– ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಶಿಫಾರಸು
ಬೆಂಗಳೂರು: ಪುಲಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ನಿವಾಸ ಮೂರ್ತಿ ಹಾಗೂ ಪೊಲೀಸ್ ಠಾಣೆ ಧ್ವಂಸ ಮಾಡಿದ ಪ್ರಕರಣದಲ್ಲಿ ಎಸ್ಡಿಪಿಐ ಪಕ್ಷದ ಕೈವಾಡ ಇದೆ ಎಂದು ಹೇಳಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸ್‌ಡಿಪಿಐ ಅನ್ನು ನಿಷೇಧಿಸಲು ಕೆಲ ಸಚಿವರು ತೀವ್ರ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.
ಕಾನೂನು ಇಲಾಖೆ ವರದಿ ಬಳಿಕ ಕೇಂದ್ರಕ್ಕೆ ಈ ಬಗ್ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.
ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮಹಮದ್ ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಮತ್ರುತು ಕಾವಲ್ ಭೈರಸಂದ್ರದಲ್ಲಿ ಗಲಭೆ ನಡೆದಿತ್ತು. ಈ ಪ್ರಕರಣದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಪಕ್ಷದ ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಬಿಜೆಪಿ ಆಗ್ರಹಿಸಿತ್ತು. ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧಿಸಲು ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಒತ್ತಡ ಹೇರಿದರು. ಡಿ.ಜಿ.ಹಳ್ಳಿ ಗಲಭೆ, ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ, ಮಂಗಳೂರು ಗಲಭೆಯಲ್ಲಿ ಈ ಸಂಘಟನೆಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಆದ್ದರಿಂದ ನಿಷೇಧ ಮಾಡುವಂತೆ ಕೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಆರ್.ಅಶೋಕ, ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಗಲಭೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಆಕ್ರೋಶ ಹೊರ ಹಾಕಿದ್ದಾರೆ. ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಗೊಳಿಸಲಾಗುತ್ತಿದೆ. ವಿಷಯಾಂತರ ಮಾಡಿ ಬಿಜೆಪಿ ಮೇಲೆಯೇ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಆರೋಪಗಳಿಗೆ ನಾವು ತೀಕ್ಷ್ಣ ಪ್ರತಿಕ್ರಿಯೆ ಕೊಡಬೇಕಿದೆ. ಹೀಗಾಗಿ ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳಬೇಕು ಎಂದರು.
ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಎಸ್‌ಡಿಪಿಐಗೆ ಕಡಿವಾಣ ಹಾಕದೇ ಇದ್ದರೆ ಮುಂದೆ ಉಳಿಗಾಲ ಇರುವುದಿಲ್ಲ. ಅವರ ಉಪಟಳ ಕಂಟ್ರೋಲ್ ಮಾಡಲು ಪೊಲೀಸರಿಗೂ ಆಗಲ್ಲ. ಜನ ನೆಮ್ಮದಿಯಿಂದ ಬದುಕೋಕೆ ಬಿಡಲ್ಲ ಎಂದು ಹೇಳಿದರು.
ಅಶೋಕ್ ಹಾಗೋ ಬೊಮ್ಮಾಯಿ ಮಾತಿಗೆ ಸಂಪುಟ ಒಪ್ಪಿಗೆ ಸೂಚಿಸಿತು. ಎಸ್‌ಡಿಪಿಐ ನಿಷೇಧ ಮಾಡುವ ಶಿಫಾರಸಿಗೆ ಅಗತ್ಯವಾದ ದಾಖಲೆ ಕಲೆಹಾಕಿ ಪಕ್ಕಾ ವರದಿ ನೀಡುವಂತೆ ಕೇಳಲಾಗಿದೆ. ಕಾನೂನು ಮತ್ತು ಗೃಹ ಇಲಾಖೆ ವರದಿ ಬಳಿಕ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.
ಡಿಜೆಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಪಾತ್ರ ಇದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾಗಲೆಲ್ಲಾ ಎಸ್‌ಡಿಪಿಐ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಇದೆ ಎಂದು ಆರೋಪ ಮಾಡುತ್ತಿದ್ದರು. ಈ ವೇಳೆ ಸಾಕ್ಷಿ ಇದ್ದರೆ ಬಿಜೆಪಿಯು ಎಸ್‌ಡಿಪಿಐ ಅನ್ನು ನಿಷೇಧ ಮಾಡುವಂತೆ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ಸವಾಲೆಸೆದಿದ್ದರು. ಗುರುವಾರ ನಡೆದ ಸಚಿವ ಸಂಪುಟದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.