ನವದೆಹಲಿ: ತಮಿಳುನಾಡಿನಲ್ಲಿ ವಾಸವಾಗಿರುವ, ಅದ್ವೈತದ ಧಾರ್ಮಿಕ ತತ್ವಗಳನ್ನು ಪ್ರಚಾರ ಮಾಡುತ್ತಿರುವ ಸ್ಮಾರ್ಥ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು ಸ್ಮಾರ್ಥ ಬ್ರಾಹ್ಮಣರು ಧಾರ್ಮಿಕ ಪಂಗಡವಲ್ಲ. ಹೀಗಾಗಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಬರುವುದಿಲ್ಲ. ಅನೇಕ ಜನರು ಅದ್ವೈತ ತತ್ವವನ್ನು ಅನುಸರಿಸುತ್ತಾರೆ. ಹೀಗಾದರೆ, ನಾವು ಅಲ್ಪಸಂಖ್ಯಾತರ ರಾಷ್ಟ್ರವನ್ನು ಹೊಂದುತ್ತೇವೆ ಎಂದು ತಿಳಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ.
2022ರ ಜೂನ್ 7ರಂದು ಮದ್ರಾಸ್ ಹೈಕೋರ್ಟ್, ಸ್ಮಾರ್ಥ ಬ್ರಾಹ್ಮಣರು ಭಾರತದ ಸಂವಿಧಾನದ 26 (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ) ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲ ಎಂದು ತೀರ್ಪು ನೀಡಿತ್ತು.
“ಸ್ಮಾರ್ಥ ಬ್ರಾಹ್ಮಣರು ಜಾತಿ/ಸಮುದಾಯಕ್ಕೆ ಯಾವುದೇ ವಿಶಿಷ್ಟತೆಯಿಲ್ಲದೆ, ಮೀಸಲಾತಿ ನೀಡಿದರೆ ತಮಿಳುನಾಡು ರಾಜ್ಯದ ಇತರ ಬ್ರಾಹ್ಮಣರಿಂದ ಅವರನ್ನು ಪ್ರತ್ಯೇಕಿಸಿದಂತಾಗುತ್ತದೆ. ಅವರು ತಮ್ಮನ್ನು ತಾವು ಧಾರ್ಮಿಕ ಪಂಗಡ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಪರಿಣಾಮವಾಗಿ, ಅವರು ಭಾರತದ ಸಂವಿಧಾನದ 26ನೇ ವಿಧಿಯ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲ. ಎಂದು ಹೈಕೋರ್ಟ್ ತೀರ್ಪು ನೀಡಿತ್ತು.