ಬೆಂಗಳೂರು: ಸಿಬಿಎಸ್‌ಇ ಶಾಲೆ ಎಂದು ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡಿಕೊಂಡ ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳಿಗೆ ರಾಜ್ಯ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದು, ಇದೀಗ ಶಾಲೆಯ ನಾಗರಭಾವಿ ಶಾಖೆಯ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿರುವ ಆರ್ಕಿಡ್ ಇಂಟರ್ನ್ಯಾಷನ್ ಸ್ಕೂಲ್ ನಾಗರಭಾವಿ ಶಾಖೆ ಇದರ ವಿರುದ್ಧ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದೆ.
ರಾಜ್ಯ ಮಂಡಳಿಯ ಪ್ರಕಾರ ಸಂಸ್ಥೆಯನ್ನು ನಡೆಸಲು ಅನುಮತಿ ಇದ್ದರೂ, ಶಾಲೆಯು ಸಿಬಿಎಸ್‌ಇ ಮಂಡಳಿಯೊಂದಿಗೆ ಸಂಯೋಜಿತವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿಯು ಸುಳ್ಳು ಹೇಳಿಕೆ ನೀಡಿ, ನಮ್ಮಿಂದ ಶುಲ್ಕ ವಸೂಲಿ ಮಾಡಿದ್ದಾರೆ ಎಂದು ಪೋಷಕರು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ಆರ್ಕಿಡ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಾಗರಭಾವಿ ಶಾಖೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಬೆಂಗಳೂರು ದಕ್ಷಿಣ-1 ರ ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಒ) ಸೂಚನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಇದೇ ರೀತಿಯ ಆರೋಪದ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಗೆ ನೀಡಿದ ನಾಲ್ಕನೇ ನೋಟಿಸ್ ಇದಾಗಿದೆ.
ಶಾಲಾ ಆಡಳಿತ ಮಂಡಳಿಯು 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆಗಳ ಘೋಷಣೆ ಮಾಡಿ ವಿದ್ಯಾರ್ಥಿಗಳಿಗೆ ರಾಜ್ಯ ಮಂಡಳಿಯ ಪ್ರಕಾರ ಪಠ್ಯಕ್ರಮವನ್ನು ಕಲಿಯಲು ನಿರ್ದೇಶಿಸಿ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, 9 ಮತ್ತು 10 ನೇ ತರಗತಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ದಾಖಲೆಗಳ ಪ್ರಕಾರ ಶಾಲೆಗೆ ಅನುಮತಿ ಇಲ್ಲ. ಆದರೆ ವಿದ್ಯಾರ್ಥಿಗಳನ್ನು ನೋಂದಾಯಿಸಿ ಕೆಂಗೇರಿಯ ಮತ್ತೊಂದು ಶಾಖೆಗೆ ಕಳುಹಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಒಟ್ಟಾರೆ ಸಿಬಿಎಸ್‌ಇ ಶಾಲೆ ಎಂದು ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸಿದ ಪೋಷಕರು, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