಗಳ ಶಿಕ್ಷೆಯನ್ನು ಶಿಫಾರಸು ಮಾಡುತ್ತದೆ. 2022 ರಲ್ಲಿ, ಭಾರತದ ಸುಪ್ರೀಂ ಕೋರ್ಟ್ ಅಸ್ತಿತ್ವದಲ್ಲಿರುವ ಎಲ್ಲಾ ಪ್ರಕ್ರಿಯೆಗಳಿಗೆ ಮತ್ತು ದೇಶದ್ರೋಹದ ಅಡಿಯಲ್ಲಿ ಹೊಸ ಪ್ರಕರಣಗಳನ್ನು (ಎಸ್‌.ಜಿ.ಒಂಬತ್ಕೆರೆ ವರ್ಸಸ್ ಯೂನಿಯನ್ ಆಫ್ ಇಂಡಿಯಾ) ದಾಖಲಿಸಲು ತಡೆಯಾಜ್ಞೆ ನೀಡಿತ್ತು. ಕಾನೂನು ಜಾರಿ ಅಧಿಕಾರಿಗಳು ಕಾನೂನನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯದ ತಡೆಯಾಜ್ಞೆ ನೀಡಲಾಗಿದೆ.

ಸರ್ಕಾರದ ವಿರುದ್ಧ ಅಪರಾಧ, ದೇಶದ ವಿರುದ್ಧ ಆಗುವುದಿಲ್ಲ

 ಭಾರತದಲ್ಲಿ ದೇಶದ್ರೋಹದ ಕಾನೂನಿಗೆ ಸುದೀರ್ಘ ಮತ್ತು ಕುಖ್ಯಾತ ಇತಿಹಾಸವಿದೆ. ಸೆಕ್ಷನ್ 124 ಎ ಅನ್ನು 1870 ರಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ ಸೇರಿಸಲಾಯಿತು. ಬ್ರಿಟಿಷ್ ರಾಜ್ ವಿರುದ್ಧ ಮಾತನಾಡಿದ ಭಾರತೀಯರ ಧ್ವನಿಯನ್ನು ಹತ್ತಿಕ್ಕುವುದು ಇದರ ಉದ್ದೇಶವಾಗಿತ್ತು, ಏಕೆಂದರೆ ಸರ್ಕಾರವು ಯಾವುದೇ ಪ್ರತಿಭಟನೆ ಅಥವಾ ವಿರೋಧದ ಧ್ವನಿಯನ್ನು ಬಯಸಲಿಲ್ಲ. ಸೆಕ್ಷನ್ 124ಎ ಯಲ್ಲಿ ಬಳಸಿರುವ ಪರಿಭಾಷೆ ವಸಾಹತುಶಾಹಿ ಸರ್ಕಾರದ ಉದ್ದೇಶವನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ದೇಶದ್ರೋಹವು ಸರ್ಕಾರದ ವಿರುದ್ಧದ ಅಪರಾಧವಾಗಿದೆ ಮತ್ತು ಅನೇಕ ಜನರು ಭಾವಿಸುವಂತೆ ದೇಶದ ವಿರುದ್ಧವಲ್ಲ. ಕಾನೂನಿನಿಂದ ಸ್ಥಾಪಿತವಾದ ಸರ್ಕಾರದ ಬಗ್ಗೆ ಅಸಮಾಧಾನವನ್ನು ಪ್ರಚೋದಿಸುವುದು ಅಪರಾಧವಾಗಿದೆ. ಅಪರಾಧವನ್ನು ಮಾತನಾಡುವ ಅಥವಾ ಲಿಖಿತ ಪದಗಳು, ಚಿಹ್ನೆಗಳು ಅಥವಾ ಇನ್ನಾವುದೇ ವಿಧಾನದಿಂದ ಮಾಡಲಾಗುತ್ತದೆ. ಹೀಗಾಗಿ, ಅಪರಾಧದ ಸಾರವೆಂದರೆ ಸರ್ಕಾರವನ್ನು ದ್ವೇಷ ಅಥವಾ ತಿರಸ್ಕಾರಕ್ಕೆ ತರುವುದು ಅಥವಾ ಅಂದಿನ ಸರ್ಕಾರದ ಬಗ್ಗೆ ಅತೃಪ್ತಿಯನ್ನು ಉಂಟುಮಾಡುವುದು

ಬ್ರಿಟಿಷ್ ಅವಧಿಯಲ್ಲಿ ದೇಶದ್ರೋಹದ ಕಾನೂನನ್ನು ಎರಡು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಯಿತು ಮತ್ತು ಅನ್ವಯಿಸಲಾಯಿತು. 1897ರಲ್ಲಿ ನಡೆದ ರಾಣಿ ಸಾಮ್ರಾಗಿಣಿ ವರ್ಸಸ್ ಬಾಲಗಂಗಾಧರ ತಿಲಕ್ ಪ್ರಕರಣದಲ್ಲಿ ಬಾಂಬೆ ನ್ಯಾಯಾಲಯವು ಮರಾಠಿ ವಾರಪತ್ರಿಕೆ ಕೇಸರಿಯಲ್ಲಿ ಶಿವಾಜಿಯನ್ನು ಉಲ್ಲೇಖಿಸಿ ಕೆಲವು ಲೇಖನಗಳನ್ನು ಬರೆದಿದ್ದಕ್ಕಾಗಿ ಬಾಲಗಂಗಾಧರ ತಿಲಕ್ ಅವರನ್ನು ದೇಶದ್ರೋಹದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿತು. ನ್ಯಾಯಾಧೀಶ ಸ್ಟ್ರಾಚೆ ಕಾನೂನನ್ನು ಈ ಕೆಳಗಿನಂತೆ ವಿವರಿಸಿದ್ದಾರೆ: “ ಅಪರಾಧವು (ದೇಶದ್ರೋಹ) ಸರ್ಕಾರದ ಬಗ್ಗೆ ಇತರರಲ್ಲಿ ಕೆಲವು ಕೆಟ್ಟ ಭಾವನೆಗಳನ್ನು ಪ್ರಚೋದಿಸುವುದು ಅಥವಾ ಪ್ರಚೋದಿಸಲು ಪ್ರಯತ್ನಿಸುವುದನ್ನು ಒಳಗೊಂಡಿದೆ. ಅದು ದಂಗೆ ಅಥವಾ ಬಂಡಾಯವಾಗಿರಬಹುದು ಅಥವಾ ಯಾವುದೇ ರೀತಿಯ ನಿಜವಾದ ತೊಂದರೆಯಾಗಿರಬಹುದು, ಯಾವುದೇ ಪ್ರಮಾಣದ್ದಾಗಿರಬಹುದು, ಇದು ಪ್ರಚೋದಿಸದೆ ಇದ್ದರೂ ಅಥವಾ ಉತ್ತೇಜಿಸಲು ಪ್ರಯತ್ನಿಸದೆ ಹೋದರೂ ಸಹ…. ಸರ್ಕಾರದ ಅಧಿಕಾರಕ್ಕೆ ಯಾವುದೇ ದಂಗೆ ಅಥವಾ ಏಕಾಏಕಿ ಅಥವಾ ಬಲವಂತದ ಪ್ರತಿರೋಧವನ್ನು ಪ್ರಚೋದಿಸುವ ಅಥವಾ ಪ್ರಚೋದಿಸುವ ಉದ್ದೇಶವನ್ನು ಅವರು ಹೊಂದಿಲ್ಲದೆ ಹೋದರೂ ಸಹ, ತಪ್ಪಿತಸ್ಥರನ್ನಾಗಿ ಮಾಡಲು ಸಾಕು.” ನಂತರ ಪ್ರಿವಿ ಕೌನ್ಸಿಲ್ ಕಾನೂನಿನ ಈ ವ್ಯಾಖ್ಯಾನವನ್ನು ಬೆಂಬಲಿಸಿತು. ಹೀಗಾಗಿ, ದೇಶದ್ರೋಹ ಎಂದರೆ ಸರ್ಕಾರದ ವಿರುದ್ಧ ಕೆಟ್ಟ ಭಾವನೆಗಳನ್ನು ಪ್ರಚೋದಿಸುವುದು ಅಥವಾ ಪ್ರಚೋದಿಸಲು ಪ್ರಯತ್ನಿಸುವುದು ವ್ಯಾಖ್ಯಾನಿಸಲಾಯಿತು. ಇದು ತುಂಬಾ ಕಠಿಣ ಕಾನೂನು.

ಎರಡನೆಯ ಪ್ರಕರಣವು ನಿಹಾರೇಂದು ದತ್ ಮಜುಂದಾರ್ ಮತ್ತು ಇತರರು ವರ್ಸಸ್‌ ಬ್ರಿಟೀಷ್‌ ಚಕ್ರವರ್ತಿ ಮೊಕದ್ದಮೆಯಾಗಿತ್ತು.  ಫೆಡರಲ್ ನ್ಯಾಯಾಲಯವು ಈ ತೀರ್ಪು ನೀಡಿತ್ತು.. ಆರೋಪಿ ಮಜುಂದಾರ್‌ನನ್ನು ಖುಲಾಸೆಗೊಳಿಸುವಾಗ, ಮುಖ್ಯ ನ್ಯಾಯಮೂರ್ತಿ ಸರ್ ಮಾರಿಸ್ ಗ್ವೈಯರ್ ಕಾನೂನನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಿದರು: “ಸಾರ್ವಜನಿಕ ಅವ್ಯವಸ್ಥೆ ಅಥವಾ ಅಥವಾ ಸಾರ್ವಜನಿಕ ಅವ್ಯವಸ್ಥೆಯ ಸಂಭವನೀಯತೆಯ ಸಮಂಜಸವಾದ ನಿರೀಕ್ಷೆ  ಅಪರಾಧದ ಸಾರವಾಗಿರುತ್ತದೆ.” ಎಂದು ವ್ಯಾಖ್ಯಾನಿಸಿದ್ದರು.

ಬ್ರಿಟಿಷ್ ಭಾರತದ ಎರಡು ನ್ಯಾಯಾಲಯಗಳು ನೀಡಿದ ದೇಶದ್ರೋಹ ಕಾನೂನಿನ ಈ ಎರಡು ಹೇಳಿಕೆಗಳು ಪರಸ್ಪರ ಭಿನ್ನವಾಗಿವೆ. ಒಬ್ಬರು ದೇಶದ್ರೋಹವನ್ನು ಭಿನ್ನಾಭಿಪ್ರಾಯ ಎಂದು ವ್ಯಾಖ್ಯಾನಿಸುತ್ತಾರೆ, ಇದನ್ನು ‘ಸರ್ಕಾರದ ಬಗ್ಗೆ ರಾಜಕೀಯ ದ್ವೇಷ’ ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ದೇಶದ್ರೋಹದ ಕಿಡಿಗೇಡಿತನಕ್ಕೆ ಒಳಗಾಗುತ್ತದೆ. ಎರಡನೆಯದಾಗಿ, ಹಿಂಸೆ ಅಥವಾ ಅವ್ಯವಸ್ಥೆಗೆ ಪ್ರಚೋದನೆ ಇದ್ದಾಗ ಮಾತ್ರ ಅಪರಾಧವನ್ನು ಮಾಡಲಾಗುತ್ತದೆ ಎಂದು ಇದು ಸೂಚಿಸುತ್ತದೆ. ಆ ಸಮಯದಲ್ಲಿ ಅತ್ಯುನ್ನತ ಮೇಲ್ಮನವಿ ನ್ಯಾಯಾಲಯವಾದ ಪ್ರಿವಿ ಕೌನ್ಸಿಲ್, ತಿಲಕರ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ಟ್ರಾಚೆ ಹೇಳಿದಂತೆ ಕಾನೂನನ್ನು ಅನುಮೋದಿಸಿತ್ತು ಎಂಬುದು ಗಮನಾರ್ಹವಾಗಿದೆ. ಇದಲ್ಲದೆ, ಮಜುಂದಾರ್ ಅವರ ಪ್ರಕರಣವನ್ನು ನಿರ್ಧರಿಸಿದಾಗ ದೇಶದ್ರೋಹದ ಬಗ್ಗೆ ಪ್ರಿವಿ ಕೌನ್ಸಿಲ್‌ನ ಅಭಿಪ್ರಾಯವನ್ನು ಫೆಡರಲ್ ನ್ಯಾಯಾಲಯದ ಗಮನಕ್ಕೆ ತರಲಾಗಿಲ್ಲ ಎಂದು ಹೇಳಲಾಗುತ್ತದೆ. ಇಲ್ಲದಿದ್ದರೆ ಅದು ಪ್ರಿವಿ ಕೌನ್ಸಿಲ್‌ನ ನಿರ್ಧಾರವನ್ನು ಅನುಸರಿಸುತ್ತಿತ್ತು.

ಕೇದಾರನಾಥ ತೀರ್ಪು ಮತ್ತು ದೇಶದ್ರೋಹದ ಸಾಂವಿಧಾನಿಕತೆ

ಕೇದಾರನಾಥ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠವು ನೀಡಿದ ತೀರ್ಪನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಬ್ರಿಟಿಷ್ ಅವಧಿಯ ಬೆಳವಣಿಗೆಗಳ ಸಂಕ್ಷಿಪ್ತ ಅವಲೋಕನ ಅಗತ್ಯ. ಕೇದಾರನಾಥ್‌ ವರ್ಸಸ್‌ ಬಿಹಾರ ರಾಜ್ಯ (1962) ಮೊಕದ್ದಮೆ ಮತ್ತು ಆ ತೀರ್ಪಿನ ಸಾರವನ್ನು ಅಳವಡಿಸಿಕೊಳ್ಳಲು ಕಾನೂನು ಆಯೋಗದ ಶಿಫಾರಸುಗಳನ್ನು ಅವಲೋಕನ ಮಾಡುವುದು ಅಗತ್ಯ.

ಕೇದಾರನಾಥ ದೇಶದ್ರೋಹದ ಸಾಂವಿಧಾನಿಕತೆಯನ್ನು ನಿರ್ಧರಿಸಿತು. ನ್ಯಾಯಾಲಯವು ಎರಡು ಕಾರಣಗಳಿಗಾಗಿ ಇದು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು. ಮೊದಲನೆಯದಾಗಿ, ದೇಶದ್ರೋಹವು ಸರ್ಕಾರದ ವಿರುದ್ಧದ ಅಪರಾಧವಾಗಿದ್ದರೂ, ರಾಜ್ಯದ ವಿರುದ್ಧವಾಗಿದೆ ಏಕೆಂದರೆ ಸರ್ಕಾರವು ರಾಜ್ಯದ ಗೋಚರ ಸಂಕೇತವಾಗಿದೆ ಮತ್ತು ಸರ್ಕಾರವನ್ನು ಉರುಳಿಸಿದರೆ ರಾಜ್ಯದ ಅಸ್ತಿತ್ವಕ್ಕೆ ಅಪಾಯವಿದೆ. ಎರಡನೆಯದಾಗಿ, ಅನುಚ್ಛೇದ 19 (2) ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ನಿರ್ಬಂಧಗಳನ್ನು ವಿಧಿಸುತ್ತದೆ, ಇದು ವಿಶಾಲ ಆಯಾಮವನ್ನು ಹೊಂದಿದೆ ಮತ್ತು ದೇಶದ್ರೋಹದ ಕಾನೂನನ್ನು ಒಳಗೊಂಡಿದೆ.

ದೇಶದ್ರೋಹವು ಸರ್ಕಾರದ ವಿರುದ್ಧದ ಅಪರಾಧವಾಗಿದೆ. ಸರ್ಕಾರದ ಬಗ್ಗೆ ಯಾರು ಅಸಂತೃಪ್ತಿಯನ್ನು ಉಂಟುಮಾಡುತ್ತಾರೋ ಅವರ ವಿರುದ್ಧ ಈ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ತಿಲಕರ ಶಿಕ್ಷೆಯನ್ನು ಎತ್ತಿಹಿಡಿದ ಬಾಂಬೆ ಉಚ್ಚ ನ್ಯಾಯಾಲಯದ ಪೂರ್ಣ ಪೀಠವು ಭಿನ್ನಮತವನ್ನು ಸರ್ಕಾರದ ವಿರುದ್ಧ ‘ರಾಜಕೀಯ ದ್ವೇಷ’ ಎಂದು ವ್ಯಾಖ್ಯಾನಿಸಿತು. ಆದ್ದರಿಂದ, ಸಾರ್ವಜನಿಕರ ಮನಸ್ಸಿನಲ್ಲಿ ಸರ್ಕಾರದ ವಿರುದ್ಧ ರಾಜಕೀಯ ದ್ವೇಷವನ್ನು ಸೃಷ್ಟಿಸುವುದು ದೇಶದ್ರೋಹದ ಅಪರಾಧವಾಗಿದೆ. ಈ ಅರ್ಥದಲ್ಲಿ, ಇದು ಸಂವಿಧಾನದ ಅನುಚ್ಛೇದ 19 (1) (ಎ) ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಕೆಟ್ಟ ಸರ್ಕಾರವನ್ನು ಬದಲಿಸುವ ಸ್ವಾತಂತ್ರ್ಯವನ್ನು ಜನರು ಹೊಂದಿರುವ ಪ್ರಜಾಪ್ರಭುತ್ವ ಗಣರಾಜ್ಯದಲ್ಲಿ, ಸರ್ಕಾರದ ವಿರುದ್ಧ ವ್ಯಕ್ತಪಡಿಸುವ ಭಿನ್ನಾಭಿಪ್ರಾಯವು ಅಪರಾಧವಾಗಲು ಸಾಧ್ಯವಿಲ್ಲ. ವಾಸ್ತವವಾಗಿ, ಇದು ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಅನುಭವದ ಒಂದು ಭಾಗವಾಗಿದೆ. ಆದ್ದರಿಂದ ಅದನ್ನು ಅಪರಾಧವನ್ನಾಗಿ ಮಾಡುವುದು ನಾಗರಿಕರ ಮೂಲಭೂತ ಹಕ್ಕುಗಳನ್ನು ನೇರವಾಗಿ ವಿರೋಧಿಸುತ್ತದೆ. ಕೆಟ್ಟ ಸರ್ಕಾರದ ಬಗ್ಗೆ ನಾಗರಿಕರಿಗೆ ಯಾವುದೇ ಪ್ರೀತಿ ಇರಬೇಕೆಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ.

ಪ್ರಿವಿ ಕೌನ್ಸಿಲ್ ಘೋಷಿಸಿದ ಕಾನೂನು ಅಂತಿಮವಾಗಿತ್ತು, ಅದರ ಪ್ರಕಾರ ಸರ್ಕಾರದ ವಿರುದ್ಧ ರಾಜಕೀಯ ದ್ವೇಷವನ್ನು ತೋರಿಸುವ ಸನ್ನೆ ಸಹ ದೇಶದ್ರೋಹದ ವರ್ಗಕ್ಕೆ ಸೇರುತ್ತದೆ. ಸ್ಪಷ್ಟವಾಗಿ, ಸೆಕ್ಷನ್ 124 ಎ ನಲ್ಲಿರುವಂತೆ ದೇಶದ್ರೋಹವು ಅನುಚ್ಛೇದ 19 (1) (ಎ) ಗೆ ವಿರುದ್ಧವಾಗಿದೆ. ಆದಾಗ್ಯೂ, ದೇಶದ್ರೋಹವನ್ನು ಸಾಂವಿಧಾನಿಕವಾಗಿ ಮಾನ್ಯವೆಂದು ಘೋಷಿಸುವ ಪ್ರಯತ್ನದಲ್ಲಿ, ಸರ್ವೋಚ್ಚ ನ್ಯಾಯಾಲಯವು ಫೆಡರಲ್ ನ್ಯಾಯಾಲಯದ ದೃಷ್ಟಿಕೋನವನ್ನು ಅಂಗೀಕರಿಸಿತು ಮತ್ತು ಸೆಕ್ಷನ್ 124 ಎ ಮಾನ್ಯವಾಗಿದೆ, ಆದರೆ ಮಾತುಗಳು ಅಥವಾ ಸನ್ನೆಗಳು ಹಿಂಸಾಚಾರವನ್ನು ಪ್ರಚೋದಿಸಿದರೆ ಮಾತ್ರ ಅದನ್ನು ಅನ್ವಯಿಸಬಹುದು ಎಂದು ಅಭಿಪ್ರಾಯಪಟ್ಟಿತು. ಐಪಿಸಿಯ ಸೆಕ್ಷನ್ 124 ಎ ಯಲ್ಲಿ ಹೇಳಿರುವಂತೆ ಮತ್ತು ಪ್ರಿವಿ ಕೌನ್ಸಿಲ್ ವ್ಯಾಖ್ಯಾನಿಸಿದಂತೆ, 1950 ರಲ್ಲಿ ಸಂವಿಧಾನವು ಜಾರಿಗೆ ಬಂದ ನಂತರ ದೇಶದ್ರೋಹವು ಶಾಸನ ಪುಸ್ತಕದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿದಿತ್ತು. ವಾಕ್ ಮತ್ತು ಅಭಿವ್ಯಕ್ತಿ ಹಕ್ಕಿನ ಮೇಲಿನ ಸಮಂಜಸವಾದ ನಿರ್ಬಂಧವಾಗಿ ದೇಶದ್ರೋಹವನ್ನು ಸಂವಿಧಾನ ಸಭೆಯು ಕರಡು ಸಂವಿಧಾನದಿಂದ ಕೈಬಿಟ್ಟಿದೆ ಎಂಬ ಅಂಶವನ್ನು ನ್ಯಾಯಾಲಯವು ಗಮನದಲ್ಲಿರಿಸಿಕೊಂಡಿತು.

ಇದರ ಅರ್ಥ ಸ್ಪಷ್ಟವಾಗಿತ್ತು. ದೇಶ ದ್ರೋಹವು ಸರಿಯಾದ ಸಮರ್ಪಕವಾದ ನಿಷೇಧಿತ ಅಪರಾಧವಾಗಿರಲಿಲ್ಲ. ಆದರೆ ನ್ಯಾಯಾಲಯವು ದೇಶದ್ರೋಹವನ್ನು ಎತ್ತಿಹಿಡಿಯಲು ಬಯಸಿತು ಏಕೆಂದರೆ ಅದು ದೇಶದಲ್ಲಿ ಮುಂಬರುವ ಕಮ್ಯುನಿಸ್ಟ್ ಕ್ರಾಂತಿಯ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸಿತು, ಇದನ್ನು ಬಿಹಾರದ ಬೇಗು ಸರೈನ ಸ್ಥಳೀಯ ಕಮ್ಯುನಿಸ್ಟ್ ಕೇದಾರನಾಥ್ ಪ್ರತಿಪಾದಿಸುತ್ತಿದ್ದರು. ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೇದಾರನಾಥದ ಮೊಕದ್ದಮೆಯಲ್ಲಿ ನ್ಯಾಯಾಲಯವು ತೆಗೆದುಕೊಂಡ ನಿಲುವು ತಿಲಕರ ಮೊಕದ್ದಮೆಯ ನಿಲುವಿಗಿಂತ ಮೂಲಭೂತವಾಗಿ ಭಿನ್ನವಾಗಿಲ್ಲ ಎಂದು ನಾವು ಕಾಣಬಹುದು. ಕೇದಾರನಾಥ ತೀರ್ಪಿನ ಪ್ರಕಾರ, ಅವ್ಯವಸ್ಥೆಯನ್ನು ಪ್ರಚೋದಿಸುವ ಪ್ರವೃತ್ತಿಯು ದೇಶದ್ರೋಹಕ್ಕೆ ಸಮನಾಗಿರುತ್ತದೆ, ಮತ್ತು ವಾಸ್ತವದಲ್ಲಿ ಅವ್ಯವಸ್ಥೆ ಉಂಟಾಗಬೇಕು ಎಂದೇನಿಲ್ಲ. ಆದ್ದರಿಂದ , ಕೇದಾರನಾಥ ಮತ್ತು ತಿಲಕರ ತೀರ್ಪುಗಳ ನಡುವೆ ಮೂಲವಸ್ತುವಿನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.

 ಕಾನೂನು ಆಯೋಗವು ಅವ್ಯವಸ್ಥೆಯ ಪ್ರಚೋದನೆಯನ್ನು ಸೆಕ್ಷನ್ ೧೨೪ ಎ ನಲ್ಲಿ ಸೇರಿಸಬೇಕು ಎಂದು ಸೂಚಿಸಿದೆ. ಆಯೋಗವು ʼಪ್ರವೃತ್ತಿʼಯನ್ನು ಕೊಂಚ ಮಟ್ಟಿಗೆ ʼಒಲವುʼ ಎಂದು ವ್ಯಾಖ್ಯಾನಿಸುತ್ತದೆ. ಭಾಷಣ ಅಥವಾ ಲೇಖನದಲ್ಲಿ ಅವ್ಯವಸ್ಥೆಯನ್ನು ಪ್ರಚೋದಿಸುವ ಪ್ರವೃತ್ತಿಯನ್ನು ಕಂಡುಹಿಡಿಯುವ ಪೊಲೀಸ್, ಮತ್ತು ನಾಗರಿಕನು ಏಳು ವರ್ಷಗಳ ಕಾಲ ಸಜೆ ಅಥವಾ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾನೆ. ವಾಸ್ತವವಾಗಿ, ಕೇದಾರನಾಥ ತೀರ್ಪು ದೇಶದ್ರೋಹ ಕಾನೂನನ್ನು ಮೃದುಗೊಳಿಸಲಿಲ್ಲ. ಕಾನೂನಿನ ಕಠೋರತೆಯನ್ನು ದುರ್ಬಲಗೊಳಿಸದೆ ಅದನ್ನು ತಿಲಕರ ತೀರ್ಪಿಗೆ ಹತ್ತಿರ ತಂದಿದೆ. ಈ ಕಾನೂನನ್ನು ರದ್ದುಗೊಳಿಸಲು ಸಾರ್ವತ್ರಿಕ ಬೇಡಿಕೆ ಇರುವಾಗ, ದಂಡವನ್ನು ಹೆಚ್ಚಿಸುವ ಶಿಫಾರಸು ಸಾಮಾನ್ಯ ತಿಳುವಳಿಕೆಗೆ ವ್ಯತಿರಿಕ್ತವಾಗಿ ಕಾಣುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪದಚ್ಯುತಗೊಳಿಸುವ ಹಕ್ಕು ಹೊಂದಿರುವ ದೇಶದ ನಾಗರಿಕರು ಸರ್ಕಾರದ ವಿರುದ್ಧ ಅಸಮಾಧಾನವನ್ನು ಉಂಟುಮಾಡುವುದನ್ನು ಅಪರಾಧ ಎಂದು ಪರಿಗಣಿಸುವ ಕಾನೂನಿನ ಅಸಂಬದ್ಧತೆಯನ್ನು ಆಯೋಗವು ಗಮನಿಸಿಲ್ಲ.

 ವಾಸ್ತವದಲ್ಲಿ ಸಮಸ್ಯೆಯೆಂದರೆ ಐಪಿಸಿಯ ಸೆಕ್ಷನ್ 124 ಎ ಯಲ್ಲಿ ಒಳಗೊಂಡಿರುವ ದೇಶದ್ರೋಹದ ಕಾನೂನು ಅಸಾಂವಿಧಾನಿಕವಾಗಿದೆ. ಕಾನೂನು ಆಯೋಗವು ಕೇದಾರನಾಥ ತೀರ್ಪಿನಲ್ಲಿನ ತಪ್ಪುಗ್ರಹಿಕೆಯನ್ನು ನೋಡಲು ವಿಫಲವಾಗಿದೆ ಅಥವಾ ನೋಡಲು ಬಯಸಿಲ್ಲ ಹಾಗಾಗಿ ಅದು ಈ ಕಠಿಣ ಕಾನೂನನ್ನು ಪರಿಣಾಮಕಾರಿಯಾಗಿ ಮೃದುಗೊಳಿಸಲು ಮುಂದಾಗಿಲ್ಲ. ಬದಲಾಗಿ ಅದು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಎಂದು ಘೋಷಿಸಿದೆ. ಕೇದಾರನಾಥ ತೀರ್ಪು ಸರ್ಕಾರವನ್ನು ರಾಜ್ಯದೊಂದಿಗೆ ಸಮೀಕರಿಸುತ್ತದೆ, ಇದು ಪ್ರಜಾಪ್ರಭುತ್ವ ಗಣರಾಜ್ಯದ ಸಂದರ್ಭದಲ್ಲಿ ಅತಾರ್ಕಿಕವಾಗಿದೆ. ಆದ್ದರಿಂದ, ದೇಶದ್ರೋಹವನ್ನು ಅನುಚ್ಛೇದ 19 (2) ರ ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳ ಚೌಕಟ್ಟಿನೊಳಗೆ ತರುವ ಅದರ ಪ್ರಯತ್ನವು ಸಾಂವಿಧಾನಿಕವಾಗಿ ಸ್ವೀಕಾರಾರ್ಹವಲ್ಲ ಎಂದೇ ಹೇಳಬಹುದು.

 

Donate Janashakthi Media

Leave a Reply

Your email address will not be published. Required fields are marked *