ಕೋವಿಡ್‌ ಸಂತ್ರಸ್ತರ ಕುಟುಂಬಗಳಿಗೆ 10 ದಿನದೊಳಗೆ ಪರಿಹಾರ ನೀಡಿ: ರಾಜ್ಯಗಳಿಗೆ ಸುಪ್ರೀಂ ಸೂಚನೆ

ನವದೆಹಲಿ: ಕೋವಿಡ್‌ ಮೃತ ಕುಟುಂಬದವರು ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸಬಾರದು. ಯಾವುದೇ ತಾಂತ್ರಿಕ ದೋಷ ಕಂಡುಬಂದರೂ, ಸಂತ್ರಸ್ತರಿಗೆ ಸಾಂತ್ವನ ಮತ್ತು ಪರಿಹಾರವನ್ನು ಒದಗಿಸುವುದು ಕಲ್ಯಾಣ ರಾಜ್ಯದ ಅಂತಿಮ ಗುರಿಯಾಗಿದೆ. ದೋಷಗಳನ್ನು ಸರಿಪಡಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಕೋವಿಡ್‌ ನಿಂದ ಮೃತ ಪಟ್ಟ ಕುಟುಂಬದವರು ಅರ್ಜಿ ಸಲ್ಲಿಕೆಯಾದ 10 ದಿನಗಳೊಳಗೆ ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಕೊರೊನಾ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರ ಪಾವತಿಗೆ ಅನುಕೂಲವಾಗುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಎಸ್‌ಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿಯೊಂದಿಗೆ ಸಮನ್ವಯ ಸಾಧಿಸಲು ನೋಡಲ್‌ ಅಧಿಕಾರಿಯನ್ನು ನೇಮಿಸುವಂತೆ ಕೋರ್ಟ್‌ ಸಲಹೆ ನೀಡಿದೆ.

ರಾಜ್ಯ ಕಾರ್ಯದರ್ಶಿ ಅಥವಾ ಉಪ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಒಬ್ಬ ಸಮರ್ಪಿತ ಅಧಿಕಾರಿಯನ್ನು ನೇಮಿಸಲು ನಾವು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುತ್ತೇವೆ. ಅವರು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಆದರಿಂದ ಅವರೊಂದಿಗೆ ಸಮನ್ವಯ ಸಾಧಿಸಬಹುದು ಮತ್ತು ಅರ್ಹ ವ್ಯಕ್ತಿಗಳಿಂದ ಅರ್ಜಿಗಳನ್ನು ಸ್ವೀಕರಿಸುವಂತೆ ನೋಡಿಕೊಳ್ಳಲು ಮಾಡಬೇಕು. ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ಪೀಠವು, ಇಂದಿನಿಂದ ಒಂದು ವಾರದೊಳಗೆ ಎಸ್‌ಎಲ್‌ಎಸ್‌ಎಗೆ ಹೆಸರು, ವಿಳಾಸ ಮತ್ತು ಮರಣ ಪ್ರಮಾಣ ಪತ್ರದಂತಹ ಸಂಪೂರ್ಣ ವಿವರಗಳನ್ನು ಹಾಗೂ ಅನಾಥರಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ನಮ್ಮ ಹಿಂದಿನ ಆದೇಶದ ಹೊರತಾಗಿಯೂ, ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಜಾಲತಾಣಗಳಲ್ಲಿ ನೋಂದಾಯಿಸಲಾದ ಕೋವಿಡ್‌ ಸೋಂಕಿತರ ಮೃತಪಟ್ಟವರ ವಿವರಗಳನ್ನು ನೀಡುವಂತೆ ನಿರ್ದೇಶಿಸಿದ್ದರೂ, ಕೆಲವು ರಾಜ್ಯಗಳು ಮಾತ್ರ ನೀಡಿವೆ ಎಂದು ತೋರುತ್ತಿದೆ. ಬಹುತೇಕ ರಾಜ್ಯಗಳು ಅಂಕಿಅಂಶಗಳು ಮತ್ತು ಯಾವುದೇ ಸಂಪೂರ್ಣ ವಿವರಗಳನ್ನು ನೀಡಲಾಗಿಲ್ಲ ಎಂದು ತಿಳಿಸಿದೆ.

ಪರಿಹಾರ ಕೋರಿ ಆನ್‌ಲೈನ್‌ ಅಲ್ಲದೆ, ನೇರವಾಗಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಸಲ್ಲಿಸಿದ ಯಾವುದೇ ಅರ್ಜಿಯನ್ನು ತಿರಸ್ಕರಿಸಬಾರದು. ನೀವು ದಾನ ಮಾಡುತ್ತಿಲ್ಲ. ಕಲ್ಯಾಣ ರಾಜ್ಯವಾಗಿ ಕರ್ತವ್ಯ ನಿರ್ವಹಿಸಿರಿ. ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಕುರಿತಂತೆ ಅರ್ಜಿದಾರರಾಗಿರುವ ವಕೀಲ ಗೌರವ್ ಬನ್ಸಾಲ್ ಅವರು ನ್ಯಾಯಪೀಠಕ್ಕೆ ವಿವರಿಸಿದರು.

ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಕೆಲವು ಸಂತ್ರಸ್ತರಿಗೆ ನೀಡಲಾದ ಚೆಕ್‌ಗಳು ಬೌನ್ಸ್ ಆಗಿವೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ. ಚೆಕ್‌ಗಳು ಬೌನ್ಸ್ ಆಗದಂತೆ ನೋಡಿಕೊಳ್ಳುವಂತೆ ರಾಜ್ಯ ಸರ್ಕಾರದ ವಕೀಲರಿಗೆ ಸುಪ್ರೀಂ ಕೋರ್ಟ್ ಕೇಳಿದೆ.

ರಾಜಸ್ಥಾನಕ್ಕೆ ಸಂಬಂಧಿಸಿದಂತೆ, ಅಲ್ಲಿನ ರಾಜ್ಯ ಬಜೆಟ್‌ ಮೂಲಕ 10 ಕೋಟಿ ಮೀಸಲಿಡಲಾಗಿದೆ. ಇದರ ಬದಲಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಮೊತ್ತವನ್ನು ಪಾವತಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕೋವಿಡ್-19 ನಿಂದ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪರಿಹಾರವನ್ನು ಪಾವತಿಸಲು ಅದರ ನಿರ್ದೇಶನಗಳು ಸ್ಪಷ್ಟವಾಗಿವೆ ಮತ್ತು ಪರಿಹಾರವನ್ನು ನೀಡಲು ಪರಿಶೀಲನಾ ಸಮಿತಿಯನ್ನು ರಚಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮರಣ ಪ್ರಮಾಣ ಪತ್ರದಲ್ಲಿ, ಕೋವಿಡ್-19 ರ ಸಾವಿಗೆ ಕಾರಣವನ್ನು ತೋರಿಸದಿದ್ದರೂ, ಸತ್ತವರು ಕೊರೊನಾ ವೈರಸ್‌ಗೆ ಪಾಸಿಟಿವ್ ಎಂದು ಘೋಷಿಸಲ್ಪಟ್ಟರೆ ಮತ್ತು 30 ದಿನಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಯಾವುದೇ ಹೆಚ್ಚಿನ ಷರತ್ತುಗಳಿಲ್ಲದೆ ಸ್ವಯಂಚಾಲಿತವಾಗಿ ಅವನ ಅಥವಾ ಅವಳ ಕುಟುಂಬದ ಸದಸ್ಯರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ.

Donate Janashakthi Media

Leave a Reply

Your email address will not be published. Required fields are marked *