ನವದೆಹಲಿ: ಅಕ್ಟೋಬರ್ 3ರಂದು ಉತ್ತರಪ್ರದೇಶ ರಾಜ್ಯದ ಲಖಿಂಪುರ ಜಿಲ್ಲೆಯ ಖೇರಿ ಗ್ರಾಮದಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ತನಿಖೆಯ ಮೇಲ್ವಿಚಾರಣೆ ನಡೆಸಲು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟಿನ ಮಾಜಿ ನ್ಯಾಯಧೀಶ ರಾಕೇಶ್ ಕುಮಾರ್ ಜೈನ್ ಅವರನ್ನು ಸುಪ್ರೀಂಕೋರ್ಟ್ ನೇಮಕ ಮಾಡಿ ಆದೇಶ ನೀಡಿದೆ.
ಲಖಿಂಪುರ ಖೇರಿ ಘಟನೆಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅಜಯ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಪ್ರತಿಭಟನಾನಿರತ ರೈತರ ಮೇಲೆ ಕಾರು ಚಲಾಯಿಸಿದ ಪರಿಣಾಮ ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ.
ತನಿಖೆಯ ಫಲಿತಾಂಶದಲ್ಲಿ “ನ್ಯಾಯ, ಪಾರದರ್ಶಕತೆ ಮತ್ತು ಸಂಪೂರ್ಣ ನಿಷ್ಪಕ್ಷಪಾತವನ್ನು ಖಾತ್ರಿಪಡಿಸಿಕೊಳ್ಳಲು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್.ವಿ .ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಇದನ್ನು ಓದಿ: ಲಖಿಂಪುರ್ ಖೇರಿ ಪ್ರಕರಣ: ಆಶಿಷ್ ಮಿಶ್ರಾ ಸೇರಿ ಇಬ್ಬರಿಗೆ ಜಾಮೀನು ಅರ್ಜಿ ನಿರಾಕರಣೆ
ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರು ಮೇ 1982 ರಲ್ಲಿ ಪಂಜಾಬ್ ಮತ್ತು ಹರಿಯಾಣದ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ಕಾರ್ಯನಿರ್ವಹಿಸಿದವರು. ಹಿಸಾರ್‌ನ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ಕಾನೂನು ಅಭ್ಯಾಸ ಆರಂಭಿಸಿದ ಅವರು ಡಿಸೆಂಬರ್ 5, 2007 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟರು ಮತ್ತು ಸೆಪ್ಟೆಂಬರ್ 30, 2020 ರಂದು ನಿವೃತ್ತರಾದರು.
ಅಕ್ಟೋಬರ್ 3 ರ ಘಟನೆಗೆ ಸಂಬಂಧಿಸಿದ ಪ್ರಕರಣದ ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ತನಿಖೆಯ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು. “ಸಾಕ್ಷ್ಯಗಳನ್ನು ಸ್ವತಂತ್ರವಾಗಿ ದಾಖಲಿಸಲಾಗಿದೆ ಮತ್ತು ಯಾವುದೇ ಅತಿಕ್ರಮಣವಿಲ್ಲ ಮತ್ತು ಸಾಕ್ಷ್ಯಗಳ ಮಧ್ಯಪ್ರವೇಶವಿಲ್ಲ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶದಿಂದಾಗಿ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಬೇರೆ ರಾಜ್ಯದ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಲು ಪ್ರಯತ್ನಿಸುತ್ತಿದ್ದೇವೆ. ನಿಮ್ಮ ರಾಜ್ಯದಿಂದ ನೇಮಕಗೊಂಡ ನ್ಯಾಯಾಂಗ ಆಯೋಗ ಮುಂದುವರೆಯುವುದು ನಮಗೆ ಇಷ್ಟವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಹೇಳಿದ್ದಾರೆ.
ಇದನ್ನು ಓದಿ: ಲಖಿಂಪುರ ಖೇರಿ ಪ್ರಕರಣ : ಆಶಿಶ್ ಗುಂಡು ಹಾರಿಸಿದ್ದು ನಿಜ – ವಿಧಿವಿಜ್ಞಾನ ವರದಿಯಲ್ಲಿ ದೃಢ
“ನಮಗೆ ತೋರುವ ಸಂಗತಿಯೆಂದರೆ, ಈ ಎಸ್‌ಐಟಿ (ವಿಶೇಷ ತನಿಖಾ ತಂಡ) ಹಲವು ಪ್ರಕರಣಗಳ ನಡುವೆ ಈ ಪ್ರಕರಣವನ್ನು ಸ್ವತಂತ್ರವಾಗಿ ತನಿಖಾ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ನ್ಯಾಯಪೀಠ ಈ ಸಂದರ್ಭದಲ್ಲಿ ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ನ್ಯಾಯಪೀಠದ ಸಲಹೆಗೆ ಸಮ್ಮತಿಸಿದ್ದು, ಯಾವುದೇ ರಾಜ್ಯದಿಂದ ನ್ಯಾಯಾಧೀಶರನ್ನು ನೇಮಿಸಬಹುದು ಎಂದು ಹೇಳಿದರು.
ಲಖಿಂಪುರ ಖೇರಿ ಹಿಂಸಾಚಾರದ ಸಂದರ್ಭದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಒಟ್ಟು 13 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ.