ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಚಿಹ್ನೆಗೆ ಸುಪ್ರೀಂ ಅನುಮತಿ | ಲಡಾಕ್‌ ಆಡಳಿತಕ್ಕೆ ತೀವ್ರ ಮುಖಭಂಗ

ಶ್ರೀನಗರ: ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ (LAHDC)ನ ಕಾರ್ಗಿಲ್ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿಗಳಿಗೆ ಅವರ “ನೇಗಿಲು” ಚಿಹ್ನೆಯನ್ನೆ ಚುನಾವಣಾ ಚಿಹ್ನೆಯಾಗಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಸುಪ್ರೀಂಕೋರ್ಟ್‌ ಲಡಾಖ್ ಆಡಳಿತಕ್ಕೆ 1 ಲಕ್ಷ ರೂ. ದಂಡವನ್ನೂ ವಿಧಿಸಿದ್ದು, ಆಡಳಿತವು ತೀವ್ರ ಮುಖಭಂಗಕ್ಕೀಡಾಗಿದೆ. ತೀರ್ಪನ್ನು ಪಕ್ಷವೂ ಬುಧವಾರ ಸ್ವಾಗತಿಸಿದ್ದು, ”ಪಕ್ಷವು ಚುನಾವಣೆಗೆ ಮುಂಚಿತವಾಗಿ ಭಾರಿ ಗೆಲುವು ಸಾಧಿಸಿದೆ” ಎಂದು ಬಣ್ಣಿಸಿದೆ.

ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಅಭ್ಯರ್ಥಿಗಳು ‘ನೇಗಿಲು’ ಚಿಹ್ನೆ ಬಳಸುವುದನ್ನು ಆಕ್ಷೇಪಿಸಿ ಲಡಾಖ್ ಆಡಳಿತವೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ‘1968-ಚುನಾವಣಾ ಚಿಹ್ನೆ ಆದೇಶ’ವು ಅಸೆಂಬ್ಲಿ ಮತ್ತು ಸಂಸತ್ತಿನ ಚುನಾವಣೆಗಳಿಗೆ ಅನ್ವಯಿಸುತ್ತದೆಯೇ ಹೊರತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗಲ್ಲ ಎಂದು ಆಡಳಿತವು ಅರ್ಜಿಯಲ್ಲಿ ವಾದಿಸಿತ್ತು. ಆದರೆ ಇದನ್ನು ಹೈಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಆಡಳಿತ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: ಮಂಗಳೂರು: ಗಣೇಶೋತ್ಸವಕ್ಕೆ 2 ಲಕ್ಷ ರೂ. ನೀಡಬೇಕೆಂದ ಬಿಜೆಪಿ ಶಾಸಕನ ತಂಡ, ಕುಲಪತಿ ಮೇಲೆ ಗೂಂಡಾಗಿರಿ!

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಕಾರ್ಗಿಲ್‌ನಲ್ಲಿ ನಡೆಯಲಿರುವ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಪರನ್ಸ್ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯಾಗಿ “ನೇಗಿಲು” ಬಳಸಲು ಅನುಮತಿ ನೀಡಿದೆ. ಸೆಪ್ಟೆಂಬರ್ 10 ರಂದು ನಿಗದಿಯಾಗಿದ್ದ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ (LAHDC)ನ – ಕಾರ್ಗಿಲ್ ಚುನಾವಣೆಯ ಅಧಿಸೂಚನೆಯನ್ನು ರದ್ದುಗೊಳಿಸಿರುವ ಸುಪ್ರಿಂಕೋರ್ಟ್‌, ಲಡಾಖ್ ಆಡಳಿತಕ್ಕೆ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ. ಅಲ್ಲದೆ, ಒಂದು ವಾರದೊಳಗೆ ಹೊಸ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದೆ.

ಸುಪ್ರೀಂಕೊರ್ಟ್‌ ತೀರ್ಪನ್ನು ಶ್ಲಾಘಿಸಿರುವ ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, ಪಕ್ಷವು ತನಗೆ ಅರ್ಹವಾದ ತೀರ್ಪು ಪಡೆದಿದೆ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಅಡೆತಡೆ ಸೃಷ್ಟಿಸಿದ್ದಕ್ಕಾಗಿ ಅವರು ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಜಿ20 ಶೃಂಗಸಭೆ | ಬಡತನವನ್ನು ಪ್ಲಾಸ್ಟಿಕ್ ಹಾಕಿ ಮುಚ್ಚುತ್ತಿರುವ ಕೇಂದ್ರ ಸರ್ಕಾರ!

“ನ್ಯಾಷನಲ್ ಕಾನ್‌ಫರೆನ್ಸ್‌ ನಾವು ಬಯಸಿದ ಮತ್ತು ಅರ್ಹವಾದ ತೀರ್ಪನ್ನು ಪಡೆದುಕೊಂಡಿದೆ. ಇಂದು ಬೆಳಿಗ್ಗೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನಮ್ಮ ಚಿಹ್ನೆ ನೇಗಿಲನ್ನು ನಮಗೆ ನೀಡಿತು. ಸಂಪೂರ್ಣ ಪಕ್ಷಪಾದ ಮಾಡಿದ ಲಡಾಖ್ ಆಡಳಿತ ನೆರವಿನಿಂದ ಬಿಜೆಪಿ ನಮ್ಮ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡಿದೆ. ಇದನ್ನು ಗಮನಿಸಿದ ನ್ಯಾಯಾಲಯವು ಆಡಳಿತದ ಮೇಲೆ ವಿಧಿಸಿದ 1 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ಸ್ವಾಗತಿಸಿರುವ ನ್ಯಾಷನಲ್ ಕಾನ್ಫರೆನ್ಸ್‌, ಪಕ್ಷವು ಚುನಾವಣೆಗೆ ಮುಂಚಿತವಾಗಿ “ಭಾರಿ ಗೆಲುವು” ಪಡೆದಿದೆ ಎಂದು ಬಣ್ಣಿಸಿದೆ. “ನಾವು ‘ನೇಗಿಲು’ ಚಿಹ್ನೆಗೆ ಕಾನೂನುಬದ್ಧ ಹಕ್ಕು ಹೊಂದಿದ್ದೇವೆ. ಇದೀಗ ಲಡಾಖ್ ಆಡಳಿತವು ಅಗತ್ಯ ಆದೇಶಗಳನ್ನು ನೀಡುವ ಮೂಲಕ ನ್ಯಾಯಾಲಯದ ನಿರ್ದೇಶನಗಳಿಗೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ” ಎಂದು ಪಕ್ಷದ ವಕ್ತಾರ ತನ್ವಿರ್ ಸಾದಿಕ್ ಹೇಳಿದ್ದಾರೆ.

ಬಿಜೆಪಿ ಅಥವಾ ಅದರ ಆಡಳಿತದ ಯಾವುದೇ ನಡೆಗಳನ್ನು ಲೆಕ್ಕಿಸದೆಯೇ, ಅಂತಿಮವಾಗಿ ಕಾರ್ಗಿಲ್‌ನ ಭವಿಷ್ಯವನ್ನು ಜನರು ತಮ್ಮ ಮತಗಳ ಮೂಲಕ ನಿರ್ಧರಿಸುತ್ತಾರೆ ಎಂದು ಸಾದಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಡಿಯೊ ನೋಡಿ: ದೇಶಕ್ಕೆ ಗಾಯವಾದಾಗ ಜನ ಮೌನವಾಗಿದ್ದರೆ, ಅದು ಇಡೀ ದೇಶವನ್ನೇ ಸುಡುತ್ತದೆ – ಪ್ರಕಾಶ್ ರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *