ಕಾರಟಗಿ: ಪರಿಶಿಷ್ಟ ಜಾತಿಯ ಅಂಗನವಾಡಿ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿನೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಕಾರಟಗಿ ಪಟ್ಟಣದ ವಾರ್ಡ್ ನಂಬರ್ 14 ರಾಮನಗರದಲ್ಲಿ ನಡೆದಿದೆ. ರಾಮನಗರದ 37ನೇ ಅಂಗನವಾಡಿ ಕೇಂದ್ರವ ಕಾರ್ಯಕರ್ತೆಯವರಾದ ಆರತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಕಾರಟಗಿ
ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರು ಇಲ್ಲದ ಕಾರಣ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಅಡುಗೆಯನ್ನು ಇವರೇ ಮಾಡುತ್ತಾ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡು ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ಅಧಿಕಾರಿಗಳ ಪ್ರಸಂಶೆಗೆ ಆರತಿ ಪಾತ್ರವಾಗಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಬಹುತೇಕ ಸವರ್ಣೀಯರ (ಮೇಲ್ಜಾತಿಯ) ಮಕ್ಕಳು ಬರುತ್ತಿದ್ದು, ಕಾರ್ಯಕರ್ತೆ ಆರತಿ ಅಡುಗೆ ಮಾಡುವುದು ಮತ್ತು ಮಕ್ಕಳಿಗೆ ಉಟ ಬಡಿಸುವುದುಕ್ಕೆ ಮಕ್ಕಳ ಪಾಲಕರು ನಿತ್ಯವೂ ಅಡ್ಡಿಪಡಿಸುತ್ತುದ್ದಾರೆ.
ಎಸ್.ಸಿ ಮಹಿಳೆ ಮಾಡುವ ಅಡುಗೆಯನ್ನು ಹೇಗಾದರೂ ತಪ್ಪಿಸಬೇಕೆಂದು ಉದ್ದೇಶಪೂರ್ವಕವಾಗಿ ವಾರ್ಡಿನ ಹಲವರು ಆಗಾಗ್ಗೆ ಅಂಗನವಾಡಿ ಕಾರ್ಯಕರ್ತೆಯವರಾದ ಆರತಿ ಜೊತೆ ಜಗಳ ಮಾಡುವುದು ಮತ್ತು ವಿನಾಕಾರಣ ಆರೋಪಗಳನ್ನು ಮಾಡುವುದು ಸಾಗುತ್ತಾ ಬಂದಿತ್ತು. ಇದರಿಂದ ಬೇಸತ್ತು ಹೋದ ಆರತಿ, ಮೇಲ್ವಿಚಾರಕರ ಮುಂದೆ ಹಲವು ಬಾರಿ ಅಳಲನ್ನು ತೋಡಿಕೊಂಡಿದ್ದರು. ಹಾಗೂ ಫೆಬ್ರವರಿ 17 ಹಾಗೂ ಮಾರ್ಚ್ 17 ರಂದು ಸಿಡಿಪಿಓ ಕನಕಗಿರಿ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಆ ಪತ್ರದಲ್ಲಿ ವಾರ್ಡಿನ ಹಲವು ಜನ ನಾನು ಮಾಡುವ ಅಡುಗೆಯನ್ನು ಮಕ್ಕಳಿಗೆ ಉಣಬಡಿಸುವುದು ಇಷ್ಟವಿಲ್ಲ ಹಾಗಾಗಿ ನಿತ್ಯ ಬಂದು ನನಗೆ ಕಿರಿಕಿರಿ ಮಾಡುತ್ತಿದ್ದಾರೆ. ನನ್ನನ್ನು ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ
ಇವರ ಪತ್ರಕ್ಕೆ ಪ್ರತಿಕ್ರಿಯಿಸಿ, ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಸಿಡಿಪಿಓ ವಿರೂಪಾಕ್ಷಯ್ಯ ಹಿರೇಮಠ ಅವರು, ಮೇಲ್ವಿಚಾರಕಿ ಸುಕನ್ಯಾ ಅವರಿಗೆ ಆರತಿಯವರನ್ನು ಕೆಲವು ದಿನಗಳ ಕಾಲ ಬೇರೆ ಅಂಗನವಾಡಿಗೆ ತಾತ್ಕಾಲಿಕವಾಗಿ ನಿಯೋಜಿಸಿವೆ ಎಂದು ತಿಳಿಸಿದರೆ ಹೊರತು, ಆರತಿಯವರಿಗೆ ರಕ್ಷಣೆ ನೀಡುವ ಕಾರ್ಯಕ್ಕೆ ಮುಂದಾಗಲಿಲ್ಲ.
ಹೀಗಿರುವಾಗ ಮಾರ್ಚ್ 1 ರಂದು ಮಕ್ಕಳು ಆಟ ಆಡುವಾಗ ಒಂದು ಮಗು ಕೆಳಗೆ ಬಿದ್ದಿರುತ್ತದೆ ಆ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳ ಆಟ ಆಡುವಾಗ ಎಡವುದು ಸಹಜ ನಂತರ ಆ ಮಗು ಎಲ್ಲಾ ಮಕ್ಕಳ ಜೊತೆ ಆಟವಾಡಿ ಮನೆಗೆ ಹೋಗಿದೆ. ಇದನ್ನೇ ನೆಪ ಮಾಡಿಕೊಂಡು ವಾರ್ಡಿನ ಸುಮಾರು 20ಕ್ಕೂ ಅಧಿಕ ಜನ ಗುಂಪು ಕೂಡಿಕೊಂಡು ಬಂದು ಕಾರ್ಯಕರ್ತೆ ಆರತಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ತುಳಜಾ ರಾಮ್, ಸಿಂಗು ಬೀರ್ ಸಿಂಗ್, ಶಾಂತ ಬಾಯಿ, ವಸಂತ ಬಾಯಿ, ವಸುಮಾನ ಸಿಂಗ್, ಆಶಾಬಾಯಿ, ಸಂಗೀತ ಬಾಯಿ, ಕಟ್ಟಪ್ಪ, ಸೇರಿದಂತೆ ಹಲವರು ಏಕಾಏಕಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುತ್ತಾರೆ. ಕೊರಳಲ್ಲಿರುವ ತಾಳಿಯನ್ನು ಕಿತ್ತೆಸೆದಿರುತ್ತಾರೆ. ಪಾತ್ರೆ ತೊಳೆಯುವ ಕೊಠಡಿಯ ಕೋಣೆಯ ಬಾಗಿಲನ್ನು ಮುರಿದು ಅಂಗನವಾಡಿ ಕೇಂದ್ರಕ್ಕೆ ಬೀಗವನ್ನು ಹಾಕಿ ಮಕ್ಕಳನ್ನು ಮನೆಗೆ ಕಳುಹಿಸಿ ಅಂಗನವಾಡಿಯನ್ನು ಬಂದ್ ಮಾಡಲು ಪ್ರಯತ್ನಿಸಿದ್ದಾರೆ.
ಕಾರ್ಯಕರ್ತೆ ಆರತಿ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮುಗ್ಧ ಮಕ್ಕಳು ಕಣ್ಣಾರೆ ಕಂಡು ಹೆದರಿದ್ದರು, ಘಟನೆಯ ಮಾಹಿತಿ ಪಡೆದ ಕನಕಗಿರಿಯ ಸಿಡಿಪಿಓ ರವರು ಕೂಡಲೇ ಪ್ರಕರಣವನ್ನು ದಾಖಲು ಮಾಡುವಂತೆ ಸೂಚನೆ ನೀಡಿರುತ್ತಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಭದ್ರತೆ ಇಲ್ಲ. ಇಂತಹ ಪ್ರಕರಣಗಳ ಬಗ್ಗೆ ಮರುಕ ಪಡುವುದರ ಬದಲು ಸಾಮೂಹಿಕವಾಗಿ ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕ್ರಮವನ್ನು ಜರುಗಿಸಬೇಕಿದೆ ಎಂದು ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಂಗಮವಾಡಿ ನೌಕರರ ಸಂಘಟನೆಯ ಕೊಪ್ಪಳ ಜಿಲ್ಲಾ ಸಮಿತಿ ತಿಳಿಸಿದೆ.
ಇಂತಹ ಪ್ರಕರಣಗಳು ಗಂಗಾವತಿಯಲ್ಲಿ ಹೆಚ್ಚಾಗುತ್ತಲೇ ಇವೆ. ಬಿಗಿಯಾದ ಕಾನೂನು ಕ್ರಮ ಜರುಗಿಸದ ಕಾರಣ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಆರತಿಯವರ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜಾರಿಯಾಗಬೇಕು ಎಂದು ಜಿಲ್ಲಾಧ್ಯಕ್ಷೆ ಕಲಾವತಿ, ಜಿಲ್ಲಾ ಕಾರ್ಯದರ್ಶಿ ಗಿರಿಜಮ್ಮ, ಮುಖಂಡರಾದ ಅಂಬರಮ್ಮ, ದುರ್ಗಮ್ಮ ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿಯನ್ನು ಪಡೆಯುವುದಕ್ಕಾಗಿ ಜನಶಕ್ತಿ ಮೀಡಿಯಾ ಸಿಡಿಪಿಒ ವಿರುಪಾಕ್ಷ ಸ್ವಾಮಿಯವರನ್ನು ಸಂಪರ್ಕಿಸಿತು, ಆರತಿಯವರಿಗೆ ದೂರು ನೀಡಲು ಹೇಳಿದ್ದೇನೆ ಎಂದರು, ಅವರು ನಿಮ್ಮ ಇಲಾಖೆಯ ಸಿಬ್ಬಂದಿ, ಅಂಗನವಾಡಿಯನ್ನು ಬಂದ್ ಮಾಡುವುದಾಗಿ ಬೆದರಿಸಲಾಗಿದೆ, ನಿಮ್ಮ ಇಲಾಕೆಯಿಂದಲೇ ದೂರು ದಾಖಲಿಸಬಹುದಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ, ನಾವು ದೂರು ನೀಡಲು ಬರುವುದಿಲ್ಲ, ಅಂಗನವಾಡಿ ಮುಚ್ಚಿದಾಗ ನೋಡೋಣ ಎಂಬ ಹಾರಿಕೆಯ ಉತ್ತರವನ್ನು ನೀಡಿದರು. ಕನಕಗಿರಿ ಎಸ್.ಸಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾಗಿರುವ ಶಿವರಾಜ ತಂಗಡಗಿಯವರನ್ನು ಹತ್ತಾರು ಬಾರಿ ಸಂಪರ್ಕಿಸಲಾಯಿತು. ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಪ್ರತ್ಯುತ್ತ ಮಾತ್ರ ಸಿಕ್ಕಿದೆ.
ಇದನ್ನೂ ನೋಡಿ: ವರ್ತಮಾನದಲ್ಲಿ ಸುಳ್ಳಿನ ಇತಿಹಾಸ ಸೃಷ್ಟಿಸುತ್ತಿರುವ ಆರೆಸ್ಸೆಸ್…