13 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ನವದೆಹಲಿ: ಕರ್ನಾಟಕ ರಾಜ್ಯದ ಹೈಕೋರ್ಟ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ 13 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಕೊಲಿಜಿಯಂ ನಿರ್ಧಾರಗಳ ಬಗ್ಗೆ ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಹಿರಿಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.

ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಎ ಎಸ್‌ ಓಕಾ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅವರ ಬಳಿಕ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ಅವರನ್ನು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿದೆ.

ಇದನ್ನು ಓದಿ: 12 ಹೈಕೋರ್ಟ್​ಗಳಿಗೆ 68 ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ

ಕಲ್ಕತ್ತ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಬಿಂದಾಲ್‌ ಅವರನ್ನು ಒಳಗೊಂಡಂತೆ ಎಂಟು ಹೆಸರುಗಳನ್ನು ಮತ್ತು ಐವರು ಹಾಲಿ ಮುಖ್ಯನ್ಯಾಯಮೂರ್ತಿಗಳನ್ನು ಇತರ ಹೈಕೋರ್ಟ್‌ಗಳಿಗೆ ವರ್ಗವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನ್ಯಾಯಮೂರ್ತಿಗಳಾದ ರಂಜಿತ್‌ ವಿ ಮೋರೆ ಅವರನ್ನು ಮೇಘಾಲಯಕ್ಕೆ, ಸತೀಶ್‌ ಚಂದ್ರ ಶರ್ಮಾ ಅವರನ್ನು ತೆಲಂಗಾಣಕ್ಕೆ, ಪ್ರಕಾಶ್‌ ಶ್ರೀವಾಸ್ತವ ಅವರನ್ನು ಕಲ್ಕತ್ತಾಕ್ಕೆ, ಆರ್.ವಿ.ಮಳೀಮಠ್‌ ಅವರನ್ನು ಮಧ್ಯಪ್ರದೇಶಕ್ಕೆ, ರಿತುರಾಜ್‌ ಅವಸ್ಥಿ ಅವರನ್ನು ಕರ್ನಾಟಕಕ್ಕೆ, ಅರವಿಂದ್‌ ಕುಮಾರ್‌ ಅವರನ್ನು ಗುಜರಾತಿಗೆ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿಗೆ ಆಂಧ್ರಪ್ರದೇಶ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಶಿಫಾರಸು ಮಾಡಲಾಗಿದೆ.

ಕೊಲಿಜಿಯಂನ ಮುಖ್ಯ ನ್ಯಾಯಮೂರ್ತಿ ರಮಣ ಜೊತೆ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರನ್ನೂ ಒಳಗೊಂಡಿದೆ.

ಇದನ್ನು ಓದಿ: ಕರ್ನಾಟಕ ಹೈಕೋರ್ಟ್‌ನ 6 ಮಂದಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸಿದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

ಮತ್ತೊಂದು ಪಟ್ಟಿಯಲ್ಲಿ ತಿಳಿಸಿದಂತೆ ಐದು ಮಂದಿ ಮುಖ್ಯ ನ್ಯಾಯಮೂರ್ತಿಗಳನ್ನು ಇತರೆ ಹೈಕೋರ್ಟ್‌ಗಳಿಗೆ ವರ್ಗವಣೆ ಮಾಡಲು ಶಿಫಾರಸು ಮಾಡಲಾಗಿದೆ.

ತ್ರಿಪುರಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎ. ಖುರೇಷಿ ಅವರನ್ನು ರಾಜಸ್ತಾನ ಹೈಕೋರ್ಟ್‌ಗೆ, ರಾಜಸ್ತಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್‌ ಮಹಾಂತಿ ಅವರನ್ನು ತ್ರಿಪುರಾ ಹೈಕೋರ್ಟ್‌ಗೆ ನೇಮಿಸಲು ಸೂಚಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ರಮಣ ಅವರು ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಹೈಕೋರ್ಟ್‌ಗಳಿಗೆ ಸುಮಾರು ನೂರು ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಅಲ್ಲದೆ ಸುಪ್ರೀಂಕೋರ್ಟ್‌ನಲ್ಲಿ ಖಾಲಿ ಇದ್ದ ಒಂಬತ್ತು ನ್ಯಾಯಮೂರ್ತಿಗಳ ಸ್ಥಾನಗಳಿಗೂ ನೇಮಕ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *