ಚೆನ್ನೈ: ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿ 13 ಸಾವನ್ನಪ್ಪಿದ್ದಾರೆ. ಸೇನಾ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ನ ದುರಂತಕ್ಕೆ ಈಡಾಗಿದ್ದು, ದುರಂತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ದುರಂತದ ನಿಖರವಾದ ಕಾರಣ ತಿಳಿದುಕೊಳ್ಳಲು ಬ್ಲ್ಯಾಕ್ ಬಾಕ್ಸ್ ಅಥವಾ ‘ಫ್ಲೈಟ್ ಡೇಟಾ ರೆಕಾರ್ಡರ್’ಗಾಗಿ ಪತ್ತೆ ಮಾಡಲಾಗುತ್ತಿದ್ದು, ಇಂದೂ ಸಹ ಶೋಧಕಾರ್ಯ ಮುಂದುವರೆದಿದೆ.
ಇದನ್ನು ಓದಿ: ಗಂಭೀರ ಸ್ಥಿತಿಯಲ್ಲಿದ್ದ ಜನರಲ್ ಬಿಪಿನ್ ರಾವತ್ ನಿಧನ
ಹೆಲಿಕಾಪ್ಟರ್ ದುರಂತಕ್ಕೆ ಈಡಾದ ಸ್ಥಳವಲ್ಲದೇ ಸುತ್ತಲಿನ 300 ಮೀಟರ್ ವರೆಗಿನ ಪ್ರದೇಶದವರೆಗೂ ಶೋಧನೆ ಕೈಗೊಂಡಿರುವುದು ತಿಳಿದು ಬಂದಿದೆ. ಹೆಲಿಕಾಪ್ಟರ್‌ನ ಅಂತಿಮ ಕ್ಷಣದ ಸ್ಥಿತಿಗತಿಗಳು ಮತ್ತು ಇತರ ಪ್ರಮುಖ ಮಾಹಿತಿಗಳನ್ನು ಬ್ಲಾಕ್ ಬಾಕ್ಸ್‌ನಲ್ಲಿ ದಾಖಲಾಗಿರುತ್ತದೆ.
ವಿಮಾನವೊಂದರ ಸಂಪೂರ್ಣವಾದ ಮಾಹಿತಿಗಳು ಇದರಲ್ಲಿ ದಾಖಲಿದೆ. ಈ ಪೆಟ್ಟಿಗೆಯನ್ನು ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತಾದರೂ, ಹೊಳೆಯುವ ಕಿತ್ತಳೆ ಬಣ್ಣದ್ದಾಗಿರುತ್ತದೆ. ಕಾಕ್‌ಪಿಟ್ ಸಂಭಾಷಣೆಯನ್ನೂ ಇದು ಒಳಗೊಂಡಿರುತ್ತದೆ.
ಬ್ಲಾಕ್ ಬಾಕ್ಸ್ ಜೊತೆಗೇ, ಘಟನೆಯಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ದುರಂತದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆಗಳಿವೆ. ಆದರೆ, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತರದಿಂದಾಗಿ ಅವರು ಶೇಕಡಾ 80ರಷ್ಟು ಸುಟ್ಟಗಾಯಗಳಾಗಿವೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಹೆಲಿಕಾಪ್ಟರ್ ಪತನಗೊಂಡಿತು. ಈ ದುರಂತದಲ್ಲಿ, ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.