ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಕೆಲವು ಕ್ರಮಗಳನ್ನು ಕೈಗೊಂಡಿರುವ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಮುಂದಿನ ಕ್ರಮದ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಈ ನಡುವೆ ಥಾಣೆ, ಮುಂಬೈನಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಜೂನ್ 30ರ ವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಮೆರವಣಿಗೆ, ಪ್ರತಿರೋಧಗಳನ್ನು ಕೂಗುವುದು, ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.
ಯಾವುದೇ ರೀತಿಯ ರಾಜಕೀಯ ಮೆರವಣಿಗೆ, ಸಭೆ ಅಥವಾ ಘೋಷಣೆಗಳನ್ನು ಮಾಡುವಂತಿಲ್ಲವೆಂದು ಆದೇಶ ಹೊರಡಿಸಿದೆ. ಮುಂಬೈ ಪೊಲೀಸರು ನಗರದ ಎಲ್ಲ ರಾಜಕೀಯ ಕಚೇರಿಗಳ ಭದ್ರತೆ ಬಗ್ಗೆ ಖಚಿತಪಡಿಸಿಕೊಳ್ಳಲು ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿ ಮಟ್ಟದ ಪೊಲೀಸ್ ಸಿಬ್ಬಂದಿ ಪ್ರತಿ ರಾಜಕೀಯ ಕಚೇರಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗರ ಬಂಡಾಯದಿಂದ ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಇದರಿಂದ ಆಕ್ರೋಶಗೊಂಡಿರುವ ಶಿವಸೇನೆ ಕಾರ್ಯಕರ್ತರು ಹಲವೆಡೆ ದಾಂಧಲೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಶಿಂಧೆ ಬೆಂಬಲಿಗರ ಫಲಕ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿರುವ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ.
ಇಂದು ಸಭೆ ನಡೆಯುತ್ತಿದ್ದು, ಬಂಡಾಯ ಶಾಸಕರ ವಿರುದ್ಧ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ತೀರ್ಮಾನಗಳು ಹೊರಬೀಳಲಿದೆ ಎನ್ನಲಾಗುತ್ತಿದೆ. ಸಭೆ ಬಳಿಕ 16 ಬಂಡಾಯ ಶಿವಸೇನೆ ಶಾಸಕರಿಗೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಬಣಕ್ಕೆ ಮತ್ತೋರ್ವ ಶಾಸಕ ಸೇರಿಕೊಂಡಿದ್ದು, ಅಸ್ಸಾಂ ರಾಜಧಾನಿಯಲ್ಲಿ ಬೀಡುಬಿಟ್ಟದ್ದಾರೆ. ಅವರೊಂದಿಗೆ, ಶಾಸಕರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಅರ್ಹನತೆ ಭೀತಿಯಿಂದ (56ರ ಶಾಸಕರಲ್ಲಿ 3ನೇ ಎರಡರಷ್ಟು ಸಂಖ್ಯೆ 37) ಶಾಸಕರು ಪಾರಾಗಿದ್ದಾರೆ.
ಇದರೊಂದಿಗೆ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟ ಹೊಂದಿರುವ ಉದ್ಧವ್ ಠಾಕ್ರೆ ಮುಖ್ಯಂತ್ರಿಯಾಗಿರುವ ಸರ್ಕಾರ ಪತನಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇದರೊಂದಿಗೆ ಶಿಂಧೆ ಬಣದಲ್ಲಿರುವ ಶಾಸಕರ ಸಂಖ್ಯೆ ಪಕ್ಷೇತರರೂ ಸೇರಿ 50ಕ್ಕೆ ಏರಿಕೆಯಾಗಿದೆ.