ಮೈಸೂರು: ರಾಜ್ಯದಲ್ಲಿ ಡೆಂಗ್ಯೂ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಸೋಂಕಿಗೆ ಎರಡನೇ ಬಲಿಯಾಗಿರುವುದು ಆತಂಕ ಮೂಡಿಸಿದೆ.
ಜಯದೇವ ಹೃದ್ರೋಗ ಆಸ್ಪತ್ರೆ ಡಾಟಾ ಎಂಟ್ರಿ ಆಪರೇಟರ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಲಲಿತಾ ಎಂಬವರು ಮೃತಪಟ್ಟಿದ್ದಾರೆ. ಡೆಂಗ್ಯೂ ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಸದ್ಯ 35 ಮಂದಿ ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಡೆಂಗ್ಯೂನಿಂದ ಸಾವಿಗೀಡಾಗಿದ್ದರು.
ರಾಜ್ಯದಲ್ಲಿ ಒಟ್ಟು 301 ಡೆಂಗ್ಯೂ ಸಕ್ರಿಯ ಪ್ರಕರಣಗಳಿವೆ. ಇಂದು ಒಂದೇ ದಿನ 159 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿಗೆ ಇಂದು ಮೈಸೂರಿನ ಒಬ್ಬರು ಸೇರಿ ಇಬ್ಬರು ಬಲಿಯಾಗಿದ್ದಾರೆ. ಈವರೆಗೆ ಪ್ರಕರಣಗಳ ಸಂಖ್ಯೆ 7,165 ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಸಂಖ್ಯೆ 6 ಕ್ಕೆ ಏರಿದೆ.
ಡೆಂಗ್ಯೂ ರೋಗದ ಲಕ್ಷಣಗಳು
ಜ್ವರ, ತಲೆನೋವು, ಮೈ ಕೈ ನೋವು, ಕೀಲುನೋವು, ಹೊಟ್ಟೆನೋವು, ವಾಕರಿಕೆ, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಲ್ಲಿ ಭಯಪಡೆದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಕೊಳಚೆ ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆ ನಿಯಂತ್ರಿಣಕ್ಕೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.
ಡೆಂಗ್ಯೂ ತಡೆಗಟ್ಟಲು ವಹಿಸಬೇಕಾದ ಎಚ್ಚರಿಕೆಗಳು
ಗಲೀಜು ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡೋದು ಅತೀ ಮುಖ್ಯ. ಮನೆ ಸುತ್ತ, ಟೆರೇಸ್ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ನೀರು ಶೇಖರಣೆಯಾಗುವ ಪ್ರದೇಶವಿದ್ರೆ ಅಲ್ಲಿ ಶುಚಿಗೊಳಿಸಬೇಕು. ಮನೆಯ ಸುತ್ತಲಿನ ಪರಿಸರವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆಯಡಿ ಮಲಗಿಸುವುದು ಒಳ್ಳೆಯದು. 3 ದಿನ ನಿರಂತರ ಜ್ವರ, ಮೈಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು. ತಲೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು.