ಬೆಂಗಳೂರು : ಕರ್ನಾಟಕ ರಾಜ್ಯದ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳು ಎಂಬ ಕೀರ್ತಿಗೆ ಪಾತ್ರರಾದ ತಮಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ರಾಜ್ಯದ ಜನತೆಗೆ ತಮ್ಮ ಸೇವೆ ಇನ್ನೂ ಅನೇಕ ವರ್ಷಗಳ ಕಾಲ ಸೇವೆ ಲಭಿಸಬೇಕೆಂಬುದು ನಮ್ಮೆಲ್ಲರ ಹಾರೈಕೆ. ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಮೂಲ ವಾರಸುದಾರರಾದ ನಾವು ತಮಗೆ ಈ ಪತ್ರ ಬರೆಯುತ್ತಿರುವ ಉದ್ದೇಶವೆಂದರೆ, ಕರ್ನಾಟಕದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ಬಿಕ್ಕಟ್ಟುಗಳು ಮತ್ತು ನಮ್ಮ ಗಂಭೀರ ಆತಂಕಗಳನ್ನು ತಮ್ಮ ಗಮನಕ್ಕೆ ತರುವುದರ ಜೊತೆಗೆ, ಈ ವಿಷಯದಲ್ಲಿ ತಾವು ಮಧ್ಯಪ್ರವೇಶಿಸಬೇಕೇಂದು ವಿನಂತಿಸಿಕೊಳ್ಳಲು ಈ ಪತ್ರವನ್ನು ಬರೆಯುತ್ತಿದ್ದೇವೆ ಶಿಕ್ಷಣತ್ಙ ಪ್ರೊ.ನಿರಂಜನಾರಾಧ್ಯ ವಿ.ಪಿ ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ( ಪ್ಯಾರ 7) ಮತ್ತು ಕೇಂದ್ರದ ನೀತಿ ಆಯೋಗದ ಶಿಫಾರಸುಗಳನ್ನು ಆಧರಿಸಿ ರಾಜ್ಯದಾದ್ಯಂತ ಶಾಲೆಗಳ ವಿಲೀನಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ ಯೋಜನೆ ರೂಪಿಸುತ್ತಿರುವುದು ತಮಗೂ ತಿಳಿದಿದೆಯೆಂದು ಭಾವಿಸುತ್ತೇವೆ. ರಾಜ್ಯದಾದ್ಯಂತ ಶಾಲೆಗಳ ಮುಚ್ಚುವ/ವಿಲೀನ ಮಾಡುವ ಯೋಜನೆ ಶಿಕ್ಷಣ ಇಲಾಖೆಯಲ್ಲಿ ತೀವ್ರಗತಿಯಲ್ಲಿ ಚರ್ಚೆಯಲ್ಲಿದ್ದು ಅನೇಕ ಆದೇಶಗಳನ್ನು ಹೊರಡಿಸಲಾಗಿದೆ . ನೀತಿ ಆಯೋಗದ ಶಿಫಾರಸ್ಸಿನಂತೆ ಕೆಲವು ರಾಜ್ಯಗಳಲ್ಲಿ ಈ ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು ಸಾವಿರಾರು ಶಾಲೆಗಳನ್ನು ಮುಚ್ಚಲಾಗಿದೆ. ಈ ವಿಲೀನ ಪ್ರಕ್ರಿಯೆಯು , ಮಕ್ಕಳು , ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳು ದೂರದಲ್ಲಿನ ಶಾಲೆಗೆ ನಡೆದುಕೊಂಡು ಹೋಗಲು ಸಾಧ್ಯವಾಗದ ಶಾಲೆ ಬಿಡುವ ಸಾಧ್ಯತೆ ಹೆಚ್ಚಾಗುತ್ತದೆ. ಜೊತೆಗೆ ಹಳ್ಳಿಗಳಲ್ಲಿನ ಶಾಲೆಗಳನ್ನು ಮುಚ್ಚುವುದರಿಂದ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಮುಚ್ಚಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ ಯುಪಿಎ ಸರ್ಕಾರದ ಎರಡನೇ ಅಔಧಿಯಲ್ಲಿ ಜಾರಿಯಾದ ಮಹತ್ವದ ಶಿಕ್ಷಣ ಹಕ್ಕು ಕಾಯಿದೆ 2009 , ಪ್ರತಿ ವಾಸಸ್ಥಳದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಶಾಲೆ ಕೊಡಮಾಡುವ ಮೂಲಕ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ಎತ್ತಿ ಹಿಡಿದಿದೆ. ಕಾಯಿದೆಯ ಈ ಆಶಯವು, ಸಮಾಜದಲ್ಲಿನ ಕೆಳಸ್ಥರದ ಅವಕಾಶ ವಂಚಿತ ಮತ್ತು ಮೂಲೆಗುಂಪಾದ ವರ್ಗಗಳ ಮಕ್ಕಳಿಗೆ ಸ್ವತಂತ್ರವಾಗಿ ಶಾಲೆಗೆ ನಡೆದುಕೊಂಡು ಹೋಗುವ ಅವಕಾಶ ಕಲ್ಪಿಸುವುದಾಗಿದೆ. ಅವರ ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸ್ಥಿತಿಯಲ್ಲಿರದ ಕಾರಣ, ಈ ವ್ಯವಸ್ಥೆ ಮಕ್ಕಳ ಶಿಕ್ಷಣದ ಹಕ್ಕು ಆಧಾರಿತ ನೀತಿಯ ದೃಷ್ಟಿಯಿಂದ ಅತ್ಯಗತ್ಯ ವ್ಯವಸ್ಥೆಯಾಗಿದೆ . ಅಸಮರ್ಪಕ ಸಾರಿಗೆ ವ್ಯವಸ್ಥೆ ಹಾಗೂ ಪೋಷಕರ ವಿಶ್ವಾಸದ ಕೊರತೆಯ ಪರಿಸ್ಥಿತಿಯಲ್ಲಿ, ಶಾಲಾ ವಿಲೀನವು ದೊಡ್ಡ ಪ್ರಮಾಣದಲ್ಲಿ ಮಕ್ಕಳನ್ನು ಶಾಲಾ ಶಿಕ್ಷಣದಿಂದ ಹೊರಗುಳಿಯವಂತೆ ಮಾಡುವುದಂತೂ ನಿಶ್ಚಿತ. ಇಂತಹ ಹೊರಗುಳಿಯುವಿಕೆಯು ಅವಕಾಶ ವಂಚಿತ ಮತ್ತು ಮೂಲೆಗುಂಪಾದ ಸಮುದಾಯಗಳಲ್ಲೇ ಹೆಚ್ಚಾಗಿ ಕಂಡುಬರುತ್ತಿರುವುದು ಹಲವು ಅಧ್ಯಯನಗಳಿಂದ ಧೃಡಪಟ್ಟಿದೆ ಎಂದು ಹೆಳಿದರು.
ಇದನ್ನೂ ಓದಿ : “ಆಧುನಿಕ” ಸರಕುಗಳನ್ನು ಬಳಸುತ್ತಾರೆಂದರೆ ಬಡತನ ಇಲ್ಲವೆಂದು ಅರ್ಥವಲ್ಲ
ಇದು ಕರ್ನಾಟಕದಲ್ಲಿ ಅವಕಾಶ ವಂಚಿತ ಸಮುದಾಯಗಳ ಅದರಲ್ಲೂ ವಿಶೇಷವಾಗಿ ತಮ್ಮ ನಾಯಕತ್ವದಲ್ಲಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಾಗುತ್ತಿರುವ ಪ್ರಯತ್ನಗಳಿಗೆ ಬಹು ದೊಡ್ಡ ಹಿನ್ನಡೆಯಾಗುತ್ತದೆ.
ಅತೀ ಚಿಕ್ಕ ಶಾಲೆಗಳು ಕಾರ್ಯಸಾಧ್ಯವಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಶಿಕ್ಷಣದಲ್ಲಿ ಯಾವ ಹಂತದವರೆಗಿನ ವ್ಯವಸ್ಥೆ ಕಡ್ಡಾಯವಾಗಿ ಹಳ್ಳಿಗಳಲ್ಲಿರಬೇಕು ಮತ್ತು ಮುಂದಿನ ಯಾವ ಹಂತಕ್ಕೆ ಮಕ್ಕಳು ಪಂಚಾಯತಿ ಅಥವಾ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕು ಎಂಬ ಬಗ್ಗೆ ಸ್ಪಷ್ಟ ನೀತಿ ರೂಪಿಸುವ ಅಗತ್ಯವಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು , ಈ ನಿಟ್ಟಿನಲ್ಲಿ ಸ್ಪಷ್ಟವಾದ ಶಿಫಾರಸ್ಸುಗಳನ್ನು ಮಾಡಿದೆ ಎಂಬ ಬಗ್ಗೆ ಮಾಹಿತೆ ಇದೆ. ಆದ್ಧರಿಂದ , ಈ ಬಗೆಯ ನಿರ್ಧಾರಗಳನ್ನು ಶಕ್ತಿಕೇಂದ್ರ ಬೆಂಗಳೂರಿನಲ್ಲಿರುವ ಕೆಲವೇ ಅಧಿಕಾರಿಗಳು ಏಕಪಕ್ಷೀಯವಾಗಿ ಕೈಗೊಳ್ಳಬಾರದು ಎಂಬುದು ನಮ್ಮ ದೃಢವಾದ ಅಭಿಪ್ರಾಯ.ಕಾರಣ, ಈ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿಲ್ಲವಾದ್ಧರಿಂದ , ಅವರಿಗೆ ಶಾಲೆಯ ಲಭ್ಯತೆಯ ಬಗ್ಗೆ ಮತ್ತು ಆಗುಹೋಗುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ . ನಿಜ ಹೇಳಬೇಕೆಂದರೆ, 2015ರಲ್ಲಿ ಅಲಹಬಾದಿನ ಉಚ್ಛ ನ್ಯಾಯಾಲಯವು ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿತ್ತು. ಇಂಥಹ ವಿಷಯಗಳನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಮತ್ತು ಸಮುದಾಯದೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕ /ಪೋಷಕರು ಹಾಗೂ ಸಮುದಾಯದ ಅಧಿಕೃತ ಮತ್ತು ಕಾನೂನುಬದ್ಧ ಪ್ರಾತಿನಿಧಿ ಸಂಸ್ಥೆಯಾಗಿರುವುದರಿಂದ, ಶಿಕ್ಷಕರು ಹಾಗು ಸ್ಥಳೀಯ ಸರ್ಕಾರದ ಪ್ರತಿನಿಧಿಗಳು ಎಸ್ಡಿಎಂಸಿ ಮತ್ತು ಸಮುದಾಯದೊಂದಿಗೆ ಚರ್ಚಿಸಿ ಸ್ಥಳೀಯವಾಗಿ ಸೂಕ್ತ ಪರಿಹಾರವನ್ನು . ನಮ್ಮ ಅನುಭವದಲ್ಲಿ ಸ್ಥಳೀಯ ಸಮುದಾಯವೇ ಶಾಲೆಯ ಕಾರ್ಯಾನಿರ್ವಹಣೆ ಕುರಿತು ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ನೀಡುವ ಸಾಧ್ಯತೆ ಇದೆ ಎಂದರು
ಈ ಸಂದರ್ಭದಲ್ಲಿ ಒಂದು ಮುಖ್ಯ ಅಂಶವನ್ನು ತಮ್ಮ ಗಮನಕ್ಕೆ ತರಲೇಬೇಕಿದೆ. ಕೇಂದ್ರದಲ್ಲಿದ್ದ ತಮ್ಮದೇ ಸರ್ಕಾರ 2009 ರಲ್ಲಿ ರೂಪಿಸಿ ಜಾರಿಗೊಳಿಸದ ಶಿಕ್ಷಣ ಹಕ್ಕು ಕಾಯಿದೆಯನ್ನು ಅಕ್ಷರಶಃ ಮತ್ತು ಆಶಯದಂತೆ (Letter and Spirit) ಜಾರಿಗೊಳಿಸಿದ್ದರೆ, ಸರ್ಕಾರಿ ಶಾಲೆಗಳ ಸ್ಥಿತಿ ಈ ರೀತಿಯಾಗುತ್ತಿರಲಿಲ್ಲ. ಬದಲಿಗೆ ಸರ್ಕಾರಿ ಶಾಲೆಗಳು ಅತ್ಯಂತ ಬಲಿಷ್ಠ ಸಾರ್ವಜನಿಕ ಶಾಲೆಗಳಾಗಿ ಹೊರಹೊಮ್ಮಿ , ಖಾಸಗಿ ಶಾಲೆಗಳ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರುವ ಮೂಲಕ ಖಾಸಗಿ ಶಾಲೆಗಳು ಪರೋಕ್ಷವಾಗಿ ಸರ್ಕಾರಿ ಶಾಲೆಗಳಲ್ಲಿ ವಿಲೀನ ವಾಗುತ್ತಿದ್ದವು ಇಲ್ಲವೇ ಮುಚ್ಚುತ್ತಿದ್ದವು. ಇದು 1964-66ರ ಶಿಕ್ಷಣ ಆಯೋಗದ ಆಶಯವೂ ಹೌದು. ಆದರೆ, ಇಂದು ಅದು ವ್ಯತಿರಿಕ್ತವಾಗುತ್ತಿದೆ.
ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಒಂದು ಪ್ರಮುಖ ಅಂಶವೆಂದರೆ, ಖಾಯಂ ಶಿಕ್ಷಕರ ನೇಮಕಾತಿ ಮಾಡುವುದು. ಕರ್ನಾಟಕವು ಹಿಂದಿನಿಂದಲೂ ಖಾಯಂ ಶಿಕ್ಷಕರ ನೇಮಕಾತಿಗೆ ಮಹತ್ವ ನೀಡಿದ ರಾಜ್ಯವಾಗಿದೆ. ಉತ್ತರ ಭಾರತದ ಕೆಲವು ರಾಜ್ಯಗಳು ಖಾಯಂ ಶಿಕ್ಷಕರ ನೇಮಕವಿಲ್ಲದ ಕಾರಣ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿವೆ. ದುರಾದೃಷ್ಟವೆಂದರೆ , ಕರ್ನಾಟಕದಲ್ಲಿಯೂ ಅತಿಥಿ ಶಿಕ್ಷಕರ ನೇಮಕಾತಿ ವ್ಯವಸ್ಥೆ ಆರಂಭಗೊಂಡಿದ್ದು, ಪ್ರಸ್ತುತ ನಾಲ್ವರಲ್ಲಿ ಒಬ್ಬ ಶಿಕ್ಷಕರು ಅತಿಥಿ ಶಿಕ್ಷಕರಾಗಿದ್ದಾರೆ. ಕರ್ನಾಟಕದಲ್ಲಿ ಸುಮಾರು 62500 ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರು ಯಾವುದೇ ಸೇವಾಭದ್ರತೆ ಇಲ್ಲದೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಶಿಕ್ಷಕರಿಗಿಂತ ಐದಾರು ಪಟ್ಟು ಕಡಿಮೆ ವೇತನ ಪಡೆಯುತ್ತಾರೆ. ಇದು ಗುಣಮಟ್ಟದ ಶಿಕ್ಷಣದ ಮೇಲೆ ಕೆಟ್ಟ ಪ್ರಭಾವ ಬೀರುವುದಲ್ಲದೆ ದೊಡ್ಡ ಮಟ್ಟದ ಅಸಮಾನತೆ ಉಂಟಾಗುತ್ತದೆ. ನಿಜ , ಹೇಳ ಬೇಕೆಂದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಲಕ್ಷಾಂತರ ಮಕ್ಕಳು ಕನ್ನಡದಲ್ಲಿ ಅನುತ್ತೀರ್ಣರಾಗುವ ಸ್ಥಿತಿಗೆ ನಾವು ತಲುಪಿದ್ದೇವೆ. ಸೇವಾ ಭದ್ರತೆ ಇಲ್ಲದ ಕಾರಣ ಶಾಲೆಯೊಂದಿಗೆ ದೀರ್ಘಕಾಲಿಕ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ಅವರ ಅಸ್ಥಿರತೆ ಅವರ ಬೋಧನಾ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ. ಅತಿಥಿ ಶಿಕ್ಷಕರ ಪರಿಕಲ್ಪನೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಗೆ ಒಂದು ಕಳಂಕವಾಗಿದೆ ಎಂದು ಹೇಳಬೇಕಾದ ಸ್ಥಿತಿ ಇದೆ. ಐಎಎಸ್ ಅಧಿಕಾರಿಗಳ ನೇಮಕಾತಿಯು ಪ್ರತಿವರ್ಷ ತಪ್ಪದೇ ನಡೆಯುವಂತೆ, ಶಿಕ್ಷಕರ ನೇಮಕಾತಿಯೂ ಪ್ರತಿವರ್ಷ ನಡೆಯಬೇಕಿದೆ. ಇದು ಸಾಧ್ಯವಿದ್ದು ನಾಗರಿಕ ಸಮಾಜದ ಮೂಲಭೂತ ಅವಶ್ಯಕತೆಯೂ ಆಗಿದೆ.
