ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಎರಡೂ ತೀವ್ರವಾದಿ ಸಂಘಟನೆಗಳಾಗಿವೆ. ಆದರೆ, ನಿಷೇಧಿತವಾಗಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
” ಪಿಎಫ್‌ಐ-ಎಸ್‍ಡಿಪಿಐ ಗಂಭೀರ ಹಿಂಸಾಚಾರ ಪ್ರಕರಣಗಳಲ್ಲಿ ತೊಡಗಿಕೊಂಡಿರುವ ತೀವ್ರಗಾಮಿ ಸಂಘಟನೆಗಳೆಂದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಕಳೆದ ವರ್ಷ ಪಾಲಕ್ಕಾಡಿನಲ್ಲಿ ನಡೆದ ಆರಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣದ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ಜಸ್ಟಿಸ್ ಕೆ ಹರಿಪಾಲ್ ತಿಳಿಸಿದ್ದಾರೆ.
ನ್ಯಾಯಾಲಯದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ, ಅಭಿಪ್ರಾಯವನ್ನು ಕಡತದಿಂದ ತೆಗದುಹಾಕುವಂತೆ ಮನವಿ ಮಾಡಲಾಗುವುದಾಗಿ ತಿಳಿಸಿದೆ.
“ಇದೊಂದು ಗಂಭೀರ ಹೇಳಿಕೆ. ಇಲ್ಲಿಯ ತನಕ ಯಾವುದೇ ತನಿಖಾ ಏಜನ್ಸಿಯು ಎಸ್‍ಡಿಪಿಐ ಕುರಿತು ಇಂತಹ ಹೇಳಿಕೆ ನೀಡಿಲ್ಲ. ಇಂತಹ ಹೇಳಿಕೆಯನ್ನು ಯಾವ ಆಧಾರದಲ್ಲಿ ಮಾಡಲಾಗಿದೆ?,” ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಮುವತ್ತುಪುಝ ಅಶ್ರಫ್ ಮೌಲವಿ ಪ್ರಶ್ನಿಸಿದ್ದಾರೆ.
ಎಸ್‌ಡಿಪಿಐ ನಿಲುವನ್ನು ಬೆಂಬಲಿಸಿರುವ ಪಿಎಫ್‌ಐ, ನ್ಯಾಯಾಲಯದ ಅಭಿಪ್ರಾಯ ಸಮರ್ಥನೀಯವಲ್ಲ ಎಂದು ಹೇಳಿದೆ.
ಆದರೆ ಸಂಘಪರಿವಾರ ಸಂಘಟನೆಗಳು ನ್ಯಾಯಾಲಯದ ಹೇಳಿಕೆಯನ್ನು ಸ್ವಾಗತಿಸಿವೆ. ಕಳೆದ ವರ್ಷದ ನವೆಂಬರ್ 15ರಂದು ನಡೆದ ಆರೆಸ್ಸೆಸ್ ಕಾರ್ಯಕರ್ತ ಎ ಸಂಜಿತ್ (27) ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಇದಾಗಿತ್ತು.
ಈ ಪ್ರಕರಣದ ಆರೋಪಿಗಳನ್ನು ಗುರುತಿಸಲಾಗಿದೆ ಹಾಗೂ ಹಲವರನ್ನು ಬಂಧಿಸಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ಈ ಹಂತದಲ್ಲಿ ಸಿಬಿಐ ತನಿಖೆಗೆ ಹಸ್ತಾಂತರಿಸಿದರೆ ವಿಚಾರಣೆ ಇನ್ನಷ್ಟು ವಿಳಂಬಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟಿದೆ.