ಬೆಂಗಳೂರು: ಶಾಲಾ ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಇಡೀ ದಿನ ಬಿಸಿಲಿನಲ್ಲಿ ಶಾಲಾ ಸಿಬ್ಬಂದಿ ನಿಲ್ಲಿಸಿದ್ದು, ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ.
ನಗರದಲ್ಲಿನ ಕಮಲಾ ನಗರದ ಅಮರವಾಣಿ ಶಾಲೆಯಲ್ಲಿಯೇ ಈ ಘಟನೆ ನಡೆದಿದ್ದು, ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಶಾಲೆಯ 10 ಸಾವಿರ ಶುಲ್ಕವನ್ನು ಬಾಕಿ ಇಟ್ಟುಕೊಂಡಿದ್ದಾರೆಂದು ಆಡಳಿತ ಮಂಡಳಿ, ಹಲವು ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರಗೆ ಹಾಕಿ ಇಡೀ ದಿನ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಜ್ವರ, ತಲೆನೋವು ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ಕೊರೊನಾದಿಂದಾಗಿ ಸರಿಯಾಗಿ ಕೆಲಸ ಇಲ್ಲದ ಕಾರಣ ಈ ವರ್ಷ ಫೀಸ್ ಕಟ್ಟುವಲ್ಲಿ ವಿಳಂಬವಾಗಿತ್ತು. ಕಳೆದ ವರ್ಷ ಸಂಪೂರ್ಣವಾಗಿಯೇ ಫೀಸ್ ಕಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟುತ್ತೇವೆ ಎಂದರೂ ವಿದ್ಯಾರ್ಥಿಗಳೊಂದಿಗೆ ಶಾಲಾ ಆಡಳಿತ ಮಂಡಳಿ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನಂತರ ಪಾಲಕರನ್ನು ಶಾಲೆಯ ಕೆಲವು ಸಿಬ್ಬಂದಿ ಸಮಾಧಾನ ಪಡಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೂರ್ಣ ಶುಲ್ಕ ಕಟ್ಟುವಂತೆ ಒತ್ತಡ ಹೇರುವಂತಿಲ್ಲ : ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶೇ. 15ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ, ಶೇ. 85ರಷ್ಟು ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ ಪಡೆದಿದ್ದರೆ ವಾಪಸ್ ನೀಡಬೇಕು, ಇನ್ನುಳಿದ ಯಾವುದೇ ಶುಲ್ಕ ಪಡೆಯಬಾರದೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಂದೊಮ್ಮೆ ಪೂರ್ಣ ಶುಲ್ಕ ಪಡೆದಿದ್ದರೆ ಪೋಷಕರಿಗೆ ಹಿಂದಿರುಗಿಸಬೇಕು. ಇಲ್ಲದಿದ್ದರೆ, 2021-22 ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಬೋಧನಾ ಶುಲ್ಕ ಹೊರತುಪಡಿಸಿ ಬೇರಾವುದೇ ಶುಲ್ಕ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಶುಲ್ಕ, ಐಚ್ಛಿಕ ಶುಲ್ಕ, ಟ್ರಸ್ಟ್ ಹಾಗೂ ಸೊಸೈಟಿಗಳಿಗೆ ಯಾವುದೇ ವಂತಿಗೆ ಸ್ವೀಕರಿಸದಂತೆ ಸರ್ಕಾರ ನಿರ್ಬಂಧ ವಿಧಿಸಿದೆ. ಒಂದೊಮ್ಮೆ, ಶೇ.15 ಕ್ಕಿಂತಲೂ ಹೆಚ್ಚು ಶುಲ್ಕ ಕಡಿತಗೊಳಿಸಲು ಆಡಳಿತ ಮಂಡಳಿಗಳು ಇಚ್ಛಿಸಿದರೆ ನೀಡಬಹುದು ಎಂದು ತಿಳಿಸಲಾಗಿದೆ.
ಆದರೆ ಇದು ಕಡತದಲ್ಲಿ ಮಾತ್ರ ಇದೆ. ಬಹುತೇಕ ಖಾಸಗಿ ಶಾಲೆಗಳು ಇದನ್ನು ಜಾರಿ ಮಾಡುತ್ತಿಲ್ಲ. ಪೋಷಕರು ಪ್ರಶ್ನಿಸಿದರೆ ಟಿಸಿ ತೆಗೆದುಕೊಂಡು ಹೋಗಿ ಎಂದು ಹೇದರಿಸುತ್ತಾರೆ. ಪ್ರತಿಭಟನೆ ಮಾಡಿದ್ರೆ ಮಕ್ಕಳಿಗೆ ಸಮಸ್ಯೆ ಮಾಡ್ತಾರೆ ಅಂತಾ ಸುಮ್ನೆ ಆಗಿದ್ದೇವೆ. ಖಾಸಗಿ ಶಾಲೆಗಳ ಟಾರ್ಚರ್ ತಡೆಯೋಕೆ ಆಗ್ತಿಲ್ಲ ಎಂದು ಖಾಸಗಿ ಶಾಲಾಯ ಪೋಷಕಿ ಭಾರತಿ ಜನಶಕ್ತಿ ಮೀಡಿಯಾ ಜೊತೆ ಅಳಲು ತೋಡಿಕೊಂಡಿದ್ದಾರೆ.