ಶಾಲಾ ಶಿಕ್ಷಣದಲ್ಲಿ ಶಿಕ್ಷಣ ತಂತ್ರಜ್ಞಾನವನ್ನು (EdTech) ರಾಜ್ಯದಾದ್ಯಂತ ಅತೀವ ಅಜಾಗರೂಕತೆ ಹಾಗೂ ಅಸ್ಪಷ್ಟ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿರುವುದು ನಮ್ಮ ಮತ್ತೊಂದು ಗಂಭೀರ ಚಿಂತೆಯಾಗಿದೆ. ದೊಡ್ಡ ದೊಡ್ಡ ಕಾರ್ಪೊರೇಟ್ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಪಾರದರ್ಶಕತೆ ಇಲ್ಲದೆ ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ತಜ್ಞರು ಮತ್ತು ಶಿಕ್ಷಕರನ್ನು ಕೂಡ ಈ ಪ್ರಕ್ರಿಯೆಗಳಿಂದ ಸಂಪೂರ್ಣವಾಗಿ ಹೊರಗಿಟ್ಟಿದ್ದಾರೆ. ಶಿಕ್ಷಣಕ್ಕೆ ತಂತ್ರಜ್ಞಾನದಿಂದ ಎಂದಿಗೂ ಲಾಭವೇ ಆಗುತ್ತವೆ ಎಂಬ ಭ್ರಮೆ ಇದೆ. ಆದರೆ, ಮೊಬೈಲ್ ಫೋನ್‌ಗಳ ಹಾನಿಕಾರಕ ಪರಿಣಾಮಗಳ ಕುರಿತು ನೀವು ಹಿಂದೊಮ್ಮೆ ವ್ಯಕ್ತಪಡಿಸಿದ ಅಭಿಪ್ರಾಯದಂತೆ, ವಿಶೇಷವಾಗಿ ಸಾಮಾಜಿಕ ಮಾಧ್ಯಮ ಆಧಾರಿತ ತಂತ್ರಜ್ಞಾನಗಳು ಮಕ್ಕಳ ಮೇಲೆ ಗಂಭೀರ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆ ಹೊಂದಿವೆ. ಇವು ಬೋಧನೆ–ಕಲಿಕಾ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರವನ್ನು ಕುಗ್ಗಿಸುತ್ತವೆ. ಮಕ್ಕಳಲ್ಲಿ ಒಂದು ಬಗೆಯ ಚಟ ಪ್ರಾರಂಭವಾಗಿ ಕಲಿಕೆಯಿಂದ ದೂರ ಸರಿಯುತ್ತಾರೆ.
ಕರ್ನಾಟಕದಲ್ಲಿ ಜಾರಿಗೊಂಡ ಕೆಲವು ಯೋಜನೆಗಳಲ್ಲಿ, ಶಿಕ್ಷಕರ ಪಾತ್ರ ಕೇವಲ ಮಕ್ಕಳನ್ನು ತಂತ್ರಜ್ಞಾನ ಬಳಕೆ ಮಾಡಲು ದೂಡಿ ಅವರನ್ನು ಮೇಲ್ವಿಚಾರಣೆ ಮಾಡುವ “ಕಾವಲುಗಾರ”ರ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ. ಬೋಧನೆಯ ಕಾರ್ಯವನ್ನು ತಂತ್ರಜ್ಞಾನವೇ ನಿರ್ವಹಿಸುತ್ತಿದೆ. ಆದರೆ ತಂತ್ರಜ್ಞಾನವು ಶಿಕ್ಷಕರಂತೆ ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಿಲ್ಲ. ಇದರಿಂದ ಬೋಧನೆಯ ಗುಣಮಟ್ಟ ಕುಸಿಯುತ್ತದೆ. “ಶ್ರೀಮಂತರ ಮಕ್ಕಳಿಗೆ ಶಿಕ್ಷಕರು, ಬಡ ಮಕ್ಕಳಿಗೆ ತಂತ್ರಜ್ಞಾನ” ಎಂಬ ಮಾತಿದೆ, ತಂತ್ರಜ್ಞಾನ ಅಸಮಾನತೆಗೆ ಕಾರಣವಾಗುತ್ತಿದೆ. ಇದು ಅತ್ಯಂತ ದುಃಖಕರ ಸಂಗತಿ. ಎಲ್ಲಕ್ಕಿಂತ ಮಿಗಿಲಾಗಿ , ಶಿಕ್ಷಣದ ಮೂಲ ಉದ್ದೇಶ ಸಾಮಾಜೀಕರಣ . ಅದು ಮಕ್ಕಳ ಮತ್ತು ಶಿಕ್ಷಕರ ನಡುವಿನ ನಿರಂತರ ಒಡನಾಟದ ಮೂಲಕ ಮಾತ್ರ ಸಾಧ್ಯ. ತಂತ್ರಜ್ಞಾನ ಪೂರಕವೇ ಹೊರತು ಪರ್ಯಾಯವಲ್ಲ. ಇದರ ಜೊತೆಗೆ, ಶಿಕ್ಷಕರು ಪ್ರತಿದಿನವೂ ಅನೇಕ ಅಪ್ಲಿಕೇಶನ್‌ಗಳಲ್ಲಿ ಡೇಟಾ ನಮೂದಿಸಬೇಕಾದ ವ್ಯವಸ್ಥೆ ಜಾರಿಯಲ್ಲಿದೆ. ಇವು ಬೋಧನಾ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಇತ್ತೀಚೆಗೆ ಪರಿಚಯಿಸಲಾದ ಪಾಠಾಧಾರಿತ ಮೌಲ್ಯಮಾಪನ (Lesson-Based Assessment – LBA) ಇದಕ್ಕೆ ಸ್ಪಷ್ಟ ಉದಾಹರಣೆ. ಇದು ಬೋಧನಾ ಸಮಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಶಿಕ್ಷಕರು ಬೋಧನೆಗಿಂತ ಪರೀಕ್ಷೆಗೆ ಮಾತ್ರ ಕಲಿಸುವ ಸ್ಥಿತಿ ಉಂಟಾಗುತ್ತದೆ. ಕೇಂದ್ರಿಕೃತ ಮೌಲ್ಯಮಾಪನವು ಶಿಕ್ಷಣಕ್ಕೆ ಹಾನಿಕಾರಕ ಎಂಬುದು ಸಾಬೀತಾಗಿರುವ ವಿಚಾರವಾಗಿದೆ. LBA ಮೂಲಕ ಈ ರೀತಿಯ ಮೌಲ್ಯಮಾಪನ ಜಾರಿಗೊಳ್ಳುತ್ತಿರುವುದು ಕರ್ನಾಟಕದ ಮಕ್ಕಳಿಗೂ ಶಿಕ್ಷಕರಿಗೂ ದೊಡ್ಡ ಹಿನ್ನಡೆಯಾಗಿದೆ.
ಅದೇ ರೀತಿ, ಹಾಜರಾತಿಗಾಗಿ ಮುಖ ಗುರುತಿಸುವ ತಂತ್ರಾಂಶ (Facial Recognition Software – FRS) ಬಳಕೆ ಅತೀ ಅಪಾಯಕಾರಿಯಾಗಿದೆ. ಕೇವಲ ಹಾಜರಾತಿಗಾಗಿ ಮಕ್ಕಳ ಚಿತ್ರಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸುವುದು ಭದ್ರತಾ ಅಪಾಯವನ್ನು ಉಂಟುಮಾಡುತ್ತದೆ. ಡೇಟಾ ಸೋರಿಕೆಯಾದರೆ, ಅದು ಅನೇಕ ಕೈಗಳಿಗೆ ತಲುಪಿ ದುರುಪಯೋಗವಾಗುವ ಸಾಧ್ಯತೆ ಇದ್ದು, ಕೊನೆಗೆ ಮಕ್ಕಳ ಕಳ್ಳಸಾಗಣೆದಾರರ ಕೈಗೂ ಬೀಳುವ ಸಾಧ್ಯತೆ ಇದೆ. ಈಗಾಗಲೇ ಮೂಲೆಗುಂಪಾದ ಸಮುದಾಯಗಳ ಮಕ್ಕಳು ಅತೀವ ಅಸುರಕ್ಷಿತರಾಗಿದ್ದು, ಇದು ಇನ್ನಷ್ಟು ಅಪಾಯವನ್ನುಂಟು ಮಾಡುತ್ತದೆ. ಮಕ್ಕಳು ಎಲ್ಲಾ ಬಗೆಯ ಶೋಷಣೆ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಶಾಲಾ ಹಾಜರಾತಿಯಂತಹ ಸರಳ ಕಾರ್ಯಕ್ಕೆ FRS ನಂತಹ ಸಂಕೀರ್ಣ ವ್ಯವಸ್ಥೆಯ ಅವಶ್ಯಕತೆಯೇ ಇಲ್ಲ. ಮಕ್ಕಳು, ಪಾಲಕರು ಹಾಗು ಶಿಕ್ಷಕರ ಮೇಲಿನ ನಂಬಿಕೆಯೇ ಸಾಕು. ಇದು ಮೂಲ ನಂಬಿಕೆಯನ್ನೇ ಸಂಶಯ ಪಡುವ ವ್ಯವಸ್ಥೆಯಾಗಿದೆ . ಇತರ EdTech ಯೋಜನೆಗಳಂತೆ, FRS ಕುರಿತು ಯಾವುದೇ ವೆಚ್ಚ–ಲಾಭ ವಿಶ್ಲೇಷಣೆಯೂ ಸಾರ್ವಜನಿಕವಾಗಿ ಲಭ್ಯವಿಲ್ಲ.
LBA ಮತ್ತು FRS ಗಳಂತೆ, ಶಿಕ್ಷಣ ಇಲಾಖೆಯಲ್ಲಿ ನಿರ್ಧಾರ ಪ್ರಕ್ರಿಯೆ ಅತಿಯಾದ ಕೇಂದ್ರಿಕರಣಗೊಳ್ಳುತ್ತಿರುವುದು ಗಂಭೀರ ಚಿಂತೆಯ ವಿಷಯವಾಗಿದೆ. ರಾಜ್ಯದಾದ್ಯಂತ ಸುಮಾರು 2 ಲಕ್ಷ ಶಿಕ್ಷಕರು ಮತ್ತು 60,000ಕ್ಕೂ ಹೆಚ್ಚು ಸಂಸ್ಥೆಗಳಿರುವಂತಹ ದೊಡ್ಡ ವ್ಯವಸ್ಥೆಯಲ್ಲಿ, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕೃತ ಹಾಗೂ ಪಾರದರ್ಶಕ ಯೋಜನೆ ಜಾರಿಯಾಗದಿದ್ದರೆ ಶಿಕ್ಷಣದ ಗುಣಮಟ್ಟ ಖಂಡಿತವಾಗಿ ಕುಸಿಯುತ್ತದೆ. ಶಿಕ್ಷಣದ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಬೇಕು. ಎಲ್ಲರಿಗೂ ಒಂದೇ ಮಾದರಿ ಅನ್ವಯಿಸುವುದು ಸಾಧ್ಯವಿಲ್ಲ. ಆದರೆ ಕೇಂದ್ರಿಕರಣವು ‘ಎಲ್ಲರಿಗೂ ಒಂದೇ ಮಾದರಿ’ ಯನ್ನು ಹೇರಿದೆ. ಇದು ವಿಕೇಂದ್ರಿಕರಣದ ತತ್ವ ಮತ್ತು ನೀತಿಯೊಂದಿಗೆ ಹೊಂದಿಕೆಯಾಗುತ್ತದೆ. ಈ ಕ್ಷೇತ್ರದಲ್ಲಿ ಕರ್ನಾಟಕವು ಒಂದು ಕಾಲದಲ್ಲಿ ವಿಶೇಷವಾಗಿ ಗುರುತಿಸಿಕೊಂಡ ರಾಜ್ಯವಾಗಿತ್ತು. ಈಗ ಅದು , ಕೇಂದ್ರದ ಮಾದರಿಯಲ್ಲಿ ಅತಿಯಾದ ಕೇಂದ್ರೀಕರಣದತ್ತ ಸಾಗುತ್ತಿದೆ. ಇಂದು ಕೇಂದ್ರೀಕರಣ ಮತ್ತು ಅಧಿಕಾರಶಾಹಿಕರಣ ಕರ್ನಾಟಕದ ಶಾಲಾ ಶಿಕ್ಷಣ ನೀತಿಗಳ ಕೇಂದ್ರ ಬಿಂದುವಾಗಿದೆ .
ಕೇಂದ್ರಿಕರಣವು ಶಿಕ್ಷಕರು, ಶಿಕ್ಷಕರ ತರಬೇತಿದಾರರು ಹಾಗೂ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳ ಪಾತ್ರವನ್ನು ಕುಗ್ಗಿಸುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಶಿಕ್ಷಣ ಸಂಸ್ಥೆಗಳು ದುರ್ಬಲಗೊಳ್ಳುತ್ತವೆ ಮತ್ತು ಸರ್ಕಾರಿ ಶಾಲಾ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗುತ್ತದೆ.
ನಾವು ಕರ್ನಾಟಕ ರಾಜ್ಯ ಶಿಕ್ಷಣ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇವೆ. ಈ ನೀತಿಯನ್ನು ಕೆಲವು ತಿಂಗಳುಗಳ ಹಿಂದೆ ಸಲ್ಲಿಸಲಾಗಿದ್ದರೂ, ಇನ್ನೂ ಸಚಿವ ಸಂಪುಟದಲ್ಲಿ ಮಂಡಿಸಲಾಗಿಲ್ಲ. ಕರ್ನಾಟಕದ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ಈ ನೀತಿಯನ್ನು ತಕ್ಷಣ ಜಾರಿಗೊಳಿಸುವಂತೆ ನಾವು ವಿನಂತಿಸುತ್ತೇವೆ. ಈ ನೀತಿ ಅಂಗೀಕಾರವಾಗದಿರುವುದರಿಂದ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಅನೇಕ ಕ್ರಮಗಳು ಈ ನೀತಿಯ ಆಶಯಗಳಿಗೆ ವಿರುದ್ಧವಾಗಿವೆ.
ಉದಾಹರಣೆಗೆ, ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತಿರಸ್ಕರಿಸಿದ್ದರೂ, PM SHRI, APAR, FRSಮುಂತಾದ NEP ಆಧಾರಿತ ಯೋಜನೆಗಳನ್ನು ಇನ್ನೂ ಜಾರಿಗೊಳಿಸಲಾಗುತ್ತಿದೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಇವುಗಳನ್ನು ಜಾರಿಗೊಳಿಸದೆ ಒಕ್ಕೂಟ ವ್ಯವಸ್ಥೆಯಲ್ಲಿ ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಂಡಿವೆ. ಸಹಕಾರಿ ಫೆಡರಲಿಸಂನ ಮೂಲ ತತ್ವಕ್ಕೆ ಧಕ್ಕೆ ಆಗುತ್ತಿರುವುದು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ತಕ್ಷಣ ಜಾರಿಗೊಳಿಸುವುದು ಅತ್ಯವಶ್ಯಕ.
ಮುಂದಿನ 2026-27 ರ ಆಯವ್ಯಯದಲ್ಲಿ ಹೆಚ್ಚಿನ ಹಣಕಾಸು ಮುಂದಿನ ತಿಂಗಳು ತಾವು ಬಜೆಟ್ ಮಂಡಿಸಲಿದ್ದೀರಿ . ತಾವು ಅತಿ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿಗೆ ಹೆಸರಾಗಿದ್ದೀರಿ. ಕರ್ನಾಟಕದ ಶಾಲಾ ಮತ್ತು ಉನ್ನತ ಶಿಕ್ಷಣಕ್ಕೆ ಇರುವ ಅನೇಕ ಸಮಸ್ಯೆಗಳ ಮೂಲ ಕಾರಣವೆಂದರೆ ತೃಪ್ತಿಕರವಲ್ಲದ ಅಸಮರ್ಪಕ ಹೂಡಿಕೆ. ತಮ್ಮ ಸರ್ಕಾರದ ಬಹುದೊಡ್ಡ ಯಶಸ್ಸೆಂದರೆ ಪಂಚ ಗ್ಯಾರಂಟಿಗಳು. ಆದರೆ , ನಾವು ಮೂಲಭೂತ ಅಗತ್ಯವಾದ ಶಿಕ್ಷಣದ ಹಕ್ಕನ್ನು ಮರೆಯುವಂತಿಲ್ಲ. ಒಂದು ರೀತಿಯಲ್ಲಿ ನಾವು RTE ಯನ್ನು ನಾವು ಮರೆತಿದ್ದೇವೆ. 2009ರಲ್ಲಿ ಸಂಸತ್ತು ಅಂಗೀಕರಿಸಿದ ಈ ಸಂವಿಧಾನಾತ್ಮಕ ಹಕ್ಕನ್ನು ಕರ್ನಾಟಕವೂ ಸ್ವೀಕರಿಸಿದೆ. ಆದರೆ ಕಳೆದ 16 ವರ್ಷಗಳಲ್ಲಿ ಇದನ್ನು ಸಮರ್ಪಕವಾಗಿ ಜಾರಿಗೊಳಿಸಲು ನಾವು ವಿಫಲರಾಗಿದ್ದೇವೆ. RTE ಸಾಧನೆಯ ಮೊದಲ ಹೆಜ್ಜೆ ಎಂದರೆ ಸಮರ್ಪಕ ಮತ್ತು ಉದಾರವಾದ ಬಜೆಟ್ ಹಂಚಿಕೆ. ಶಿಕ್ಷಣ ಹಕ್ಕು ಕಾಯಿದೆ ನಿಗದಿಗೊಳಿಸಿರುವ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದ ಸರ್ಕಾರದ ಆದ್ಯತೆಯಾಗಬೇಕು.
ಕೇಂದ್ರದಿಂದ ಹಣಕಾಸಿನ ಅನುದಾನ ಕಡಿಮೆಯಾಗಿರುವುದರಿಂದ, ಕರ್ನಾಟಕವು ತಮಿಳುನಾಡು ಮತ್ತು ಕೇರಳದಂತೆ ಸ್ವಂತ ಸಂಪನ್ಮೂಲಗಳನ್ನು ಸಂಗ್ರಹಿಸಬೇಕಿದೆ. ಕೇರಳವು ಹಲವು ವರ್ಷಗಳ ಕಾಲ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಪುನಶ್ಚೇತನ ಕಾರ್ಯಕ್ರಮ ಜಾರಿಗೊಳಿಸಿ, ಪ್ರತಿಯೊಂದು ಶಾಲೆಯೂ RTE ಮಾನದಂಡಗಳನ್ನು ಪೂರೈಸುವಂತೆ ಮಾಡಿದೆ. ಕರ್ನಾಟಕದಲ್ಲಿಯೂ ಇಂತಹ ಕಾರ್ಯಕ್ರಮದ ಅಗತ್ಯವಿದೆ. ಇದರಿಂದ ಸಮುದಾಯ ಮತ್ತು ಪೋಷಕರ ಸಹಕಾರ ಹೆಚ್ಚಾಗಿ ಶಾಲೆಗಳ ಗುಣಮಟ್ಟ ಸುಧಾರಿಸುತ್ತದೆ ಎಂಬ ನಂಬಿಕೆ ನಮಗಿದೆ.
ಪ್ರಾದೇಶಿಕ, ಜಿಲ್ಲಾ ಮತ್ತು ಬ್ಲಾಕ್ ಮಟ್ಟಗಳಲ್ಲಿ ವಿಕೇಂದ್ರೀಕೃತ ಹಾಗೂ ಸ್ವಾಯತ್ತ ಕಾರ್ಯನಿರ್ವಹಣೆ ಶಾಲೆಗಳ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಹಕಾರಿಯಾಗುತ್ತದೆ. ಪ್ರಾದೇಶಿಕ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ವಿಕೇಂದ್ರೀಕೃತ ಹಾಗೂ ಸ್ವಾಯತ್ತ ಕಾರ್ಯಾಚರಣೆ ಜಾರಿಯಾದರೆ, ಶಾಲೆಗಳ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಾಧ್ಯವಾಗುತ್ತದೆ. ಸಮರ್ಪಕ ಸಂಖ್ಯೆಯ ಉತ್ತಮ ಅರ್ಹತೆ ಮತ್ತು ತರಬೇತಿ ಪಡೆದ ಶಿಕ್ಷಕರು ಶಿಕ್ಷಣದ ಗುಣಮಟ್ಟವನ್ನು ಖಂಡಿತವಾಗಿ ಹೆಚ್ಚಿಸುತ್ತಾರೆ. ಆಗ ನಾವು ಬೋಧನೆಗಾಗಿ ಕಂಪ್ಯೂಟರ್‌ಗಳ ಮೇಲೆ ಅವಲಂಬಿತರಾಗಬೇಕಿಲ್ಲ.
ಆದ್ದರಿಂದ, ತಾವು ಈ ವರ್ಷ ಶಿಕ್ಷಣಕ್ಕೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಕನಿಷ್ಠ 10% ಹಂಚಿಕೆಯನ್ನು ಮೀಸಲಿಟ್ಟು, ಮುಂದಿನ ಐದು ವರ್ಷಗಳ ಕಾಲ RTE ಅನ್ನು ಸಂಪೂರ್ಣವಾಗಿ ಜಾರಿಗೊಳಿಸುವ ನೀಲಿ ನಕಾಶೆಯ ಯೋಜನೆಯನ್ನು ಘೋಷಿಸುವಂತೆ ನಾವು ವಿನಂತಿಸುತ್ತೇವೆ. ಇದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ದೇಶದಲ್ಲೇ ಅತ್ಯುತ್ತಮವಾಗುತ್ತದೆ.
ಈ ಎಲ್ಲ ವಿಷಯಗಳ ಬಗ್ಗೆ ನಿಮ್ಮೊಂದಿಗೆ ನೇರವಾಗಿ ಚರ್ಚಿಸಲು ಒಂದು ದಿನ ಅವಕಾಶ ನೀಡುವಂತೆ ವಿನಂತಿಸಿಕೊಂಡರು.
ಪತ್ರಿಕಾ ಹೆಳಿಕೆಯಲ್ಲಿ ಪ್ರೊ.ನಿರಂಜನಾರಾಧ್ಯ ವಿ.ಪಿ , ಸಂಚಾಲಕರು, ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (PAFRE) ಪ್ರೊ. ಬಾಬು ಮಾಥ್ಯು, ಅಧ್ಯಕ್ಷರು, ಎಐಟಿಯುಸಿ (AITUC) ಶ್ರೀ ಬಸವರಾಜ ಗುರಿಕಾರ, ರಾಷ್ಟ್ರೀಯ ಅಧ್ಯಕ್ಷರು, ಎಐಪಿಟಿಎಫ್ (AIPTF) ಎಂ.ಜಯಮ್ಮ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟ ಗುರುಮೂರ್ತಿ ಕಾಶಿನಾಥನ್, ಕ್ರಿಟಿಕಲ್ ಎಡ್‌ಟೆಕ್ ಇಂಡಿಯಾ ಉಮೇಶ್ ದೊಡ್ಡಗಂಗವಾಡಿ, ಅಧ್ಯಕ್ಷರು, ಎಸ್‌ಡಿಎಮ್‌ಸಿಸಿಎಫ್ (SDMCCಸ್ದಮ್ ಎಫ್ . ಸಿ .ಚೇಗಾ ರೆಡ್ಡಿ ಹಾಗೂ ಶುಭಂಕರ್ ಚಕ್ರವರ್ತಿ , ಬಿಜಿವಿಎಸ್ (BGVS) ಲೋಕೇಶ್ ತಾಳಿಕಟ್ಟೆ, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ಸಂಘ ಬಿ.ಎನ್. ಯೋಗಾನಂದ, ರಾಜ್ಯ ಪಾಲಕ -ಪೋಷಕರ ಸಂಘ ಕುಮಾರಿ ವೀಣ ಎಲ್. ವೈ . , ರಾಜ್ಯಾಧ್ಯಕ್ಷರು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (AISF) ಲೇಖ ಅಡವಿ , ರಾಜ್ಯ ಸಂಚಾಲಕರು , ಅಖಿಲ ಭಾರತ ವಿದ್ಯಾರ್ಥಿ ಸಂಘ (AISA) ಮೊಹಮ್ಮದ್ ಹಯ್ಯಾನ್, ರಾಜ್ಯ ಕಾರ್ಯದರ್ಶಿ, SIO ಕರ್ನಾಟಕ ಕುಮಾರ್ ಶೃಂಗೇರಿ, ಸಂಶೋಧಕರು,ಮಗು ಮತ್ತು ಕಾನೂನು ಕೇಂದ್ರ, ಸಿಸಿಎಲ್-ಎನ್ ಎಲ್‌ಎಸ್‌ಐಯು ಜಿ. ರವಿ, ಫೋರ್ತ್ವೇವ್ ಫೌಂಡೇಶನ್, ವಿಶೇಷ ಅಗತ್ಯವುಳ್ಳ ಮಕ್ಕಳ ರಾಜ್ಯ ಸಂಘಟನೆ ಗಂಗಾಧರ್, ಸಮ-ಸಮಾಜದ ಗೆಳೆಯರ ಬಳಗ ಬೆಂಗಳೂರು ಇದ್ದರು.
ಇದನ್ನೂ ನೋಡಿ : ಇದು ಒಂದು ದಿನದ ಮುಷ್ಕರವಲ್ಲ – ಕಾರ್ಪೊರೇಟ್‌ಪರ ಆಡಳಿತಕ್ಕೆ ಜನರ ಎಚ್ಚರಿಕೆ! Janashakthi Media
