ಬೆಂಗಳೂರು: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಪ್ರಮುಖ ಆರೋಪಿ ನಳಿನಿ ಶ್ರೀಹರನ್ ಸೇರಿದಂತೆ ಆರು ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಪ್ರಕರಣದಲ್ಲಿ ಅಪರಾಧಿಗಳು ತಮಿಳುನಾಡಿನ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ತಮಿಳುನಾಡು ಸರ್ಕಾರ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಇದನ್ನು ಸುಪ್ರೀಂಕೋರ್ಟ್ ಪರಿಗಣಿಸಿದ್ದು, ಅವರ ಬಿಡುಗಡೆಗೆ ಆದೇಶವನ್ನು ನೀಡಿದೆ. 2022ರ ಮೇ ತಿಂಗಳಲ್ಲಿ ಮತ್ತೋರ್ವ ಆರೋಪಿ ಪೇರಾರಿವಾಳನ್ ಸುಪ್ರೀಂ ಕೋರ್ಟ್ ಆದೇಶ ಮೇರೆಗೆ ಬಿಡುಗಡೆ ಹೊಂದಿದನು.
ಅವಧಿಗೆ ಮೊದಲೇ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಕೋರಿ ರಾಜೀವ್ ಗಾಂಧಿ ಹಂತಕರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದರು. ಈ ಅರ್ಜಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಿತ್ತು. ತಮ್ಮ ಸಹ ಅಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದಂತೆ ತಮ್ಮನ್ನೂ ಬಿಡುಗಡೆ ಮಾಡುವಂತೆ ಕೋರಿ ನಳಿನಿ ಮತ್ತು ರವಿಚಂದ್ರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಾದ ನಳಿನಿ ಶ್ರೀಹರನ್ ಮತ್ತು ಆರ್‌ಪಿ ರವಿಚಂದ್ರನ್ ಅವರನ್ನು ಅವಧಿಗೂ ಮೊದಲೇ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಶಿಫಾರಸ್ಸು ಮಾಡಿತ್ತು.
ಈಗಾಗಲೇ 30 ವರ್ಷಗಳ ಜೈಲು ಶಿಕ್ಷೆಯನ್ನು ನಾವು ಅನುಭವಿಸಿದ್ದೇವೆ. ರಾಜೀವ್ ಗಾಂಧಿ ಕೊಲೆಯ 7 ಅಪರಾಧಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ತಮಿಳುನಾಡು ಸರ್ಕಾರ 4 ವರ್ಷಗಳ ಹಿಂದೆಯೇ ಒಪ್ಪಿಕೊಂಡಿತ್ತು ಎಂದು ಅಪರಾಧಿಗಳಾದ ಎಸ್ ನಳಿನಿ ಮತ್ತು ಆರ್‌ಪಿ ರವಿಚಂದ್ರನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ನಳಿನಿ ಶ್ರೀಹರನ್ ಅಲ್ಲದೇ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ರವಿಚಂದ್ರನ್ ಜೈಲಿನಲ್ಲಿದ್ದಾರೆ. ಮೇ 21, 1991ಕಲ್ಲಿ ತಮಿಳುನಾಡಿನ ಪೆರಂಬೂರಿನಲ್ಲಿ ಎಲ್‌ಟಿಟಿಐ ಗುಂಪಿನ ಮಹಿಳಾ ಆತ್ಯಾಹುತಿ ಬಾಂಬರ್ ಗಳಿಂದ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು.
ಎಲ್‌ಟಿಟಿಇ ಪ್ರಭಾಕರನ್ ನೇತೃತ್ವದಲ್ಲಿ ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಶ್ರೀಲಂಕಾ ಸರ್ಕಾರಕ್ಕೆ ಪ್ರಭಾಕರನ್ ವಿರುದ್ಧ ಹೋರಾಡಲು ರಾಜೀವ್ ಗಾಂಧಿ ಸಹಾಯ ಮಾಡಿದ್ದರು. ಹಾಗೊಂದು ವೇಳೆ ರಾಜೀವ್ ಗಾಂಧಿ ಮುಂದಾಗದಿದ್ದರೆ ಚೀನಾ ಶ್ರೀಲಂಕಾದಲ್ಲಿ ಭದ್ರ ನೆಲೆ ಕಂಡುಕೊಳ್ಳುವ ಸಾಧ್ಯತೆಯಿತ್ತು. ಇದೇ ಕಾರಣಕ್ಕಾಗಿ ಎಲ್‌ಟಿಟಿಇ ರೆಬೆಲ್‌ಗಳ ವಿರುದ್ಧದ ಯುದ್ಧಕ್ಕೆ ಸೇನೆಯನ್ನು ರಾಜೀವ್ ಗಾಂಧಿ ಅನಿವಾರ್ಯವಾಗಿ ಕಳಿಸಬೇಕಾಯಿತು. ಇದೇ ಕಾರಣಕ್ಕೆ ಪ್ರಭಾಕರನ್ ರಾಜೀವ್ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದರು.