ನವದೆಹಲಿ: ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಹಿನ್ನೆಲೆಯಲ್ಲಿ ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ವಸಾಹತುಶಾಹಿ ಕಾಲದ ಕಾನೂನಿನ ಮೂಲಕ ಬಲವಂತದ ಕ್ರಮಕೈಗೊಳ್ಳುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ತೆಲುಗು ವಾಹಿನಿಗಳಾದ ಟಿವಿ 5 ಮತ್ತು ಎಬಿಎನ್ ಆಂಧ್ರಜ್ಯೋತಿ ವಾಹಿನಿಗಳಿಗೆ ರಕ್ಷಣೆ ನೀಡಿದೆ.
ವೈಎಸ್‌ಆರ್ ಕಾಂಗ್ರೆಸ್‌ನ ಬಂಡಾಯ ಸಂಸದ ಕೆ. ರಘು ರಾಮಕೃಷ್ಣ ರಾಜು ಅವರ ಆಕ್ರಮಣಕಾರಿ ಭಾಷಣಗಳನ್ನು ಟಿವಿ 5 ಮತ್ತು ಎಬಿಎನ್ ಆಂಧ್ರಜ್ಯೋತಿ ವಾಹಿನಿಗಳಲ್ಲಿ ಪ್ರಸಾರ ಮಾಡಿದ್ದವು ಎಂದು ವಾಹಿನಿಗಳ ವಿರುದ್ಧ ಆಂಧ್ರಪ್ರದೇಶದ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.
ಇದನ್ನು ಓದಿ: “ಬದುಕಿನ ಹಕ್ಕು” ಆದ್ಯತೆಯಾಗಬೇಕು
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಲ್.ಎನ್. ರಾವ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು, ‘ಐಪಿಸಿ 124ಎ (ದೇಶದ್ರೋಹ), ಐಪಿಸಿ 153 (ಎರಡು ಗುಂಪುಗಳ ನಡುವೆ ದ್ವೇಷ ಪ್ರಚೋದನೆ) ನಿಬಂಧನೆಗಳ ಅರ್ಥವಿವರಣೆಯ ಅಗತ್ಯವಿದೆ ಎಂದು ಭಾವಿಸಿದ್ದೇವೆ. ವಿಶೇಷವಾಗಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಹಿನ್ನೆಲೆಯಲ್ಲಿ ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲಿಸಬೇಕಾಗಿದೆ’ ಎಂದು ನ್ಯಾಯಪೀಠ ಹೇಳಿದೆ.
ಆಂಧ್ರಪ್ರದೇಶದ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಎರಡೂ ವಾಹಿನಿಗಳ ನೌಕರರು ಮತ್ತು ಸಿಬ್ಬಂದಿ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಕೈಗೊಳ್ಳದಂತೆಯೂ ನ್ಯಾಯಾಲಯವು ತಡೆ ನೀಡಿದೆ.
ಇದನ್ನು ಓದಿ: ಕಳಪೆ ವೆಂಟಿಲೇಟರ್‌ಗಳ ಪೂರೈಕೆ : ಕೇಂದ್ರದ ʼಅಸೂಕ್ಷ್ಮತೆʼ ಬಗ್ಗೆ ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಎರಡು ವಾಹಿನಿಗಳು ಆಂಧ್ರಪ್ರದೇಶದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ದೇಶದ್ರೋಹದ ಕಠಿಣ ಕಾನೂನಿನ ಪ್ರಕರಣ ಸೇರಿದಂತೆ ವಿವಿಧ ಅಪರಾಧಗಳಿಗೆ ಆರೋಪದ ಮೇಲೆ ವಾಹಿನಿಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕೆಂದು ನ್ಯಾಯಾಲಯವು ಸೂಚಿಸಿದೆ.
ದೇಶದ್ರೋಹ ಪ್ರಕರಣದಲ್ಲಿ ರಘು ರಾಮಕೃಷ್ಣ ರಾಜು ಅವರನ್ನು ಬಂಧಿಸಿರುವ ಸಿಐಡಿ ಸಂಸ್ಥೆಯು, ಈ ಎರಡು ವಾಹಿನಿಗಳು ಸೇರಿದಂತೆ ಇತರರನ್ನೂ ಆರೋಪಿಗಳೆಂದು ಹೆಸರಿಸಿದೆ.